

ಮೊಬೈಲ್ ವೈರಸ್ಗಳಿಗೂ ಮಾರುಕಟ್ಟೆಯಿದೆ!
ನಂಬುವುದು ಕಷ್ಟವಾದರೂ ಮೊಬೈಲ್ ವೈರಸ್ಗಳ ಮೂಲಕ ತಮ್ಮ ವ್ಯವಹಾರಗಳನ್ನು ಹೆಚ್ಚಿಸಿಕೊಳ್ಳಲು ಕೆಲ ಅಂತಾರಾಷ್ಟ್ರೀಯ ಸಾಫ್ಟವೇರ್ ಕಂಪನಿಗಳು ನಿಮ್ಮ ಮೊಬೈಲ್ಗಳಿಗೆ ಹುಳ ಬಿಡುತ್ತಿವೆ. ಅಕ್ಕಪಕ್ಕದಲ್ಲಿರುವವರು ತಲೆಗೆ ಹುಳ ಬಿಡುವ ಕೆಲಸ ಮಾಡಿದರೆ ಇವರು ನಿಮ್ಮ ಆ್ಯಂಡ್ರಾಯ್ಡ್ ಫೋನ್ಗೆ ಹುಳ ಬಿಡುವ ಕೆಲಸ ಮಾಡುತ್ತಾರೆ. 2016ರೊಳಗೆ ಮೊಬೈಲ್ ಜಗತ್ತಿನ ಆ್ಯಂಟಿ ವೈರಸ್ ಮಾರುಕಟ್ಟೆಯಲ್ಲಿ ಯಶ ಸಾಧಿಸಲು ಕೆಲ ಕಂಪನಿಗಳು ಸ್ಮಾರ್ಟ್ ಫೋನ್ಗಳಿಗೆ ಹುಳಬಿಡುತ್ತಿವೆ.
ಇದಕ್ಕೆ ಉತ್ತಮ ಮಾರುಕಟ್ಟೆ ಒದಗಿಸಲು ಸಾಫ್ಟವೇರ್ ಕಿಡಿಗೇಡಿಗಳು ತಮ್ಮ ಕೆಲಸ ಪ್ರಾರಂಭಿಸಿದ್ದಾರೆ. ನಮಗೆ ಗೊತ್ತಿಲ್ಲದೆಯೇ, ಗೂಗಲ್ ಸಂಸ್ಥೆಗೂ ತಿಳಿಯದೇ ಗೂಗಲ್ ಪ್ಲೇನಲ್ಲಿ ಇಂತಹ ಸುಮಾರು 2,76,259 ಮಾಲ್ವೇರ್ ಅಪ್ಲಿಕೇಷನ್ಗಳು ದೊರೆಯುತ್ತಿವೆ.
2017ರ ವೇಳೆಗೆ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಸಂಖ್ಯೆ ನೂರು ಕೋಟಿ ದಾಟುವ ಅಂದಾಜಿದೆ. ಇದನ್ನೇ ಅಸ್ತ್ರವಾಗಿರಿಸಿಕೊಂಡಿರುವ ಮಾಲ್ವೇರ್ ತಯಾರಕರು ವೈರಸ್ಗಳನ್ನು ಮೊಬೈಲ್ಗೆ ಬಿಡಲು ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಶೇ.93ರಷ್ಟು ವೈರಸ್ಗಳು ಆ್ಯಂಡ್ರಾಯ್ಡ್ ಫೋನ್ಗಳಿಗೆ ಒಕ್ಕರಿಸಿವೆ. ಮತ್ತೊಂದು ಆಘಾತಕಾರಿ ಅಂಶವೆಂದರೆ 2012-13ನೇ ಆರ್ಥಿಕ ವರ್ಷದಲ್ಲಿ ಮೊಬೈಲ್ ಮಾಲ್ವೇರ್ಗಳು ಶೇ.614ರಷ್ಟು ಹೆಚ್ಚಾಗಿವೆ.
