

ಮೊದಲು ಮನೆಯಲ್ಲಿ ಗಡಿಯಾರ ಹಾಗೂ ಕ್ಯಾಲೆಂಡರ್ ತೂಗಿಹಾಕಲು ಮಾತ್ರ ಮೊಳೆ ಹೊಡೆಯುತ್ತಿದ್ದರು. ಈಗ ಟಿವಿಯನ್ನು ಗೋಡೆಯ ಮೇಲೆ ತೂಗಿಹಾಕುವ ಕಾಲ.
ಟೆಲಿವಿಷನ್ ಅಂಗಡಿಗಳಿಗೆ ಕಾಲಿಟ್ಟರೆ ಯಾವುದನ್ನು ಖರೀದಿಸಬೇಕು ಎಂದು ನಿರ್ಧರಿಸಲೇ ಸಾಧ್ಯವಾಗದಷ್ಟು ಆಯ್ಕೆಗಳು ನಮ್ಮೆದುರಿಗಿರುತ್ತವೆ. ಆ ಸಮಯದಲ್ಲಿ ಹಾಗೂ ಆ ಅಂಗಡಿಯ ವಿಸ್ತೀರ್ಣದಲ್ಲಿ ಚೆಂದ ಕಾಣುವ ಟಿವಿಯನ್ನು ಖರೀದಿಸಿ ಮನೆಗೆ ತಂದರೆ ನಮ್ಮ ಮನೆಯ ಗೋಡೆಗೆ ಅದು ಹಿಡಿಸದೇ ಇರಬಹುದು, ಅಥವಾ ಮನೆಯ ಹಾಲ್‌ಗೆ ನಾವು ಖರೀದಿಸಿದ ಟಿವಿ ಸಣ್ಣದು ಇಲ್ಲವೇ ದೊಡ್ಡದಾಗಬಹುದು. ಇದಕ್ಕಾಗಿ ಟಿವಿ ಖರೀದಿಸುವ ಮುನ್ನ ನಾವು ವೀಕ್ಷಿಸುವ ಚಾನೆಲ್, ಟಿವಿ ಹಾಲ್‌ನ ವಿಸ್ತೀರ್ಣ, ಲಭ್ಯವಿರುವ ಡಿವಿಡಿ ಪ್ಲೇಯರ್ಸ್ ಎಲ್ಲವನ್ನೂ ಆಲೋಚಿಸಬೇಕು. ಇಲ್ಲವಾದಲ್ಲಿ ಸಾವಿರಾರು ರುಪಾಯಿಗಳನ್ನು ಹೂಡಿಕೆ ಮಾಡಿ ಬೇಸರಪಡಬೇಕಾಗುತ್ತದೆ.
ಟಿವಿ ಖರೀದಿಸುವ ಮುನ್ನ ನಿಮಗೊಂದಿಷ್ಟು ಟಿಪ್ಸ್‌ಗಳು.
ಪಿಕ್ಸಲ್ ಬಗ್ಗೆ ಗಮನ
ಎಲ್‌ಇಡಿ ಹಾಗೂ ಎಲ್‌ಸಿಡಿ ಟಿವಿ ಮಾರುಕಟ್ಟೆಯಲ್ಲಿ 576 ಪಿಯಿಂದ 1080 ಪಿವರೆಗಿನ ಟಿವಿಗಳು ಲಭ್ಯವಿವೆ. ಇದಕ್ಕೂ ಹೆಚ್ಚಿನ ರೆಸಲ್ಯೂಷನ್ ಹೊಂದಿರುವ ಟಿವಿಗಳು ಲಭ್ಯವಿದ್ದರೂ ಅದಕ್ಕೆ ಹೊಂದಿಕೊಳ್ಳುವ ಪ್ರಸಾರ ವ್ಯವಸ್ಥೆ ಹಾಗೂ ಡಿವಿಡಿ ತಂತ್ರಜ್ಞಾನ ಇನ್ನೂ ಸಿಗುತ್ತಿಲ್ಲ. ಪಿ ಎಂದರೆ ಪ್ರೊಗ್ರೆಸ್ಸಿವ್ ಸ್ಕ್ಯಾನ್. ಪ್ರತಿ ಸೆಕೆಂಡ್‌ಗೆ ಕಾಣಿಸುವ ಫ್ರೇಮ್‌ಗಳ ಲೆಕ್ಕಾಚಾರವಿದು.
