ಮಂಗಳನಿಗೆ ಪತ್ರಿಸಲು ರು.12 ಲಕ್ಷ ಬೇಕು!

ಭಾರತೀಯರು ಸೇರಿದಂತೆ ಅನೇಕರು ಭೂಮಿಯಿಂದ ಮಂಗಳನತ್ತ ಪ್ರಯಾಣ ಬೆಳೆಸಲು ಮುಂದಾಗಿರುವ ವಿಚಾರ ಎಲ್ಲರಿಗೂ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಲಂಡನ್: ಭಾರತೀಯರು ಸೇರಿದಂತೆ ಅನೇಕರು ಭೂಮಿಯಿಂದ ಮಂಗಳನತ್ತ ಪ್ರಯಾಣ ಬೆಳೆಸಲು ಮುಂದಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈಗ ನಿಮ್ಮ ಸಂಬಂಧಿಕರ್ಯಾರೋ ಆ ತಂಡದೊಂದಿಗೆ ಪ್ರಯಾಣ ಬೆಳೆಸಿದ್ದಾರೆ ಎಂದಿಟ್ಟುಕೊಳ್ಳಿ.
ಎಂದಾದರೊಮ್ಮೆ ಅವರ ಯೋಗಕ್ಷೇಮ ವಿಚಾರಿಸಬೇಕೆಂದರೆ ಏನು ಮಾಡುತ್ತೀರಿ? ಅಲ್ಲಿ ಮೊಬೈಲ್ ಫೋನುಗಳ ಜಮಾನಾ ಬರಲು ಇನ್ನೂ ಎಷ್ಟೋ ವರ್ಷಗಳು ಬೇಕು. ಹಾಗಾಗಿ, ಸದ್ಯಕ್ಕೆ ನೀವು ಕೆಂಪು ಗ್ರಹಕ್ಕೊಂದು ಪತ್ರ ಬರೆಯಬೇಕಷ್ಟೆ! ಅಂದ ಹಾಗೆ, ಮಂಗಳ ಗ್ರಹಕ್ಕೆ ಪತ್ರ ಬರೆದು ಕಳುಹಿಸಬೇಕೆಂದರೆ ಅಂದಾಜು ಎಷ್ಟು ವೆಚ್ಚವಾಗಬಹುದು? ಗೊತ್ತಾದರೆ ನೀವು ಹೌಹಾರಿಬಿಡುತ್ತೀರಿ. 
ಏಕೆಂದರೆ, ಕೆಂಪು ಗ್ರಹಕ್ಕೆ ಒಂದು ಪತ್ರ ಬರೆಯಬೇಕೆಂದರೆ ಬರೋಬ್ಬರಿ ರು.12 ಲಕ್ಷ (18 ಸಾವಿರ ಡಾಲರ್) ಖರ್ಚಾಗುತ್ತದೆ. ಈ ಮೊತ್ತವನ್ನು ಅಂದಾಜಿಸಿದ್ದು ಬೇರಾರೂ ಅಲ್ಲ. ಬ್ರಿಟನ್‍ನ ಪ್ರಮುಖ ಅಂಚೆ ಸೇವಾ ಕಂಪನಿ ರಾಯಲ್ ಮೇಲ್. 
ಬಾಲಕನಿಗೆ ಉತ್ತರಿಸಿದ ಮೇಲ್: ಒಲಿವರ್ ಗೆಡ್ಡಿಂಗ್ಸ್ ಎಂಬ 5 ವರ್ಷದ ಬಾಲಕ ಕೇಳಿರುವ ಪ್ರಶ್ನೆಗೆ ರಾಯಲ್ ಮೇಲ್ ಇಂತಹ ಉತ್ತರ ನೀಡಿದೆ. ಮಂಗಳ ಗ್ರಹಕ್ಕೆ ಪತ್ರ ಕಳುಹಿಸಲು ಎಷ್ಟು ವೆಚ್ಚವಾಗಬಹುದು ಎಂದು ಆತ ಕೇಳಿದ್ದ. ಅದಕ್ಕೆ ವಿವರವಾಗಿ ಉತ್ತರಿಸಿರುವ ರಾಯಲ್ ಮೇಲ್, ``ಭೂಮಿಯನ್ನು ದಾಟಿ ಹೋಗಬೇಕಾದ ಕಾರಣ ಇಂಧನಕ್ಕೆ ಬಹಳಷ್ಟು ವೆಚ್ಚವಾಗುತ್ತದೆ. 
ಕ್ಯೂರಿಯಾಸಿಟಿ ರೋವರ್ ಅನ್ನು ಕಳುಹಿಸಲು 700 ದಶಲಕ್ಷ ಡಾಲರ್ (ರು.4665 ಕೋಟಿ) ಖರ್ಚಾಗಿತ್ತೆಂದು ನಾಸಾ ಹೇಳಿದೆ. ಬಾಹ್ಯಾಕಾಶ ನೌಕೆಯೇ ಬಹಳ ಚಿಕ್ಕದಿರುವ ಕಾರಣ, ಸುಮಾರು 100 ಗ್ರಾಂ ತೂಕದ ಪತ್ರಕ್ಕೆ ಅಂದಾಜು ರು.12 ಲಕ್ಷ ವೆಚ್ಚವಾಗಬಹುದು'' ಎಂದು ಹೇಳಿದೆ. 
ಅಷ್ಟೇ ಅಲ್ಲ, ಪ್ರತಿ ಪತ್ರಕ್ಕೆ 18,416 ಫಾಸ್ಟ್ ಕ್ಲಾಸ್ ಸ್ಟ್ಯಾಂಪ್ ಅನ್ನೂ ಅಂಟಿಸಬೇಕಾಗುತ್ತದೆ ಎಂದೂ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಾಲಕ ಒಲಿವರ್, ``ನನ್ನ ಪತ್ರಕ್ಕೆ ಉತ್ತರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. ಅಂತೂ ಕೆಂಪು ಗ್ರಹಕ್ಕೆ ಪತ್ರ ಕಳುಹಿಸುವುದು ಬಹಳ ದುಬಾರಿ. ಅಷ್ಟೊಂದು ಸ್ಟ್ಯಾಂಪ್ ಅನ್ನು ನೀವೂ ಬಳಸಬೇಕಾಗುತ್ತದಲ್ಲವೇ?'' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com