ಏಷ್ಯನ್ ಸ್ಕ್ವಾಷ್: ಬಾಲಕಿಯರಿಗೆ ಚಿನ್ನ
ಸಿಯೋಲ್: ಕೊನೆಯವರೆಗೂ ಸ್ಫೂರ್ತಿಯ ಹೋರಾಟ ನಡೆಸಿದ ಭಾರತದ ಬಾಲಕಿಯರ ಸ್ಕ್ವಾಷ್ ತಂಡ ಏಷ್ಯನ್ ಜೂನಿಯರ್ ತಂಡ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಆದರೆ, ಫೈನಲ್‌ನಲ್ಲಿ ಸೋಲನುಭವಿಸಿದ ಬಾಲಕರ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಬಾಲಕಿಯರ ತಂಡ ತೀವ್ರ ಪೈಪೋಟಿಯಿಂದ ನಡೆದ ಫೈನಲ್ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಜಯ ಸಾಧಿಸಿದ್ದ ಭಾರತದ ಲಕ್ಷ್ಯ ರಾಗವೇಂದ್ರನ್ ಅವರು ಮೊದಲ ಪಂದ್ಯದಲ್ಲಿ ಹಾಂಕಾಂಗ್‌ನ ಹೊ ಜಿ ಲಾಕ್ ವಿರುದ್ಧ ಕೈಚೆಲ್ಲಿದರು. ಆದರೆ, ಅನಕಾ ಅಲಂಕಾಮೋನಿ ಹಾಂಕಾಂಗ್‌ನ ನಂ.1 ಆಟಗಾರ್ತಿ ಹೂ ಕಾ ಪೋ ಅವರನ್ನು 3-0 ಅಂತರದಿಂದ ಪರಾಭವಗೊಳಿಸಿ 1-1 ಅಂತರದಿಂದ ಸಮಬಲ ಸಾಧಿಸುವಂತೆ ನೋಡಿಕೊಂಡರು. ಹೀಗಾಗಿ ಅಂತಿಮ ಮತ್ತು ಮೂರನೇ ಪಂದ್ಯ ತೀವ್ರ ಮಹತ್ವ ಪಡೆದುಕೊಂಡಿತು. ರೋಚಕವಾಗಿ ನಡೆದ ಪಂದ್ಯದಲ್ಲಿ ಭಾರತದ ಅಪರಾಜಿತಾ ಬಾಲಮುರಗನ್ ಅವರು 3-0 ಅಂತರದಿಂದ ಜಯಿಸುವ ಮೂಲಕ ತಂಡ ಚಿನ್ನ ಗೆಲ್ಲಲು ಕಾರಣರಾದರು. ಇನ್ನು ಭಾರತ ಪುರಷರ ತಂಡ ಪಾಕಿಸ್ತಾನದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 0-2 ಅಂತರದಿಂದ ಪರಾಭವ ಹೊಂದಿತು. ಮೊದಲ ಪಂದ್ಯದಲ್ಲಿ ಭಾರತ ದೀಪಕ್ ಮಿಶ್ರಾ ಅವರು ಪಾಕಿಸ್ತಾನದ ಬಿಲಾಲ್ ಜಾಕೀರ್ ವಿರುದ್ಧ 3-0 ಅಂತರದಿಂದ ಸೋಲನುಭವಿಸಿದರು. ನಂತರ 2ನೇ ಪಂದ್ಯದಲ್ಲಿ ಮಹೇಶ್ ಮಂಗಾವ್ಕರ್ ಅವರು ಪಾಕ್‌ನ ಸೈಯಿದ್ ಅಲಿ ಮುಜ್ತಾಬಾ ವಿರುದ್ಧ 3-0 ಅಂತರದಿಂದ ಕೈಚೆಲ್ಲಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

