

ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಿಢೀರ್ ಮುಂಬೈಗೆ ತೆರಳಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಅವರ ಈ ಅಚಾನಕ್ ಪ್ರವಾಸದ ಹಿಂದೆ ರಾಜಕೀಯ ಕಾರಣಗಳಿವೆಯೇ ಎಂಬ ಪ್ರಶ್ನೆಗಳು ಮೂಡತೊಡಗಿವೆ.
ಸದ್ಯ ರಾಜ್ಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಹಲವು ವಿಚಾರಗಳ ಕುರಿತು ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
ಈ ಸಂದರ್ಭದಲ್ಲಿ ರಾಜ್ಯಪಾಲರ ಮುಂಬೈ ಪ್ರವಾಸ ಮಹತ್ವ ಪಡೆದುಕೊಂಡಿದ್ದು, ವಿವಿಧ ರಾಜಕೀಯ ನಾಯಕರು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಆರಂಭಿಸಿದ್ದಾರೆ.
ಮೂಲಗಳ ಪ್ರಕಾರ, ಸಂಬಂಧಿಕರ ಅನಾರೋಗ್ಯದ ಕಾರಣ ನೀಡಿ ರಾಜ್ಯಪಾಲರು ರಾತ್ರಿ 11.45ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿದ್ದಾರೆಂದು ತಿಳಿದುಬಂದಿದೆ.
ರಾತ್ರಿ ಮುಂಬೈನಲ್ಲಿ ತಂಗಿರುವ ಅವರು, ಬೆಳಗ್ಗೆ ಇಂದೋರ್‌ಗೆ ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ. ಸಿಎಂ ರಾಜೀನಾಮೆ ಸಲ್ಲಿಕೆಯ ಸಮಯದಲ್ಲೇ ರಾಜ್ಯಪಾಲರ ಈ ದಿಢೀರ್ ಪ್ರವಾಸ ಹೊಸ ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿರುವ ಸಿದ್ದರಾಮಯ್ಯ (Siddaramaiah) ಅವರು ಇಂದು ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ಲೋಕಭವನ ಗುರುವಾರ ಬೆಳಗ್ಗೆ 11:30 ಕ್ಕೆ ಹಾಗೂ ಮಧ್ಯಾಹ್ನ 3 ಗಂಟೆಯ ನಂತರ ಭೇಟಿಗೆ ಅವಕಾಶವನ್ನೂ ಕಲ್ಪಿಸಿತ್ತು. ಸಿಎಂ ಭೇಟಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ರಾಜ್ಯಪಾಲರು ಮಧ್ಯರಾತ್ರಿಯೇ ರಾಜಧಾನಿ ತೊರೆದಿರುವುದು ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯಪಾಲರು ಇಂದೇ ಮುಂಬೈನಿಂದ ಮರಳಿ ಬರುತ್ತಾರಾ ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಒಂದು ವೇಳೆ ಮರಳಿ ಬಂದರೂ ಮಧ್ಯಾಹ್ನ 3 ಗಂಟೆಯ ನಂತರ ಸಿದ್ದರಾಮಯ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Advertisement