ಮಾನವ ಕಂಪ್ಯೂಟರ್!

ನಿಮ್ಮೊಡನೆ ಸಂವಹನ ಮಾಡುವ ಅಥವಾ ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಕಂಪ್ಯೂಟರ್‌ನ್ನು ಇಂಟೆಲ್ ಅಭಿವೃದ್ಧಿಪಡಿಸುತ್ತಿದೆ...
ಮಾನವ ಕಂಪ್ಯೂಟರ್!
Updated on: 

ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಎ ಕಂಪ್ಯೂಟರ್!
'ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಎ ಕಾಪಿ' ಎಂಬ ಸ್ಲೋಗನ್ ಕೇಳಿರುತ್ತೀರಿ. ಕಾಫಿ ಡೇನಲ್ಲಿ ಕೂತು ಒಂದು ಲೋಟ ಕಾಫಿ ಸೇವಿಸುವಷ್ಟರಲ್ಲಿ 'ಎ ಲಾಟ್ ಕ್ಯಾನ್ ಹ್ಯಾಪನ್‌' ಎಂಬರ್ಥದಲ್ಲಿ ಕಾಫಿ ಡೇ ಕಂಪನಿ ಪ್ರಾರಂಭವಾಯಿತು. ಈಗ ಇಂತಹುದೇ ವಿಚಾರಕ್ಕೆ ಇಂಟೆಲ್ ಸಂಸ್ಥೆ ಕೈಹಾಕಿದೆ. ನಿಮ್ಮೊಡನೆ ಸಂವಹನ ಮಾಡುವ ಅಥವಾ ನಿಮ್ಮ ಭಾವನೆಗಳಿಗೆ ಸ್ಪಂದಿಸುವ ಕಂಪ್ಯೂಟರ್‌ನ್ನು ಇಂಟೆಲ್ ಅಭಿವೃದ್ಧಿಪಡಿಸುತ್ತಿದೆ.
ಟಚ್ ಸ್ಕ್ರೀನ್ ಮೊಬೈಲ್‌ಗಳು ಬಂದಾಗಲೇ ಜನರು ಬೆರಗುಗೊಂಡಿದ್ದರು. ಆ ಮೇಲೆ ಟಚ್ ಸ್ಕ್ರೀನ್ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ಗಳು ಬಂದಾಗ ಕಂಪ್ಯೂಟರ್ ಬಳಕೆದಾರರ ಖುಷಿಗೆ ಎಲ್ಲೆ ಇರಲಿಲ್ಲ. ಒಂದು ಕಾಲದಲ್ಲಿ ಕಂಪ್ಯೂಟರ್ ಮೌಸ್ ಮೂಲಕ ಜಗತ್ತು ಆಡಿಸುತ್ತೇನೆ ಎಂದು ಹೇಳುತ್ತಿದ್ದೆವು. ಅದು ಬದಲಾಗಿ ಬೆರಳ ತುದಿಯಲ್ಲಿಯೇ ಜಗತ್ತು ಆಡಿಸುವ, ನೋಡುವ ಅವಕಾಶ ಬಂತು. ಆದರೆ ಈಗ ಕೇವಲ ನಿಮ್ಮ ಹಾವ-ಭಾವಗಳನ್ನೇ ನೋಡಿ ಕಂಪ್ಯೂಟರ್ ಕೆಲಸ ಮಾಡಿದರೆ? ನಿಮ್ಮ ಕಣ್ಸನ್ನೆಗಳನ್ನು ಗಮನಿಸಿ ಕಂಪ್ಯೂಟರ್ ಕಾರ್ಯ ನಿರ್ವಹಿಸಿದರೆ? ನೀವು ದೂರ ನಿಂತು ತೋರು ಬೆರಳಿನಲ್ಲಿ ಸಂಕೇತ ತೋರಿಸಿರುವುದಕ್ಕೇನೇ ಕಂಪ್ಯೂಟರ್ ಕಾರ್ಯಪ್ರವೃತ್ತಗೊಂಡರೆ?
ಹೌದು. ಇಂತಹ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಇಂಟೆಲ್ ಸಂಸ್ಥೆ ಬ್ಯುಸಿಯಾಗಿದೆ. ಇನ್ನೆರಡು ವರ್ಷದೊಳಗೆ ಇಂಥ ಗೆಸ್ಚರ್ ಕಂಪ್ಯೂಟರ್‌ಗಳು ಮಾರುಕಟ್ಟೆಗೆ ಬರಲಿವೆ. ಈ ವಿಚಾರವನ್ನು ಇಂಟೆಲ್ ಸಂಸ್ಥೆಯೇ ಬಹಿರಂಗಪಡಿಸಿದೆ. ಇದನ್ನು 'ಪರ್ಸೆಪ್ಚುವಲ್ ಟೆಕ್ನಾಲಜಿ' ಎಂದು ಸಂಸ್ಥೆ ಹೇಳಿದೆ.
ಮೊಬೈಲ್ ತಂತ್ರಜ್ಞಾನದಲ್ಲಿ ಈಗಾಗಲೇ ಇದರ ಸಣ್ಣ ಮುಖ ಅನಾವರಣವಾಗಿದೆ. ಆದರೆ ಬಿಗ್ ಸ್ಕ್ರೀನ್‌ನಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಕೌತುಕವಿದೆ.
ಕಳೆದ ಜುಲೈನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್-4 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದಿದ್ದಾಗ ಅದರ ಫೀಚರ್ಸ್‌ಗಳು ಕಣ್ಣು ಕುಕ್ಕುವಂತಿದ್ದವು. ಏರ್ ಗೆಸ್ಚರ್‌ನಿಂದ ಎಸ್-4 ಮತ್ತಷ್ಟು ಸ್ಮಾರ್ಟ್ ಆಗಿತ್ತು.  ಫೋಟೋಗಳನ್ನು ನೋಡುವಾಗ ಸ್ಕ್ರೀನ್ ಮುಟ್ಟುವ ಅವಶ್ಯಕತೆಯಿರಲಿಲ್ಲ. ಬದಲಾಗಿ ಮೊಬೈಲ್ ಮೇಲೆ ಕೈ ಆಡಿಸಿದರೆ ಫೋಟೋ ಬದಲಾಗುತ್ತಿತ್ತು. ಹಾಗೆಯೇ ವಿಡಿಯೋ ನೋಡುವಾಗಲೂ ದೃಷ್ಟಿಯನ್ನು ಸ್ಕ್ರೀನ್‌ನಿಂದ ಪಕ್ಕಕ್ಕೆ ಸರಿಸಿದರೆ ಪ್ಲೇ ಆಗುತ್ತಿರಲಿಲ್ಲ.  ಇದಕ್ಕೂ ಮುಂಚೆ ಆ್ಯಪಲ್ 4ಎಸ್ ಫೋನ್‌ನಲ್ಲಿ ಸಿರಿ ಎಂಬ ಅಪ್ಲಿಕೇಷನ್ ಬಿಡಲಾಗಿತ್ತು. ಬಳಕೆದಾರರು ಹೇಳಿದ ಕೆಲಸವನ್ನು ಅದು ಮಾಡುತ್ತಿತ್ತು. ಆದರೆ ಕೆಲವು ವಿಚಾರಕ್ಕೆ ಅದು ಸೀಮಿತವಾಗಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಆ್ಯಂಡ್ರಾಯ್ಡ್ ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ವಾಯ್ಸ್ ಸರ್ಚ್ ಎಂಬ ಅಪ್ಲಿಕೇಷನ್ ನೀಡಲಾಗಿದೆ. ಇದರಲ್ಲಿ ನಿಮ್ಮ ಮೊಬೈಲ್‌ನಲ್ಲಿ ಸೇವ್ ಆಗಿರುವ ಕಾಂಟಾಕ್ಟ್‌ಗಳಿಗೆ ನೇರವಾಗಿ ಎಸ್‌ಎಂಎಸ್, ಕರೆ ಮಾಡಬಹುದು. ಇದಲ್ಲದೇ ಗೂಗಲ್ ಸರ್ಚ್ ಕೂಡ ವಾಯ್ಸ್ ಕಮಾಂಡ್ ಮೇಲೆಯೇ ಮಾಡಬಹುದಾಗಿದೆ.
ಇವೆಲ್ಲ ತಂತ್ರಜ್ಞಾನಗಳ ಸಮ್ಮಿಲನ ಹಾಗೂ ಇನ್ನಷ್ಟು ಅಭಿವೃದ್ಧಿಯೇ ಇಂಟೆಲ್‌ನ ಗೆಸ್ಚರ್ ಕಂಪ್ಯೂಟರ್!

