

ಈ ಬಾರಿಯ ಫುಟ್‌ಬಾಲ್ ವಿಶ್ವಕಪ್ ತಂತ್ರಜ್ಞಾನ ವಿಚಾರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪಂದ್ಯಾವಳಿಗಳ ನೇರ ಪ್ರಸಾರ, ಗೋಲ್ ಲೈನ್ ಟೆಕ್ನಾಲಜಿ ಹಾಗೂ ಬಾಲ್‌ಗಳ ವಿಚಾರಕ್ಕೆ ಸಂಬಂಧಿಸಿ ದೊಡ್ಡ ಚರ್ಚೆಯೇ ಆಗುತ್ತಿದೆ. ನೇರ ಪ್ರಸಾರಕ್ಕಾಗಿ ಇದೇ ಮೊದಲ ಬಾರಿಗೆ ಸೋನಿ ಸಂಸ್ಥೆಯು 4ಕೆ ವ್ಯವಸ್ಥೆ ಜಾರಿಗೆ ತಂದಿದೆ. ಇದರರ್ಥ ಈ ಹಿಂದೆಲ್ಲ 1080 ಪಿಕ್ಸಲ್‌ನಲ್ಲಿ ವಿಡಿಯೋ ನೇರ ಪ್ರಸಾರವಾಗುತ್ತಿತ್ತು. ಆದರೆ ಈ ಬಾರಿ 4000 ಪಿಕ್ಸಲ್‌ನಲ್ಲಿ ವಿಡಿಯೋ ಪ್ರಸಾರವಾಗುತ್ತಿದೆ. ಹಿಂದಿನ ವಿಶ್ವಕಪ್‌ಗಿಂತ ಈ ಬಾರಿ ನೂತನ ತಂತ್ರಜ್ಞಾನಗಳ ಟಿವಿ ಬಂದಿದ್ದರಿಂದ ಯಾವುದರಲ್ಲಿಯೂ ಇಮೇಜ್‌ಗಳ ಪಿಕ್ಸಲ್ ಒಡೆಯಬಾರದು ಎಂಬ ಕಾಳಜಿಯಿಂದ 4ಕೆ ಕವರೇಜ್ ಪ್ರಸಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಗೋಲ್ ಲೈನ್ ಟೆಕ್ನಾಲಜಿಗಾಗಿ 14 ಹೈಸ್ಪೀಡ್ 3-ಡಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದು ಮೈದಾನದ ನಾನಾ ಮೂಲೆ ಹಾಗೂ ಗೋಲ್ ನೆಟ್‌ನಲ್ಲಿಯೂ ಇರುತ್ತದೆ. ಗೋಲ್ ಕಂಬಕ್ಕೆ ಬಡಿದ ಅಥವಾ ಅದರ ಹತ್ತಿರ ಬಾಲ್ ಬಂದ ಒಂದು ಸೆಕೆಂಡ್‌ನಲ್ಲಿ ಗೋಲ್ ಆಗಿದೆಯೋ ಇಲ್ಲ ಎಂಬ ಪಕ್ಕಾ ಸಂದೇಶ ರೆಫ್ರಿಗೆ ಹೋಗುತ್ತದೆ. ಒಂದೊಮ್ಮೆ ಗೋಲ್ ಆಗಿದ್ದರೆ ಕೂಡಲೇ 'ಗೋಲ್' ಎಂಬ ಸಂದೇಶ ರೆಫ್ರಿಗೆ ತಲುಪುತ್ತದೆ.