ಇನ್ನು ಟಿವಿ ಖರೀದಿಸುವಾಗ ಕೇವಲ ಟಿವಿಯ ಗಾತ್ರವನ್ನಷ್ಟೇ ನೋಡಬೇಡಿ. ಆ ಗಾತ್ರಕ್ಕೆ ಸಮನಾಗಿ ಟಿವಿಯ ರೆಸಲ್ಯೂಷನ್ ಕೂಡ ಪರಿಶೀಲಿಸಿದರೆ ಉತ್ತಮ. ಕೆಲ ಕಂಪನಿಗಳ ಟಿವಿಯ ಗಾತ್ರ ದೊಡ್ಡದಿದ್ದರೂ ರೆಸಲ್ಯೂಷನವ್ ಪ್ರಮಾಣ ಕಡಿಮೆಯಿದೆ. ಇದರಿಂದ ವೀಕ್ಷಕರಿಗೆ ದೊಡ್ಡ ಟಿವಿ ವೀಕ್ಷಣೆಯ 'ಫೀಲ್' ಸಿಗದೇ ಇರಬಹುದು. ಮೊದಲೆಲ್ಲ ಟಿವಿಯ ಪಿಕ್ಸಲ್‌ಗಳು 3 ಲಕ್ಷಕ್ಕೆ ಸೀಮಿತವಾಗಿತ್ತು. ಇಂದು 20 ಲಕ್ಷದಿಂದ ಸುಮಾರು 30 ಲಕ್ಷದವರೆಗಿನ ಪಿಕ್ಸಲ್ ಹೊಂದಿರುವ ಟಿವಿ ಸಿಗುತ್ತದೆ. ಪಿಕ್ಸಲ್ ಸಂಖ್ಯೆ ಹೆಚ್ಚಿದಷ್ಟೂ ಚಿತ್ರದ ಗುಣಮಟ್ಟ ಹೆಚ್ಚುತ್ತದೆ.
ಪ್ರಚಲಿತ ಟಿವಿಗಳಲ್ಲಿ 1080ಪಿ ಹೆಚ್ಚು ಖ್ಯಾತಿ ಹೊಂದಿದೆ. ಇದು ಟಿವಿಯ ರೆಸಲ್ಯೂಷನ್ ಆಗಿದ್ದು, ಸ್ವಲ್ಪ ಕಡಿಮೆ ಗುಣಮಟ್ಟದ ಸೋರ್ಸ್ ವಿಡಿಯೋಗಳ ಗುಣಮಟ್ಟವನ್ನು ಹೆಚ್ಚಿಸುವ ಗುಣವನ್ನು ಇದು ಹೊಂದಿದೆ. ಬ್ಲ್ಯೂ ರೇ ಡಿವಿಡಿಗಳು ಹಾಗೂ ವಿಡಿಯೋ ಗೇಮ್‌ಗಳನ್ನು ಹೆಚ್ಚು ಬಳಸುವ ಗ್ರಾಹಕರು 1080 ಪಿ ರೆಸಲ್ಯೂಷನ್ ಟಿವಿ ಕಡೆಗೆ ಗಮನ ನೀಡಬಹುದು.
ನವೀಕರಣ
ಟಿವಿ ಖರೀದಿಸುವ ಮುಂಚೆ ನಿಮ್ಮ ಬಜೆಟ್ ಬಗ್ಗೆ ಕೊಂಚ ಆಲೋಚಿಸಿ. ದೊಡ್ಡ ಸ್ಕ್ರೀನ್‌ಗಳ ಖರೀದಿಯೊಂದಿಗೆ ಎಲ್ಲವೂ ಮುಗಿಯುವುದಿಲ್ಲ. ಅದರ ಜತೆಗೆ ಎಲ್‌ಇಡಿ, ಎಲ್‌ಸಿಡಿ ಹಾಗೂ ಪ್ಲಾಸ್ಮಾ ಟಿವಿಗಳಿಗೆ ತಕ್ಕಂತೆ ಡಿವಿಡಿ ಪ್ಲೇಯರ್, ಸೌಂಡ್ ಸಿಸ್ಟಮ್ ಹಾಗೂ ಸೆಟಪ್ ಬಾಕ್ಸ್‌ಗಳನ್ನು ಹೊಂದಿರಬೇಕಾಗುತ್ತದೆ.
