ವಾಷಿಂಗ್ಟನ್: ತಂತ್ರಜ್ಞಾನ ಲೋಕದಲ್ಲಿ ಬದಲಾವಣೆಯನ್ನು ಸೃಷ್ಟಿಸಿದ ಇಮೇಲ್ ನ್ನು ಕಂಡುಹಿಡಿದ ಮತ್ತು ಇಮೇಲ್‌ಗಳಿಗಾಗಿ @ ಸಂಜ್ಞೆಯನ್ನು ನೀಡಿದ ರೇ ಟೋಮಿಲ್‌ಸನ್(74 ) ಶನಿವಾರ ಸಂಜೆ ನಿಧನರಾಗಿದ್ದಾರೆ.
1971ರಲ್ಲಿ ರೇ ಟೋಮಿಲ್‌ಸನ್ ಇಮೇಲ್ ತಂತ್ರಜ್ಞಾನವನ್ನು ಪರಿಚಯಿಸಿದ್ದರು. ಅಲ್ಲಿಯವರೆಗೆ ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್‌ಗೆ ಮೇಲ್ ಕಳಿಸುವ ತಂತ್ರಜ್ಞಾನವಿರಲಿಲ್ಲ. ರೇ ಅವರು ಇಲೆಕ್ಟ್ರಾನಿಕ್ ಮೇಲ್ ಕಂಡು ಹಿಡಿದ ನಂತರ ಸಂವಹನವೂ ಸುಸೂತ್ರವಾಗಲು ಇದು ಸಹಾಯ ಮಾಡಿತು.
ಮಸಾಚ್ಯುಸೆಟ್ಸ್ ನಲ್ಲಿ ಬಿಬಿಎನ್ ಎಂಬ ಸಂಸ್ಥೆಯೊಂದರಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ರೇ, ಸೆಂಡ್ ಮೆಸೇಜ್ ಪ್ರೋಗ್ರಾಂ ಎಂಬ ಸಾಫ್ಟ್‌ವೇರ್ ಮೂಲಕ ಮೊದಲ ಬಾರಿ ಇಮೇಲ್ ಕಳುಹಿಸಿದ್ದರು.
ಅರ್ಪಾನೆಟ್‌ಗೆ ಹೊಂದುವ ರೀತಿಯಲ್ಲಿ 1972ರಲ್ಲಿ ರೇ, ಇಲೆಕ್ಟ್ರಾನಿಕ್ ಮೇಲ್‌ನ್ನು ಸಿದ್ಧಪಡಿಸಿದ್ದರು. ಅದೇ ವೇಳೆ @ ಎಂಬ ಸಂಜ್ಞೆಯನ್ನೂ ಮೊದಲ ಬಾರಿ ಪರಿಚಯಿಸಿದ ವ್ಯಕ್ತಿಯೂ ರೇ ಆಗಿದ್ದಾರೆ. 1982ರಲ್ಲಿ ಇಲೆಕ್ಟ್ರಾನಿಕ್ ಮೇಲ್ ಅನ್ನು ಇಮೇಲ್ ಎಂದ ಕರೆಯಲಾಯಿತು.