ಕ್ರೀಡೆ

ಆಸೀಸ್‌ಗೆ ಮಾಸ್ಟರ್ ಮುಳ್ಳು

ಆಸೀಸ್‌ಗೆ ಮಾಸ್ಟರ್ ಮುಳ್ಳು
Published On :

ಪ್ರಥಮ ಟೆಸ್ಟ್: ಆರಂಭಿಕ ಕುಸಿತದಿಂದ ಭಾರತವನ್ನು ಪಾರು ಮಾಡಿದ ಸಚಿನ್ ತೆಂಡೂಲ್ಕರ್
ಚೆನ್ನೈ:
ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಶಾಂದಾರ್ ಶತಕಾರ್ಧದಿಂದಾಗಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಪಾರಾಗಿ ನಿಂತಿದೆ.
ಪಂದ್ಯದ ಎರಡನೇ ದಿನವಾದ ಶನಿವಾರ, ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಅನ್ನು 380 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದ ಭಾರತ, ತನ್ನ ಮೊದಲ ಇನಿಂಗ್ಸ್ ಪ್ರಾರಂಭಿಸಿ, ಆರಂಭದಲ್ಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಸಚಿನ್ ಹಾಗೂ ಚೇತೇಶ್ವರ ಪೂಜಾರ ಇಬ್ಬರ ಉತ್ತಮ ಜೊತೆಯಾಟದ ನೆರವಿನಿಂದಾಗಿ ಭಾರತ ಚೇತರಿಸಿಕೊಂಡಿತು.
ಆಸೀಸ್ ತಂಡವನ್ನು 380 ರನ್‌ಗಳಿಗೆ ನಿಯಂತ್ರಿಸಿ, ತನ್ನ ಇನಿಂಗ್ಸ್ ಆರಂಭಿಸಿದ್ದ ಭಾರತಕ್ಕೆ ಪ್ಯಾಟಿನ್ಸನ್ ದೊಡ್ಡ ಪೆಟ್ಟು ನೀಡಿದರು. ತಂಡದ ಮೊತ್ತ ಕೇವಲ 11 ರನ್ ಆಗಿದ್ದಾಗ, ಆರಂಭಿಕ ಮುರಳಿ ವಿಜಯ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಅವರು, ತಂಡದ ಮೊತ್ತ 12 ರನ್ ಆಗಿದ್ದಾಗ, ಮತ್ತೊಬ್ಬ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರನ್ನೂ ಬಲಿ ತೆಗೆದುಕೊಂಡರು.
ಇಂಥ ಒತ್ತಡದ ಸಂದರ್ಭದಲ್ಲಿ ಇನಿಂಗ್ಸ್‌ನ ಸಾರಥ್ಯ ವಹಿಸಿಕೊಂಡಿದ್ದು ಮೂರನೇ ಕ್ರಮಾಂಕದ ಚೇತೇಶ್ವರ ಪೂಜಾರ ಹಾಗೂ ನಾಲ್ಕನೇ ಕ್ರಮಾಂಕದ ಸಚಿನ್ ತೆಂಡೂಲ್ಕರ್.
ತಾಳ್ಮೆ ಹಾಗೂ ಜವಾಬ್ದಾರಿಯುತ ಆಟವಾಡಿದ ಈ ಜೋಡಿ, 3ನೇ ವಿಕೆಟ್‌ಗೆ 98 ರನ್ ಸೇರಿಸಿತು. ಅದರಲ್ಲೂ ಬಹುದಿನಗಳಿಂದ ಫಾರ್ಮ್ ಇಲ್ಲದೇ ಟೀಕಾಕಾರರ ಗುರಿಯಾಗಿದ್ದ ಸಚಿನ್ ತೆಂಡೂಲ್ಕರ್ ಮತ್ತೆ ತಮ್ಮ ಬ್ಯಾಟ್‌ನ ಮೂಲಕವೇ ಉತ್ತರ ನೀಡಿದರು. 