ಈ ಮಾಲ್ವೇರ್ಗಳು ನಿಮ್ಮ ಆ್ಯಂಡ್ರಾಯ್ಡ್ ಮೊಬೈಲ್ನಲ್ಲಿನ ರಹಸ್ಯ ಅಂಶಗಳನ್ನು ಕದ್ದು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ದಟ್ಟವಾದ ಅನುಮಾನವಿದೆ. ಸೈಬರ್ ಅಪರಾಧಗಳಿಗೂ ಇದು ಎಡೆಮಾಡಿಕೊಡುತ್ತಿದೆ. ಮತ್ತೊಂದೆಡೆ ಈ ಹುಳಗಳ ಹಾವಳಿ ನಿಯಂತ್ರಣಕ್ಕಾಗಿ ಗ್ರಾಹಕರು ಆ್ಯಂಟಿ ವೈರಸ್ನತ್ತ ಮುಖ ಮಾಡುವುದು ಸಾಮಾನ್ಯ. ಆ್ಯಂಡ್ರಾಯ್ಡ್ ಮಾರುಕಟ್ಟೆಗೆ ಸರಿಸಮಾನವಾಗಿ ಆ್ಯಂಟಿ ವೈರಸ್ಗಳನ್ನು ಬೆಳೆಸುವ ಸಲುವಾಗಿಯೇ ಇಂತಹ ಮಾಲ್ವೇರ್ಗಳನ್ನು ಸೃಷ್ಟಿ ಮಾಡಲಾಗುತ್ತಿದೆ ಎನ್ನುವುದು ಕೂಡ ಅಷ್ಟೇ ಸತ್ಯ. ಒಟ್ಟಿನಲ್ಲಿ ಇದೊಂಥರ ಹುಳ ಬಿಟ್ಟು ಮಜಾ ನೋಡಿ, ಬಳಿಕ ಲಾಭ ಗಳಿಸುವ ಉದ್ಯಮ.
ಎಲೆಕ್ಟ್ರಾನಿಕ್ ಸಾಧನಗಳಿಗೆ ಸಂಬಂಧಿಸಿ ಅಮೆರಿಕ ಮೂಲದ ಕೆನ್ಲೈಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ 2013ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ಫೋನ್ಗಳಲ್ಲಿ ಶೇ.73ರಷ್ಟು ಆ್ಯಂಡ್ರಾಯ್ಡ್ ಓಎಸ್ ಹೊಂದಿವೆ. ಸುರಕ್ಷತೆಯ ದೃಷ್ಟಿಯಿಂದ ಆ್ಯಪಲ್ ಕಂಪನಿಯು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಗೂಗಲ್ ಆ್ಯಂಡ್ರಾಯ್ಡ್ ಸಂಸ್ಥೆಯು ಮಾಲ್ವೇರ್ಗಳ ಬಗ್ಗೆ ಯಾವುದೇ ಎಚ್ಚರಿಕೆಯ ಕ್ರಮತೆಗೆದುಕೊಳ್ಳುತ್ತಿಲ್ಲ. ಇದೇ ಕಾರಣದಿಂದ ಮಾಲ್ವೇರ್ಗಳಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ಪರಿಹಾರ ಮಾರ್ಗಗಳ ಮಾರುಕಟ್ಟೆಯೇ ಇತರೆ ಮೂಲಗಳ ಪ್ರಕಾರ ವೈರಸ್ಗಳನ್ನು ಮೊಬೈಲ್ಗೆ ಬಿಡಲಾಗುತ್ತಿದೆ. ಅರಿವಿಗೆ ಬಾರದೆಯೇ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.
ಇವೆಲ್ಲ ಅಂಶಗಳ ಕುರಿತಂತೆ ಅಮೆರಿಕ ಮೂಲದ ಖ್ಯಾತ ಕಂಪನಿ ಜ್ಯೂನಿಫರ್ ನೆಟ್ವರ್ಕ್ ಸಂಶೋಧನಾ ವರದಿ ಪ್ರಕಟಿಸಿದೆ.