ಶಾರ್ಟ್‌ಕಟ್ ಸಂಕೇತ!
ಇಂದು ನಮ್ಮ ಮೊಬೈಲ್‌ಗಳಲ್ಲಿರುವ ಸೆನ್ಸಾರ್ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಕಂಪ್ಯೂಟರ್‌ನಲ್ಲಿ ಅಳವಡಿಸಲಾಗುತ್ತಿದೆ. ಈ ಮೂಲಕ ಏರ್ ಗೆಸ್ಚರ್‌ಗಳನ್ನು ಸುಲಭವಾಗಿ ಕಂಪ್ಯೂಟರ್ ಅರಿಯಬಹುದಾಗಿದೆ.
ಇನ್ನು ಕಣ್ಣಿನ ಚಲನವಲನ, ಕೈ ಸನ್ನೆ ಹಾಗೂ ಬಾಡಿ ಲ್ಯಾಂಗ್ವೇಜ್ ಅನ್ನು ಗುರುತಿಸಿ ಕಂಪ್ಯೂಟರ್ ತನ್ನ ಕೆಲಸವನ್ನು ಕಮಾಂಡ್ ಮಾಡುತ್ತದೆ. ಈ ತಂತ್ರಜ್ಞಾನವು ಫೇಸ್ ಹಾಗೂ ವಾಯ್ಸ್ ಡಿಟೆನ್ಷನ್ ಜತೆಗೆ ಗೆಸ್ಚ್‌ರ್ ಆಧಾರಿತವಾಗಿ ಕೆಲಸ ಮಾಡಲಿದೆ.
ಇನ್ನು ಗೆಸ್ಚರ್ ಆಧಾರಿತ ತಂತ್ರಜ್ಞಾನವನ್ನು ಇನ್ನಷ್ಟು ವ್ಯವಸ್ಥಿತಗೊಳಿಸಲು ಸಂಸ್ಥೆ ನಿರ್ಧರಿಸಿದೆ. ನಮ್ಮ ಕೈನ 10 ಬೆರಳುಗಳ ಸಂಜ್ಞೆಗಳನ್ನು ಗುರುತಿಸುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಇವುಗಳಿಗೆಲ್ಲ ಒಂದು ಶಾರ್ಟ್‌ಕಟ್ ಸಂಕೇತಗಳನ್ನು ನೀಡಲಾಗುತ್ತದೆ. ಇದೇ ಆಧಾರದ ಮೇಲೆ ಕಂಪ್ಯೂಟರ್ ಕಮಾಂಡಿಂಗ್ ರೂಪಿಸಲಾಗುತ್ತದೆ.
ಉದಾಹರಣೆಗೆ ಕಂಪ್ಯೂಟರ್ ಎದುರು ನಿಂತು ಸ್ಕ್ರೀನ್ ಅಥವಾ ಮೌಸ್ ಮುಟ್ಟದೆಯೇ ನೀವು ಫೋಟೋಗಳನ್ನು ಝೂಮ್ ಇನ್, ಝೂಮ್ ಔಟ್ ಮಾಡಬಹುದು. ಗೇಮ್ ಆಡುವಾಗ ಕೀ ಬೋರ್ಡ್ ಅಥವಾ ಸ್ಕ್ರೀನ್ ಮುಟ್ಟುವ ಅಗತ್ಯ ಬರದಿರಬಹುದು.
ಇಂಟೆಲ್ ಸಂಸ್ಥೆ ಹೇಳಿಕೊಳ್ಳುವಂತೆ, ಕಂಪ್ಯೂಟರ್‌ನ್ನು ಹೆಚ್ಚೆಚ್ಚು ಮಾನವನ ರೀತಿ ಮಾಡುವುದು ಅವರ ಗುರಿಯಂತೆ. ಮಾನವನ ಭಾವನೆಗಳನ್ನು ಅರಿಯಲು ಪ್ರಾರಂಭಿಸಿದರೆ ಕಂಪ್ಯೂಟರ್ ಕ್ಷೇತ್ರದಲ್ಲಿ 'ಎ ಲಾಟ್ ಕ್ಯಾನ್ ವಂಡರಫುಲ್ ಹ್ಯಾಪನ್‌' ಎಂದು ಸಂಸ್ಥೆ ಹೇಳಿಕೊಂಡಿದೆ.