39 ವಯಸ್ಸಿನ ಈ ಹಿರಿಯ ಬ್ಯಾಟ್ಸ್‌ಮನ್, ಶನಿವಾರದ ದಿನದಾಟದಲ್ಲಿ ನೀಡಿದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಸಚಿನ್‌ಗೆ ಮತ್ತೊಂದು ಗರಿ: ದೃಢವಾದ ಮನಸ್ಥೈರ್ಯ, ಕದಲದ ಆತ್ಮವಿಶ್ವಾಸಗಳು ಅವರ ಪ್ರತಿಯೊಂದು ಹೊಡೆತದಲ್ಲೂ ಕಾಣುತ್ತಿತ್ತು. ಸಚಿನ್ ಆಟದ ವೈಖರಿಯಲ್ಲೊಂದಾದ ಉತ್ತಮ ಫುಟ್‌ವರ್ಕ್ ಅವರ ಆಟದಲ್ಲಿ ಎದ್ದುಕಾಣುತ್ತಿತ್ತು. ಸಾವಧಾನದಿಂದ ಬ್ಯಾಟ್ ಬೀಸುತ್ತಾ ಹೋದ ಅವರು ತಮ್ಮ 67ನೇ ಟೆಸ್ಟ್ ಅರ್ಧ ಶತಕವನ್ನು ಗಳಿಸುವಲ್ಲಿ ಯಶಸ್ವಿಯಾದರು.
ಅದಲ್ಲದೇ, ತವರಿನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ 7 ಸಾವಿರ ರನ್ ಗಡಿ ದಾಟಿ ಮತ್ತೊಂದು ಸಾಧನೆ ಮಾಡಿದರು.
ಅವರಿಗೆ ಕ್ರೀಸ್‌ನಲ್ಲಿ ಉತ್ತಮವಾಗಿ ಬೆಂಬಲ ನೀಡಿದ ಚೇತೇಶ್ವರ ಪೂಜಾರ, ಉತ್ತಮ ಆಟ ಪ್ರದರ್ಶಿಸಿದರು. ಇವರಿಬ್ಬರೂ ಜೋಡಿಯಾದ ನಂತರ 13ನೇ ಓವರ್‌ನಲ್ಲಿ ತಂಡದ ಮೊತ್ತವನ್ನು 50 ರನ್ ಗಡಿ ದಾಟಿಸಿದ್ದರು. ಇವರಿಬ್ಬರ ಸಮಯೋಚಿತ ಬ್ಯಾಟಿಂಗ್‌ನ ನೆರವಿನಿಂದ ಭಾರತದ ಇನಿಂಗ್ಸ್ ಚೇತರಿಸಿಕೊಂಡಿತು.
29ನೇ ಓವರ್‌ನಲ್ಲಿ ಚೇತೇಶ್ವರ ಪೂಜಾರ ಅವರನ್ನು ಪೆವಿಲಿಯನ್‌ಗೆ ಕಳಿಸುವಲ್ಲಿ ಪ್ಯಾಟಿನ್ಸನ್ ಯಶಸ್ವಿಯಾದರು. ಆಗ, ಸಚಿನ್‌ಗೆ ಸಾಥ್ ನೀಡಲು ಬಂದಿದ್ದು ವಿರಾಟ್ ಕೊಹ್ಲಿ. ಈ ಜೋಡಿಯೂ ಸಹ ನಾಲ್ಕನೇ ವಿಕೆಟ್‌ಗೆ ದಿನಾಂತ್ಯದವರೆಗೂ ಮುರಿಯದ ಜೊತೆಯಾಟವಾಡಿ, 77 ರನ್‌ಗಳ ಜೊತೆಯಾಟವಾಡಿತು. ದಿನಾಂತ್ಯದ ಹೊತ್ತಿಗೆ 3 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿರುವ ಭಾರತದ ಪರವಾಗಿ, ಗಳಿಸಿದ್ದ ಸಚಿನ್ (71) ಜೊತೆ 7ನೇ ಟೆಸ್ಟ್ ಶತಕಾರ್ಧ ಗಳಿಸಿರುವ ಕೊಹ್ಲಿ (50) ಕ್ರೀಸ್‌ನಲ್ಲಿದ್ದರು.
ನಿರಾಸೆ ಮೂಡಿಸಿದ ಸೆಹ್ವಾಗ್: ಪದೇ ಪದೇ ವೈಫಲ್ಯಕ್ಕೊಳಗಾಗುತ್ತಿರುವ ವೀರೇಂದ್ರ ಸೆಹ್ವಾಗ್, ಶನಿವಾರವೂ ದುರ್ಬಲ ಆಟ ಪ್ರದರ್ಶಿಸಿದರು. ಮುರಳಿ ವಿಜಯ್ ಜೊತೆಗೆ ಇನಿಂಗ್ಸ್ ಆರಂಭಿಸಿದ್ದ ಅವರು, ವೈಯಕ್ತಿಕವಾಗಿ ಗಳಿಸಿದ್ದು ಕೇವಲ 2 ರನ್ ಮಾತ್ರ.