ದೊಡ್ಡ ಸ್ಕ್ರೀನ್‌ನ ಟಿವಿಗಳನ್ನು ಖರೀದಿಸಿ ಮನೆಯಲ್ಲಿ ಕೆಲವರು ಕೇಬಲ್ ಸಂಪರ್ಕವನ್ನೇ ಮುಂದುವರೆಸುತ್ತಾರೆ. 'ಯಾವ ಟಿವಿಯಲ್ಲಿ ನೋಡಿದ್ರೂ ಒಂದೇ ಮಾರಾಯಾ... ದೊಡ್ಡ ಟಿವಿಯಲ್ಲಿ ಸರಿಯಾಗಿ ಕಾಣಿಸುವುದೇ ಇಲ್ಲ, ನೋಡಲು ಬೇಸರ...' ಎಂದು ಬಳಿಕ ರಾಗ ಎಳೆಯುತ್ತಾರೆ. ಅದಕ್ಕಾಗಿ ದೊಡ್ಡ ಟಿವಿ ಖರೀದಿಸುವುದಷ್ಟೇ ನಿಮ್ಮ ಆಯ್ಕೆಯಾಗಬಾರದು. ಅದಕ್ಕೆ ತಕ್ಕಂತೆ ಡಿಟಿಎಚ್ ಅಥವಾ ಬೇರೆ ರೀತಿಯ ಸೆಟಪ್ ಬಾಕ್ಸ್‌ಗಳನ್ನು ಖರೀದಿಸಬೇಕು. ಇಲ್ಲವಾದಲ್ಲಿ ಲಕ್ಷಗಟ್ಟಲೇ ಕೊಟ್ಟು ಎಲ್‌ಇಡಿ ಟಿವಿ ಖರೀದಿಸಿದರೂ ಸ್ಕ್ರೀನ್‌ನಲ್ಲಿ ಬರುವವರ ಮುಖ ಗುರುತಿಸುವುದು ಕಷ್ಟವಾಗುತ್ತದೆ. ಸೆಟಪ್ ಬಾಕ್ಸ್‌ನಲ್ಲಿ ಎಷ್ಟು ಎಚ್‌ಡಿ ಚಾನೆಲ್‌ಗಳು ಬರುತ್ತವೆ ಎಂಬ ಬಗ್ಗೆಯೂ ಗಮನವಿಟ್ಟುಕೊಳ್ಳಬೇಕು. ಇದಲ್ಲದೇ ಮಾರುಕಟ್ಟೆಯಲ್ಲಿ ಸಿಡಿ ಅಥವಾ ಡಿವಿಡಿಗಳನ್ನು ಖರೀದಿಸುವಾಗ ಅದು ಬ್ಲ್ಯೂ ರೇ ಅಥವಾ ಎಚ್‌ಡಿ ಸೌಲಭ್ಯ ಹೊಂದಿದೆಯೇ ಎಂದು ನೋಡಲೇಬೇಕು. ಸಾಮಾನ್ಯ ಸಿಡಿಗಳನ್ನು ಇದರಲ್ಲಿ ವೀಕ್ಷಿಸಿದರೆ ಇರಿಟೇಟ್ ಆಗುತ್ತದೆ.