ಸಂಶೋಧನಾ ವರದಿ ಪ್ರಮುಖ ಅಂಶಗಳು
ಗೂಗಲ್ ಪ್ಲೇಗಳಲ್ಲಿ ಹೆಚ್ಚು ಖ್ಯಾತಿಯಾಗಿರುವ ಅಪ್ಲಿಕೇಷನ್ಗಳ ಪಟ್ಟಿಯನ್ನು ಈ ಮಾಲ್ವೇರ್ ತಯಾರಕರು ಪಡೆಯುತ್ತಾರೆ. ಅತಿ ಹೆಚ್ಚು ಡೌನ್ಲೋಡ್ ಆಗುತ್ತಿರುವ ಅಪ್ಲಿಕೇಷನ್ಗಳೇ ಇವರ ಮಾಲ್ವೇರ್ ತಯಾರಿಕೆಗೆ ಸ್ಪೂರ್ತಿ. ಉದಾಹರಣೆಗೆ ವಿಚಾಟ್ ಅಫ್ಲಿಕೇಷನ್ ಕಳೆದೊಂದು ವರ್ಷದಿಂದ ಗೂಗಲ್ ಪ್ಲೇನಲ್ಲಿ ಟಾಪ್ 10 ಪಟ್ಟಿಯಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದೆ.
ಈ ಮಾಲ್ವೇರ್ ತಯಾರಕರು ವಿಚಾಟ್ ತರಹದ ಹತ್ತಾರು ಅಪ್ಲಿಕೇಷನ್ಗಳನ್ನು ಮಾರುಕಟ್ಟೆಗೆ ಬಿಡುತ್ತಾರೆ. ಇವೆಲ್ಲ ಅಪ್ಲಿಕೇಷನ್ಗಳು ಉಚಿತವಾಗಿರುತ್ತವೆ ಹಾಗೂ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಪರಿಶೀಲಿಸುವ ಸಲುವಾಗಿ ಇಂತಹ ಅಪ್ಲಿಕೇಷನ್ಗಳನ್ನು ಡೌನಲೋಡ್ ಮಾಡುತ್ತಾರೆ. ಪ್ರತಿ 100 ಗ್ರಾಹಕರಲ್ಲಿ 5 ಜನ ಈ ರೀತಿಯ ಮಾಲ್ವೇರ್ ಅಪ್ಲಿಕೇಷನ್ಗಳ ಬಲೆಗೆ ಬೀಳುತ್ತಿದ್ದಾರೆ. ಇಂತಹ ಕೆಲ ಅಪ್ಲಿಕೇಷನ್ಗಳಿಂದ ಆಂತರಿಕ ಸುರಕ್ಷತೆಗೂ ಧಕ್ಕೆಯಾಗುವ ಸಾಧ್ಯತೆಯಿದೆ. ಇದಲ್ಲದೇ ಮೊಬೈಲ್ಗಳಲ್ಲಿನ ತೀರಾ ಖಾಸಗಿ ವಿಚಾರಗಳ ವಿನಿಮಯವು ಈ ಮಾಲ್ವೇರ್ಗಳಿಂದ ಆಗುತ್ತಿದೆ ಎಂಬ ಸಂಶಯವನ್ನು ಜ್ಯೂನಿಫರ್ ಸಂಸ್ಥೆ ಹೇಳಿದೆ.
