ಶತಾಯುಷಿ ಫೌಜಾ ವಿದಾಯ

ಹಾಕಾಂಗ್: ಶತಾಯುಷಿ (101ವರ್ಷ) ವಿಶ್ವದ ಅತಿ ಹಿರಿಯ ಮ್ಯಾರಥಾನ್ ಓಟಗಾರ, ಭಾರತೀಯ ಮೂಲದ ಫೌಜಾ ಸಿಂಗ್ ಭಾನುವಾರ ನಿವೃತ್ತಿ ಘೋಷಿಸಿದ್ದಾರೆ.
ಭಾನುವಾರ ಹಾಂಕಾಂಗ್ನಲ್ಲಿ ನಡೆದ 10 ಕಿ.ಮೀ. ರೇಸ್ನಲ್ಲಿ ಭಾಗವಹಿಸಿ ತಮ್ಮ ಕೊನೆಯ ಸ್ಪರ್ಧೆಯನ್ನು ಮುಗಿಸಿದ ಫೌಜಾ ಸಿಂಗ್ ಮುಖದಲ್ಲಿ ಸಂತಸದ ಹೊನಲು ಎದ್ದು ಕಾಣುತ್ತಿತ್ತು. 'ಟರ್ಬನಡ್ ಟಾರ್ನಾಡೋ' ಎಂಬ ಹೆಸರಿನಿಂದ ಖ್ಯಾತರಾಗಿರುವ ಸಿಂಗ್ ಹಾಂಕಾಂಗ್ ರೇಸ್ನಲ್ಲಿ, 1 ಗಂಟೆ 32 ನಿಮಿಷ ಹಾಗೂ 28 ಸೆಕೆಂಡ್ಗಳಲ್ಲಿ ಗುರಿ ಸೇರಿದರು.
'ನಿವೃತ್ತಿ ಹೇಳುವುದಕ್ಕೆ ನಾನು ಸಂತಸಪಡುತ್ತೇನೆ. ಓಟ ನನಗೆ ಖುಷಿ ಕೊಡುತ್ತಿತ್ತು. ಆದರೆ, ಈಗ ನಿವೃತ್ತಿ ಹೇಳುವ ಮೂಲಕ ನಾನು ಓಡುವುದನ್ನು ನಿಲ್ಲಿಸಿದ್ದೇನೆ' ಎಂದು ಭಾರತೀಯ ಮೂಲದ ಇಂಗ್ಲೆಂಡ್ನ ಫೌಜಾ ಸಿಂಗ್ ಹೇಳಿದ್ದಾರೆ.
ಏಪ್ರಿಲ್ 1ಕ್ಕೆ 102ನೇ ವಸಂತಕ್ಕೆ ಕಾಲಿಡುತ್ತಿರುವ ಸಿಂಗ್ 2011ರಲ್ಲಿ ಟೊರಂಟೋ ಮ್ಯಾರಥಾನ್ನಲ್ಲಿ ಓಡಿದ ಅತಿ ಹಿರಿಯ ಓಟಗಾರ ಎನಿಸಿದ್ದರು. ಆದರೆ, ಅವರ ದಾಖಲೆಯನ್ನು ಗಿನ್ನೆಸ್ ಪುಸ್ತಕದಲ್ಲಿ ಗುರುತಿಸಲಾಗಿಲ್ಲ. ಕಾರಣ, ಅವರ ವಯಸ್ಸನ್ನು ಖಚಿತಪಡಿಸಲು ಫೌಜಾ ಸಿಂಗ್ ಅವರ ಬಳಿ ಜನನ ಪ್ರಮಾಣ ಪತ್ರವಿಲ್ಲ. ಫೌಜಾ ಪಾಸ್ಪೋರ್ಟ್ ಮಾತ್ರ ಹೊಂದಿದ್ದಾರೆ. ಇಂಗ್ಲೆಂಡ್ನಲ್ಲಿ ನೆಲಸುವುದಕ್ಕಿಂತ ಮೊದಲು ಪಂಜಾಬ್ನಲ್ಲಿ ರೈತರಾಗಿದ್ದ ಸಿಂಗ್, ಲಂಡನ್, ಟೊರಂಟೋ ಹಾಗೂ ನ್ಯೂಯಾರ್ಕ್ಗಳಲ್ಲಿ ಒಟ್ಟು 9 ಬಾರಿ 26 ಮೈಲು ದೂರದ ಮ್ಯಾರಥಾನ್ ಪೂರ್ಣಗೊಳಿಸಿದ್ದಾರೆ.
ಟೊರಂಟೋದಲ್ಲಿ ಅತಿ ವೇಗದಲ್ಲಿ ಗುರಿ ತುಲಿಪಿದ್ದ ಸಿಂಗ್, 5 ಗಂಟೆ 40 ನಿಮಿಷಗಳಲ್ಲಿ ತಮ್ಮ ಓಟವನ್ನು ಪೂರೈಸಿದ್ದರು.
ಅಚ್ಚರಿ ಎಂದರೆ ಸಿಂಗ್ ಅವರು ಇದುವರೆಗೂ ಯಾವುದೇ ಅನಾರೋಗ್ಯದಿಂದ ಬಳಲಿಲ್ಲವಂತೆ. 2012ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದ ಟಾರ್ಚ್ಬೀರರ್ ಆಗಿದ್ದ ಸಿಂಗ್ ಅವರಿಗೆ, ಇಂಗ್ಲೀಷ್ ಓದುವ ಮತ್ತು ಬರೆಯುವುದನ್ನು ಕಲಿಯಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇದೆಯಂತೆ.
1999ರಲ್ಲಿ 89 ವರ್ಷ ವಯಸ್ಸಿನಲ್ಲಿ ಸಿಂಗ್ ಮ್ಯಾರಥಾನ್ನಲ್ಲಿ ಭಾಗವಹಿಸಲು ಆರಂಭಿಸಿದರಂತೆ. ಚಾರಿಟಿಗಳಿಗೆ ಹಣ ಒದಗಿಸಲು ಸಿಂಗ್ ಮ್ಯಾರಥಾನ್ನಲ್ಲಿ ಭಾಗವಹಿಸುವುದು ಗುರಿಯಾಗಿತ್ತಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