ಶಬ್ದ ವ್ಯವಸ್ಥೆಯೂ ಮುಖ್ಯ
ಎಲ್ಲ ಟಿವಿಗಳಿಗೂ ಇನ್‌ಬಿಲ್ಟ್ ಆಗಿಯೇ ಸೌಂಡ್‌ಬಾಕ್ಸ್‌ಗಳಿರುತ್ತವೆ. ಆದರೆ ಮಿನಿ ಥಿಯೇಟರ್ ಎಂದೇ ಕರೆಯಿಸಿಕೊಳ್ಳುವ ದೊಡ್ಡ ಗಾತ್ರದ ಟಿವಿಗಳಿಗೆ ಅದಕ್ಕೆ ತಕ್ಕನಾಗಿ ಸೌಂಡ್ ಸಿಸ್ಟಮ್ ಕೂಡ ಇರಬೇಕು. 5.1 ಅಥವಾ 7.1 ಚಾನೆಲ್ ಸ್ಪೀಕರ್ ಇದ್ದರೆ ಉತ್ತಮ. ವೀಕ್ಷಕರ ಎದುರು ಹಾಗೂ ಹಿಂಬದಿಯ ಎಡ, ಬಲ ಮತ್ತು ಮಧ್ಯದಲ್ಲಿ ಸ್ಪೀಕರ್ ಅಳವಡಿಸಿದರೆ ಸ್ಟೇಡಿಯಂ ಎಫೆಕ್ಟ್ ಪಡೆಯಲು ಸಾಧ್ಯವಿದೆ. ಆಗ ಅಕ್ಷರಶಃ ನಿಮ್ಮ ಮನೆಯ ಟಿವಿ ಹಾಲ್ ಮಿನಿ ಥಿಯೇಟರ್ ಆಗುತ್ತದೆ.
ಪ್ಲಾಸ್ಮಾ, ಎಲ್‌ಇಡಿ ಹಾಗೂ ಎಲ್‌ಸಿಡಿ ಟಿವಿಯ ಪ್ರಯೋಜನಗಳು
ಪ್ಲಾಸ್ಮಾ
42 ಇಂಚಿನಿಂದ 100 ಇಂಚಿನ ಟಿವಿ ಲಭ್ಯ
ಎಲ್‌ಸಿಡಿ ಟಿವಿಗಳಿಗಿಂತ ಹೆಚ್ಚು ಕಾಂಟ್ರಾಸ್ಟ್‌ನಲ್ಲಿ ಲಭ್ಯ
ಟಿವಿಯ ಎಡ-ಬಲ ಪಕ್ಕದಿಂದಲೂ ವೀಕ್ಷಿಸಬಹುದು.
ಎಲ್‌ಸಿಡಿ
ಉಳಿದ ಟಿವಿ ತಂತ್ರಜ್ಞಾನಕ್ಕೆ ಹೋಲಿಸಿದರೆ ಕಡಿಮೆ ಕಾಂಟ್ರಾಸ್ಟ್
15 ಇಂಚಿನಿಂದ 55 ಇಂಚಿನವರೆಗೆ ಲಭ್ಯ
ಹೆಚ್ಚು ವಿದ್ಯುತ್ ಕ್ಷಮತೆ
ಎಲ್‌ಇಡಿ
3 ಸೆಂ.ಮೀಗೂ ಕಡಿಮೆ ದಪ್ಪದ ಟಿವಿ
ಎಲ್‌ಸಿಡಿ ಟಿವಿ ಗಾತ್ರದಲ್ಲೇ ಲಭ್ಯ
ಪ್ಲಾಸ್ಮಾ ಹಾಗೂ ಎಲ್‌ಸಿಡಿ ಟಿವಿಗಳಿಗಿಂತ ಕಡಿಮೆ ತೂಕ ಹಾಗೂ ಹೆಚ್ಚಿನ ಕಾಂಟ್ರಾಸ್ಟ್
ಮಾರುಕಟ್ಟೆಯಲ್ಲಿ ಲಭ್ಯ ಟಿವಿಗಳಲ್ಲಿ ಹೆಚ್ಚು ವಿದ್ಯುತ್ ಕ್ಷಮತೆ
ನಿರೀಕ್ಷಿತ ಒಎಲ್‌ಇಡಿ
2013ರ ಬಹು ನಿರೀಕ್ಷಿತ ಅಚ್ಚರಿಯಲ್ಲಿ ಒಎಲ್‌ಇಡಿ ಟಿವಿ ಕೂಡ ಒಂದು. ಆರ್ಗೆನಿಕ್ ಲೈಟ್ ಎಮಿಟಿಂಗ್ ಡಿಯೋಡ್ಸ್ ತಂತ್ರಜ್ಞಾನದಲ್ಲಿ ಈ ಟಿವಿ ರೂಪಗೊಳ್ಳುತ್ತಿದೆ. ಕೇವಲ 0.33 ಮಿ.