ಆಸೀಸ್ ನಿರೀಕ್ಷಿತ ಅಂತ್ಯ: ಶನಿವಾರ ದಿನಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 316 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಅನ್ನು ಶನಿವಾರ ಮೈಕಲ್ ಕ್ಲಾರ್ಕ್ ಮತ್ತು ಸಿಡ್ಲ್ ಮುಂದುವರೆಸಿದರು.
ಶುಕ್ರವಾರ ದಿನದಾಟದಲ್ಲಿ ಶತಕ ಗಳಿಸಿದ್ದ ನಾಯಕ ಕ್ಲಾರ್ಕ್, ವೈಯಕ್ತಿಕ 130 ರನ್ ಗಳಿಸಿ ಔಟಾದರು. ನಂತರ, ಆಸೀಸ್ ಇನಿಂಗ್ಸ್ ಭಾರ ಹೊತ್ತ ಸಿಡ್ಲ್ ಹಾಗೂ ಪ್ಯಾಟಿನ್ಸನ್, ತಂಡದ ಮೊತ್ತಕ್ಕೆ ಕೇವಲ 3 ರನ್ ಸೇರಿಸುವಷ್ಟರಲ್ಲಿ ಬೇರೆಯಾದರು. ಇನಿಂಗ್ಸ್‌ನ 121ನೇ ಓವರ್‌ನಲ್ಲಿ ಸಿಡ್ಲ್ ವಿಕೆಟ್ ಉರುಳುವ ಮೂಲಕ, ಈ ಜೋಡಿ ಬೇರೆಯಾಯಿತು. ಅವರ ನಂತರ, ಕ್ರೀಸ್‌ಗೆ ಆಗಮಿಸಿದ ಲಿಯಾನ್ ಕೇವಲ 3 ರನ್ ಗಳಿಸಿ ಔಟಾದರು. ಇವರ ವಿಕೆಟ್‌ನೊಂದಿಗೆ ಆಸೀಸ್‌ನ ಮೊದಲ ಇನಿಂಗ್ಸ್ 380 ರನ್‌ಗಳಿಗೆ ಅಂತ್ಯಗೊಂಡಿತು.
ಅಶ್ವಿನ್ ಸಾಧನೆ: ಶುಕ್ರವಾರದ ದಿನದಾಟದಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿ, ಗಮನ ಸೆಳೆದಿದ್ದ ಭಾರತದ ಸ್ಪಿನ್ನರ್ ಆರ್. ಅಶ್ವಿನ್, ಶನಿವಾರ ದಿನದಾಟದಲ್ಲಿ ಮತ್ತೊಂದು ವಿಕೆಟ್ (ಲಿಯಾನ್ ಅವರ ವಿಕೆಟ್) ಗಳಿಸಿದರು. ಈ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ಪಡೆದ ಅಶ್ವಿನ್ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
ಭಜ್ಜಿಗೆ ಒಂದು ವಿಕೆಟ್: ತಮ್ಮ ವೃತ್ತಿಜೀವನದ ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಹರ್ಭಜನ್ ಸಿಂಗ್ ಅವರ ಮೇಲೆ ನಿರೀಕ್ಷೆ ಇಡಲಾಗಿತ್ತು. ಆದರೆ, ಶುಕ್ರವಾರದ ದಿನದಾಟದಲ್ಲಿ ಭಜ್ಜಿ ಬೆವರು ಹರಿಸಿದರಷ್ಟೇ ಹೊರತು, ವಿಕೆಟ್ ಪಡೆಯಲಿಲ್ಲ. ಆದರೆ, ಅವರ ವಿಕೆಟ್ ಆಸೆ ಶನಿವಾರ ಈಡೇರಿತು. ಪೀಟರ್ ಸಿಡ್ಲ್ ಅವರ ವಿಕೆಟ್ ಪಡೆದು ಸ್ವಲ್ಪ  ಯಶಸ್ಸು ಸಂಪಾದಿಸಿದರು.  