ಆ್ಯಂಡ್ರಾಯ್ಡ್ ಇತ್ತೀಚಿನ ಜೆಲ್ಲಿ ಬೀನ್ ಓಎಸ್ನಿಂದ ಅಲ್ಪ ಪ್ರಮಾಣದ ಮಾಲ್ವೇರ್ ನಿಯಂತ್ರಣವಾಗಿದೆ. ಆದರೆ ಸಂಪೂರ್ಣವಾಗಿ ಇದನ್ನು ತಡೆಗಟ್ಟಲು ಆಗುತ್ತಿಲ್ಲ. ಗೂಗಲ್ ಪ್ಲೇನಲ್ಲಿ ಇಂತಹ 500ಕ್ಕೂ ಅಧಿಕ ಕಂಪನಿಗಳ ಲಕ್ಷಾಂತರ ಮಾಲ್ವೇರ್ ಅಪ್ಲಿಕೇಷನ್ಗಳಿವೆ. ಈ ಮಾಲ್ವೇರ್ಗಳು ಕೇವಲ ಅಪ್ಲಿಕೇಷನ್ಗಳಲ್ಲದೇ ಕೆಲ ಸಂದೇಶಗಳ ಮೂಲಕವೂ ರವಾನೆಯಾಗುತ್ತಿದೆ. ಅದರಲ್ಲೂ ಚಾಟ್ ಅಥವಾ ಎಸ್ಎಂಎಸ್ ಅಪ್ಲಿಕೇಷನ್ಗಳ ಮೂಲಕವೂ ಇಂತಹ ವೈರಸ್ಗಳು ವ್ಯಾಪಕವಾಗಿ ರವಾನೆಯಾಗುತ್ತಿವೆ.
ಸಂದೇಶಗಳ ಮೂಲಕ ಇಂತಹ ವೈರಸ್ಗಳು ರವಾನೆಯಾಗುತ್ತಿರುವುದಕ್ಕೆ ಕಂಪನಿಗಳು ಕೂಡ ಹಣ ಗಳಿಸುತ್ತಿವೆ. ಪ್ರತಿ ಸಂದೇಶಕ್ಕೆ 10 ಡಾಲರ್ ಹಣವನ್ನು ಮಾಲ್ವೇರ್ ತಯಾರಕರು ಪಡೆಯುತ್ತಿದ್ದಾರೆ. ಈ ಪ್ರಮಾಣದ ಹಣವನ್ನು ಅವರು ಈ ಮಾಲ್ವೇರ್ಗಳಿಗೆ ತೊಡಗಿಸಲು ಕಾರಣ ಆ್ಯಂಟಿವೈರಸ್ ಕಂಪನಿಗಳ ವ್ಯವಹಾರವಾಗಿದೆ.
ಕಳೆದ 2 ವರ್ಷಗಳಲ್ಲಿ ಲ್ಯಾಪ್ಟಾಪ್ ಅಥವಾ ವೈಯಕ್ತಿಕ ಕಂಪ್ಯೂಟರ್ ಖರೀದಿಗಿಂತ ಸ್ಮಾರ್ಟ್ಫೋನ್ ಖರೀದಿದಾರ ಸಂಖ್ಯೆ ಶೇ.32ರಷ್ಟು ಹೆಚ್ಚಿದೆ. ಸ್ಮಾರ್ಟ್ಫೋನ್ ಅಥವಾ ಆ್ಯಂಡ್ರಾಯ್ಡ್ ಓಎಸ್ ಇರುವ ಟ್ಯಾಬ್ಲೆಟ್ ಹೊಂದುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಆ್ಯಂಟಿವೈರಸ್ ಕಂಪನಿಗಳು ತಮ್ಮ ಭವಿಷ್ಯವನ್ನು ಈ ಎರಡು ವಿಭಾಗಗಳಲ್ಲಿಯೆ ಕಾಣಬೇಕಿದೆ.
ಯಾರು ಏನೇ ಹುಳ ಬಿಡಲಿ, ಸ್ಮಾರ್ಟ್ಫೋನ್ಗಳಿಗೆ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳುವಾಗ ಸ್ವಲ್ಪ ಸ್ಮಾರ್ಟ್ ಆಗಿದ್ದರೆ ಒಳಿತು. ಇಲ್ಲವಾದಲ್ಲಿ ಅನವಶ್ಯಕವಾಗಿ ತಲೆಗೆ ಹುಳ ಬಿಡಿಸಿಕೊಳ್ಳುವ ಕೆಲಸವಾಗುತ್ತದೆ.
- ರಾಧೆ