ಕ್ರೀಡೆ

ಧೋ ಡಾಲಾ ಧೋನಿ

ಧೋ ಡಾಲಾ ಧೋನಿ
Published On :

ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಅವರ ಅಜೇಯ ದ್ವಿಶತಕ ಹಾಗೂ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕದಿಂದ ನೆರವಿನಿಂದಾಗಿ ಭಾರತ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಿದೆ.
ಪಂದ್ಯದ ಎರಡನೇ ದಿನವಾದ ಶನಿವಾರ ದಿನಾಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದ್ದ ಭಾರತ, ಭಾನುವಾರ ದಿನಾಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ ಭರ್ಜರಿ 515 ರನ್ ಗಳಿಸಿದೆ.
ಭಾನುವಾರ ದಿನದಾಟದಲ್ಲಿ ಮಿಂಚಿದ ಧೋನಿ, ಕಾಂಗರೂಗಳ ವಿರುದ್ಧ ಯುದ್ಧವನ್ನೇ ಆರಂಭಿಸಿದರು. ಇನಿಂಗ್ಸ್‌ನ 64ನೇ ಓವರ್‌ನಲ್ಲಿ ತೆಂಡೂಲ್ಕರ್ ಅವರ ವಿಕೆಟ್ ಪತನವಾದ ನಂತರ, ಕ್ರೀಸ್‌ಗೆ ಕಾಲಿಟ್ಟಿದ್ದ ಅವರು ಆಸೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.
ಅವರ ಬಿರುಸಿನ ಬ್ಯಾಟಿಂಗ್ ಪ್ರದರ್ಶನದಿಂದಾಗಿ, ದಂಗಾದ ಕಾಂಗರೂಗಳಿಗೂ ಅವರ ವಿಕೆಟ್ ಪಡೆಯುವುದು ಕಬ್ಬಿಣದ ಕಡಲೆಯಾಯಿತು. ತಮ್ಮ ಆಕ್ರಮಣಕಾರಿ ಪ್ರದರ್ಶನದಿಂದಾಗಿ ಧೋನಿ, ತಮ್ಮ ಚೊಚ್ಚಲ ಟೆಸ್ಟ್ ದ್ವಿಶತಕ ದಾಖಲಿಸಿದರೆ, ಅತ್ತ, ಕೊಹ್ಲಿ ಅವರೂ ಸಹ ತಮ್ಮ ನಾಲ್ಕನೇ ಟೆಸ್ಟ್ ಶತಕ ಗಳಿಸಿದರು.
ಪಂದ್ಯದ ಮೂರನೇ ದಿನವಾದ ಭಾನುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಹಾಜರಾತಿಯೂ ಹೆಚ್ಚಿತ್ತು. ಶನಿವಾರವೇ, ಸಚಿನ್ ತೆಂಡೂಲ್ಕರ್ ಅವರು 71 ರನ್ ಗಳಿಸಿದ್ದರಿಂದ ಅವರು ಭಾನುವಾರ ಶತಕ ಹೊಡೆಯುವ ನಿರೀಕ್ಷೆ ಇತ್ತು. ಈ ಕಾರಣ ಹಾಗೂ ಭಾನುವಾರದ ಬಿಡುವು - ಈ ಎರಡೂ ಕಾರಣಗಳಿಂದಾಗಿ ಕ್ರೀಡಾಂಗಣದಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು. ಆದರೆ, ಅವರಿಗೆ ಸಚಿನ್ ಅವರ ಶತಕ ಸಿಗಲಿಲ್ಲ. ಆದರೆ,
ಧೋನಿ- ಕೊಹ್ಲಿ ಅವರ ಜುಗಲ್‌ಬಂದಿಯ ಆಟ ನೋಡುವ ಅವಕಾಶ ಸಿಕ್ಕಿತು. ಒಟ್ಟು 243 ಎಸೆತಗಳನ್ನು ಎದುರಿಸಿದ ಧೋನಿ, 22 ಬೌಂಡರಿ ಹಾಗೂ ಐದು ಸಿಕ್ಸರ್ ಸೇರಿದಂತೆ 206 ರನ್ ಗಳಿಸಿದರು.
ಅತ್ತ, ಶತಕ ಸಿಡಿಸಿದ್ದ ಕೊಹ್ಲಿ ಹಾಗೂ ಧೋನಿ ಇಬ್ಬರೂ 5ನೇ ವಿಕೆಟ್‌ಗೆ 128 ರನ್‌ಗಳ ಜೊತೆಯಾಟವಾಡಿದರು. ಇನಿಂಗ್ಸ್‌ನ 90ನೇ ಓವರ್‌ನ ಸುಮಾರಿಗೆ ತಮ್ಮ ಕೊಂಚ ಚಂಚಲವಾದವರಂತೆ ಕಂಡು ಬಂದ ಕೊಹ್ಲಿ ನಾಥನ್ ಲಯಾನ್ ಬೌಲಿಂಗ್‌ನಲ್ಲಿ ಸ್ಟಾರ್ಕ್‌ಗೆ ಕ್ಯಾಚ್ ನೀಡಿ ಹೊರನಡೆದರು. ಅವರ ನಿರ್ಗಮನದ ನಂತರ ಬಂದ ರವೀಂದ್ರ ಜಡೇಜಾ, ಆರ್. ಅಶ್ವಿನ್, ಹರ್ಭಜನ್ ಸಿಂಗ್ ಅವರ್ಯಾರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಲಿಲ್ಲ. ಆದರೆ, ಮತ್ತೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಧೋನಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಆರಾಮವಾಗಿ ಬ್ಯಾಟ್ ಬೀಸುತ್ತಾ ಸಾಗಿದರು. ಆಗ, ಅವರಿಗೆ ಕ್ರೀಸ್‌ನಲ್ಲಿ ಉತ್ತಮ ಸಾಥ್ ನೀಡಿದ್ದು ಭುವನೇಶ್ವರ ಕುಮಾರ್.  ದಿನಾಂತ್ಯದವರೆಗೂ ಧೋನಿಯೊಂದಿಗೆ ಅಜೇಯರಾಗಿ ಉಳಿದ ಅವರು, 9ನೇ ವಿಕೆಟ್‌ಗೆ ಮುರಿಯದ 109 ರನ್ ಜೊತೆಯಾಟವಾಡಿದರು.   
ನಿರಾಸೆಗೊಳಿಸಿದ ಸಚಿನ್: ಇದಕ್ಕೂ ಮುನ್ನ ಭಾನುವಾರ ಬೆಳಗ್ಗೆ ಕೊಹ್ಲಿ ಅವರೊಂದಿಗೆ ಭಾರತದ ಇನಿಂಗ್ಸ್ ಮುಂದುವರೆಸಿದ್ದ ಸಚಿನ್ ತೆಂಡೂಲ್ಕರ್ ಅವರು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದರು. ಶನಿವಾರವೇ 71 ರನ್ ಗಳಿಸಿದ್ದ ಅವರು ಭಾನುವಾರ ಶತಕ ಸಿಡಿಸಬಹುದೆಂಬನಿರೀಕ್ಷೆ ಸುಳ್ಳಾಯಿತು. ವೈಯಕ್ತಿಕವಾಗಿ 81 ರನ್ ಗಳಿಸಿ ಅವರು ಔಟಾದರು.