ನಾನು ಕ್ರಿಸ್‌ನಲ್ಲಿ ನೆಲೆ ಕಂಡುಕೊಂಡಿದ್ದೆ ಹಾಗೂ ಇನಿಂಗ್ಸ್‌ನಲ್ಲಿ ಹಿಡಿತ ಸಾಧಿಸಿದ್ದೇವು. ಆದರೆ ನಾನುಕೆಟ್ಟ ಸಂದರ್ಭದಲ್ಲಿ ಔಟಾದೆ. ಆದರೂ ಸಹ ನಾವು ಈಗ ಉತ್ತಮ ಸ್ಥಿತಿಯಲ್ಲಿದ್ದು, ನಾನು ಅನಿವಾರ್ಯಸಂದರ್ಭದಲ್ಲಿ ತಂಡಕ್ಕೆ
ಉತ್ತಮ ಜತೆಯಾಟ ನೀಡಿದೆ.
-ಚೇತೇಶ್ವರ ಪೂಜಾರ, ಭಾರತ ತಂಡದ ಬ್ಯಾಟ್ಸ್‌ಮನ್

ಸಚಿನ್‌ಗೆ ಆರಂಭದಲ್ಲೇ ಬೌನ್ಸರ್‌ಗಳ ಮೂಲಕ ಆಕ್ರಮಣಕಾರಿ ದಾಳಿ ನಡೆಸುವುದು ನನ್ನ ಮೊದಲ ಯೋಜನೆಯಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ನಾನು ಯೋಜನೆಯನ್ನು ಬದಲಾಯಿಸಿದೆ. ಹಾಗಾಗಿ ಸಚಿನ್ ಅವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.  ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವ ಸಚಿನ್‌ಗೆ ಬೌಲಿಂಗ್ ಮಾಡುವುದು ದೊಡ್ಡ ಸವಾಲಾಗಿದೆ.
-ಜೇಮ್ಸ್ ಪ್ಯಾಟಿನ್ಸನ್, ಆಸ್ಟ್ರೇಲಿಯಾ ವೇಗಿ

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 380/10 (ಶುಕ್ರವಾರ ದಿನಾಂತ್ಯಕ್ಕೆ 316/7)
ಕ್ಲಾರ್ಕ್ ಸಿ ಭುವನೇಶ್ವರ್ ಬಿ ಜಡೇಜಾ 130, ಸಿಡ್ಲ್ ಸಿ ಸೆಹ್ವಾಗ್ ಬಿ ಹರ್ಭಜನ್ 19, ಲಿಯಾನ್ ಸಿ ಕೊಹ್ಲಿ ಬಿ ಅಶ್ವಿನ್ 3. ಇತರೆ 8.
ವಿಕೆಟ್ ಪತನ: 8-361, 9-364, 10-380.
ಬೌಲಿಂಗ್: ಭುವನೇಶ್ವರ್ 13-1-52-0, ಇಶಾಂತ್ 17-3-59-0, ಹರ್ಭಜನ್ 25-2-87-1, ಅಶ್ವಿನ್ 42-12-103-7, ಜಡೇಜಾ 36-10-71-2

ಭಾರತ ಪ್ರಥಮ ಇನಿಂಗ್ಸ್ 182/3 (52 ಓ.) (ಶನಿವಾರ ದಿನಾಂತ್ಯಕ್ಕೆ)
ವಿಜಯ್ ಬೌಲ್ಡ್ ಬಿ ಪ್ಯಾಟಿನ್ಸನ್ 10, ಸೆಹ್ವಾಗ್ ಬೌಲ್ಡ್ ಬಿ ಪ್ಯಾಟಿನ್ಸನ್ 2, ಪೂಜಾರ ಬೌಲ್ಡ್ ಬಿ ಪ್ಯಾಟಿನ್ಸನ್ 44, ಸಚಿನ್ ಅಜೇಯ 71, ಕೊಹ್ಲಿ ಅಜೇಯ 50, ಇತರೆ 5.
ವಿಕೆಟ್ ಪತನ: 1-11 2-12 3-105.
ಬೌಲಿಂಗ್: ಸ್ಟಾರ್ಕ್ 14-2-37-0, ಪ್ಯಾಟಿನ್ಸನ್ 6-1-25-3, ಸಿಡ್ಲ್ 8-1-31-0, ಲಿಯಾನ್ 14-0-55-0, ಹೆನ್ರಿಕ್ಸ್ 8-2-17-0, ಕ್ಲಾರ್ಕ್ 2-0-14-0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.