

ತುಮಕೂರು: ಗುಬ್ಬಿ ಕ್ಷೇತ್ರದಿಂದ ಸ್ವತಃ ತಾವೇ ಸ್ಪರ್ಧೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಘೋಷಿಸಿದ್ದಾರೆ. ಜಿಲ್ಲೆಯ ಗುಬ್ಬಿ ಕ್ಷೇತ್ರದ ಬಿಜೆಪಿಯ 2 ಬಣಗಳ ಆಂತರಿಕ ಕಲಹ ವಿಜಯೇಂದ್ರ ಸಮ್ಮುಖದಲ್ಲೇ ಸ್ಫೋಟಗೊಂಡಿತು.
ಇದರಿಂದ ಆಕ್ರೋಶಗೊಂಡ ವಿಜಯೇಂದ್ರ, ಇದೇ ರೀತಿ ಮುಂದುವರಿದರೆ ನಾನೇ ಗುಬ್ಬಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಸ್ಥಳೀಯ ನಾಯಕರ ನಡುವಿನ ಭಿನ್ನಾಭಿಪ್ರಾಯ ತಿಳಿಯಾಗದಿದ್ದರೆ ತಾವೇ ಇಲ್ಲಿಂದ ಸ್ಪರ್ಧಿಸುವುದಾಗಿ ಘೋಷಿಸಿದರು. ಈ ಹೇಳಿಕೆ ಈಗ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ ಡಿ ದಿಲೀಪ್ ಕುಮಾರ್ ಸ್ಪರ್ಧಿಸಿದ್ದರು. ಸದ್ಯ ಇನ್ನೋರ್ವ ಟಿಕೆಟ್ ಆಕಾಂಕ್ಷಿಯಾಗಿ ಗ್ಯಾಸ್ ಚಂದ್ರಶೇಖರ್ ಬಾಬು ಇದ್ದಾರೆ. ಗ್ಯಾಸ್ ಬಾಬು ಭಾಷಣ ಮಾಡುವಾಗ ದಿಲೀಪ್ ಕುಮಾರ್ ಹೆಸರನ್ನು ಹೇಳದಿರುವುದೇ ಗಲಾಟೆಗೆ ಕಾರಣವಾಗಿದ್ದು, ತಮ್ಮ ನಾಯಕನ ಹೆಸರು ಹೇಳುವಂತೆ ಬೆಂಬಲಿಗರು ಬಾಬು ಅವರಿಗೆ ತಾಕೀತು ಮಾಡಿದರು.
ಇಷ್ಟಕ್ಕೆ ಸುಮ್ಮನಾಗದೆ ನೀನು ಭಾಷಣ ಮಾಡಬಾರದು ಎಂದು ರೊಚ್ಚಿಗೆದ್ದು ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡು ವೇದಿಕೆಯಿಂದ ಕೆಳಕ್ಕೆ ಬಂದ ಬಾಬು, ದಿಲೀಪ್ ಬೆಂಬಲಿಗರ ನಡುವೆ ವಾಗ್ವಾದಕ್ಕಿಳಿದರು ಎಂದು ತಿಳಿದುಬಂದಿದೆ.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಿ ವೈವಿಜಯೇಂದ್ರ ಅವರು ವಾತಾವರಣವನ್ನು ತಿಳಿಗೊಳಿಸಿದರು. ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪಕ್ಷದೊಳಗಿನ ಆಂತರಿಕ ಜಗಳ ಮತ್ತು ಭಿನ್ನಾಭಿಪ್ರಾಯಗಳೇ ಅಡ್ಡಿಯಾಗಿವೆ. ಮುಖಂಡರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು ಎಂದು ಎಚ್ಚರಿಕೆ ನೀಡಿದರು.