ಹೊಸ ದಾಖಲೆ ಬರೆದ ಮಹೀ
ಭಾನುವಾರ ತಮ್ಮ ಚೊಚ್ಚಲ ಟೆಸ್ಟ್ ದ್ವಿಶತಕ ಬಾರಿಸಿದ ಧೋನಿ, ಹೊಸ ದಾಖಲೆ ಬರೆದಿದ್ದಾರೆ. ಧೋನಿ ಗಳಿಸಿದ ಅಜೇಯ 206 ರನ್, ಭಾರತೀಯ ವಿಕೆಟ್ ಕೀಪರ್ ಒಬ್ಬ ಟೆಸ್ಟ್ ಪಂದ್ಯವೊಂದರಲ್ಲಿ ದಾಖಲಿಸಿರುವ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ ಈ ದಾಖಲೆ ಬುಧಿ ಕುಂದರನ್ ಅವರ ಹೆಸರಿನಲ್ಲಿತ್ತು. 1964ರಲ್ಲಿ ಕುಂದರನ್ ಅವರು ಮದ್ರಾಸ್ ಕಾರ್ಪೊರೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 192 ರನ್ ಗಳಿಸಿದ್ದರು. ಇದಲ್ಲದೇ, ಧೋನಿ ಅವರು 4000 ಟೆಸ್ಟ್ ರನ್‌ಗಳ ಗಡಿ ದಾಟಿದರು. ಅವರ ಇದುವರೆಗಿನ ವೃತ್ತಿಜೀವನದಲ್ಲಿ ಅವರು ಗಳಿಸಿದ ಗರಿಷ್ಠ ಮೊತ್ತವಾಗಿದೆ.