ಮೀ ದಪ್ಪದಲ್ಲಿ ಇದು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, 3.50 ಕೆಜಿ ಇರಬಹುದು ಎಂದು ಹೇಳಲಾಗುತ್ತಿದೆ. ಎರಡು ತೆಳ್ಳನೆಯ ಕಂಡಕ್ಟರ್‌ಗಳ ಮಧ್ಯೆ ಕಾರ್ಬನ್ ಆರ್ಗೆನಿಕ್‌ಗಳನ್ನು ಹಾಯಿಸಲಾಗುತ್ತದೆ. ಇದರಿಂದ ವಿದ್ಯುತ್ ಕ್ಷಮತೆಯೂ ಕಡಿಮೆ ಇರಲಿದ್ದು, ಪ್ರತಿ ಪಿಕ್ಸಲ್ ಕೂಡ ಲೈಟ್ ಎಮಿಂಟಿಂಗ್ ಡಿಯೋಡ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಕಡಿಮೆ ವಿದ್ಯುತ್‌ನಲ್ಲಿ ಹೆಚ್ಚಿನ ರೆಸಲ್ಯೂಷನ್ ದೊರೆಯಲಿದೆ. ಅದಲ್ಲದೇ 180 ಡಿಗ್ರಿಯ ವೀಕ್ಷಣಾ ಸೌಲಭ್ಯವೂ ದೊರೆಯಲಿದೆ. ದಕ್ಷಿಣ ಕೊರಿಯಾದಲ್ಲಿ ಈಗಾಗಲೇ ಸೋನಿ, ಸ್ಯಾಮಸ್‌ಂಗ್ ಹಾಗೂ ಎಲ್‌ಜಿ ಕಂಪನಿಗಳು ಬಿಡುಗಡೆ ಮಾಡಿದ್ದು ಅಮೆರಿಕದಲ್ಲಿ ಸದ್ಯದಲ್ಲಿಯೇ ಮಾರುಕಟ್ಟೆಗೆ ಬರುತ್ತಿದೆ. ಇದರ ಬೆಲೆ ಸುಮಾರು 12 ಸಾವಿರ ಡಾಲರ್‌ಗಳಿರುವ ಅಂದಾಜಿದೆ. ವರ್ಷಾಂತ್ಯದೊಳಗೆ ಭಾರತದ ಮಾರುಕಟ್ಟೆಗೆ ಒಎಲ್‌ಇಡಿ ಟಿವಿ ಬರುವ ಸಾಧ್ಯತೆಯಿದೆ.
3ಡಿ ಟಿವಿ
3ಡಿ ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಪ್ರಸಾರ ವ್ಯವಸ್ಥೆ ಇನ್ನೂ 3ಡಿಗೆ ಸ್ಥಿತ್ಯಂತರವಾಗಿಲ್ಲ. ಈ ಸಂಬಂಧ ತಂತ್ರಜ್ಞಾನ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಭವಿಷ್ಯದಲ್ಲಿ 3ಡಿ ಸೆಟಪ್ ಬಾಕ್ಸ್‌ಗಳು ಮಾರುಕಟ್ಟೆಗೆ ಬರಬಹುದು. ಈಗ ನೀವು 3ಡಿ ಟಿವಿ ಖರೀದಿಸಿದರೆ ಡಿವಿಡಿಗಳ ಮೂಲಕ ಮಾತ್ರ ವೀಕ್ಷಿಸಬಹುದು. ಉಳಿದಂತೆ ಸಾಮಾನ್ಯ ಚಾನೆಲ್‌ಗಳು 2ಡಿಯಲ್ಲಿಯೇ ಇರುತ್ತವೆ. 3ಡಿ ಡಿವಿಡಿಗಳ ವೀಕ್ಷಣೆಗೆ ಆ ಸೌಲಭ್ಯವಿರುವ ಡಿವಿಡಿ ಪ್ಲೇಯರ್ ಕೂಡ ಅನಿವಾರ್ಯ. ಎಲ್‌ಇಡಿ, ಎಲ್‌ಸಿಡಿ ಹಾಗೂ ಪ್ಲಾಸ್ಮಾ ಮಾದರಿಯಲ್ಲಿ 3ಡಿ ಟಿವಿಯನ್ನು ಕೇವಲ ಸ್ಯಾಮ್‌ಸಂಗ್ ಕಂಪನಿ ಮಾರುಕಟ್ಟೆಗೆ ತಂದಿದೆ.
- ರಾಧೆ