ಗಾಳಿಯಲ್ಲಿ ಸನ್ನೆ!
ಮೈಕ್ರೋಸಾಫ್ಟ್ ಕಂಪನಿಯು ವಿಂಡೋಸ್-8ನ್ನು ಮಾರುಕಟ್ಟೆಗೆ ಬಿಟ್ಟ ಮೇಲೆ ಟಚ್ ಸ್ಕ್ರೀನ್ ಕಂಪ್ಯೂಟರ್‌ಗಳ ಬೇಡಿಕೆ ಹೆಚ್ಚಾಗುತ್ತಾ ಸಾಗಿತು. ಇಂಟೆಲ್ ಸಂಸ್ಥೆಯು ತನ್ನ ಪ್ರೊಸೆಸರ್‌ಗಳನ್ನು ಅಷ್ಟು ಅಭಿವೃದ್ಧಿಪಡಿಸುತ್ತಿಲ್ಲ ಎಂದು ಬಹಿರಂಗವಾಗಿಯೇ ಕೆಲ ಆರೋಪಗಳು ಮೈಕ್ರೋಸಾಫ್ಟ್‌ನಿಂದ ಕೇಳಿಬಂದವು. ಅಂತೂ ಬದಲಾವಣೆಗೆ ಇಂಟೆಲ್ ಮನಸು ಮಾಡಿದೆ. ಸೆನ್ಸಾರ್ ಹಾಗೂ 3-ಡಿ ಕ್ಯಾಮರಾ ತಂತ್ರಜ್ಞಾನದ ಮೂಲಕ ನೂತನ ಪ್ರೊಸೆಸರ್‌ಗಳನ್ನು ಇಂಟೆಲ್ ತಯಾರಿಸುತ್ತಿದೆ. ಇದು ಕಂಪ್ಯೂಟರ್ ತಂತ್ರಜ್ಞಾನದ ಮತ್ತೊಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ.

- ರಾಧೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com