ಸ್ಕೋರ್‌ಬೋರ್ಡ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 380
ಭಾರತ ಪ್ರಥಮ ಇನಿಂಗ್ಸ್ 515/8 (141 ಓವರ್)
(ಶನಿವಾರ ದಿನಾಂತ್ಯಕ್ಕೆ 182/3ರಿಂದ ಮುಂದುವರೆದುದು)
ಸಚಿನ್ ತೆಂಡೂಲ್ಕರ್ ಬೌಲ್ಡ್ ಬಿ ಲಿಯಾನ್ 81, ವಿರಾಟ್ ಕೊಹ್ಲಿ ಸಿ ಸ್ಟಾರ್ಕ್ ಬಿ ಲಿಯಾನ್ 107,
ಧೋನಿ ಅಜೇಯ 206, ರವೀಂದ್ರ ಜಡೇಜಾ ಬೌಲ್ಡ್ ಬಿ ಪ್ಯಾಟಿನ್ಸನ್ 16, ಆರ್. ಅಶ್ವಿನ್ ಬೌಲ್ಡ್ ಬಿ ಲಯಾನ್ 3,
ಹರ್ಭಜನ್ ಸಿಂಗ್ ಬೌಲ್ಡ್ ಹೆನ್ರೀಕೆಸ್ 11, ಭುವನೇಶ್ವರ್ ಕುಮಾರ್ ಅಜೇಯ 16, ಇತರೆ 19
ವಿಕೆಟ್ ಪತನ: 4-196, 5-324, 6-365, 7- 372, 8- 406.
ಬೌಲಿಂಗ್: ಸ್ಟಾರ್ಕ್ 25-3-75-0, ಪ್ಯಾಟಿನ್ಸನ್ 26-5-89-4, ಸಿಡ್ಲ್ 22-5-61-0, ಲಯಾನ್ 40-1-182-3, ಹೆನ್ರೀಕೆಸ್ 17-4-48-1, ಕ್ಲಾರ್ಕ್ 8-2-25-0, ವಾರ್ನರ್ 3-0-19-0

ಧೋನಿ ಸಾಧನೆಗೆ ಮೆಚ್ಚುಗೆಯ ಮಹಾಪೂರ

ಧೋನಿ ದ್ವಿಶತಕ ಗಳಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಅವರ ನೆರವಿನಿಂದಾಗಿ, ಆಸೀಸ್ ವಿರುದ್ಧದ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದೆ.
-ಮೆಗ್ರಾತ್, ಆಸ್ಟ್ರೇಲಿಯಾದ ಮಾಜಿ ವೇಗಿ

ಕ್ರಿಕೆಟ್ ಲೋಕದ 'ಕೂಲೆಸ್ಟ್‌' ಆಟಗಾರ  ಧೋನಿ ಅವರ ದ್ವಿಶತಕ ಸಾಧನೆ ಅಗತ್ಯ ಸಮಯದಲ್ಲಿ ಹೊರಬಂದಿದೆ. ಅದು ಅದ್ಭುತವಾದ ಇನಿಂಗ್ಸ್.
-ಮೈಕಲ್ ವಾನ್, ಇಂಗ್ಲೆಂಡ್ ಮಾಜಿ ನಾಯಕ

ವಾವ್! ಚೆನ್ನೈ ಟೆಸ್ಟ್‌ನಲ್ಲಿ ಧೋನಿ ಆಟ ಬೊಂಬಾಟ್. ಅದ್ಭುತವಾದ ಆಟದಿಂದ ಅವರು ದ್ವಿಶತಕ ಗಳಿಸಿರುವುದು ಸಂತಸ ತಂದಿದೆ.
-ಶೇನ್ ವಾರ್ನ್, ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್

ಆಸೀಸ್ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ಇನಿಂಗ್ಸ್‌ಗೆ ಧೋನಿ, ಕೊಹ್ಲಿ ನೀಡಿರುವ ಕಾಣಿಕೆ ಅಮೂಲ್ಯ. ಕೊಹ್ಲಿಗೆ ಅದರಲ್ಲೂ ವಿಶೇಷವಾಗಿ ಧೋನಿಗೆ ಅಭಿನಂದನೆಗಳು.
-ಯುವರಾಜ್ ಸಿಂಗ್, ಟೀಂ ಇಂಡಿಯಾ ಆಟಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.