ಕ್ರೀಡೆ

ಹರಿಣಗಳಿಗೆ ಜಯ; ಸರಣಿ ಕ್ಲೀನ್‌ ಸ್ವೀಪ್

Published On :

ಸೆಂಚೂರಿಯನ್: ಪಾಕಿಸ್ತಾನದ ವಿರುದ್ಧ ನಡೆಯುತ್ತಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ 18 ರನ್‌ಗಳ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ.
ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ 211 ರನ್‌ಗಳ ಜಯ ಸಾಧಿಸಿದ್ದ ದಕ್ಷಿಣ ಆಫ್ರಿಕಾ, ಕೇಪ್‌ಟೌನ್‌ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನಲ್ಲಿ 4 ವಿಕೆಟ್‌ಗಳ ಜಯ ಗಳಿಸಿತ್ತು.  ದಕ್ಷಿಣ ಆಫ್ರಿಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ ಪೇರಿಸಿದ್ದ 409 ರನ್‌ಗಳಿಗೆ ಉತ್ತರವಾಗಿ ಪಾಕಿಸ್ತಾನ ತನ್ನ ಮೊದಲ ಇನಿಂಗ್ಸ್‌ನಲ್ಲಿ 156 ಗಳಿಸಿತ್ತು. ಈ ಸಂದರ್ಭದಲ್ಲಿ, ಹರಿಣಗಳು ಪಾಕಿಸ್ತಾನದ ಮೇಲೆ ಫಾಲೋ ಆನ್ ಹೇರಿದರು. ಆನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಪಾಕಿಸ್ತಾನ 235 ರನ್‌ಗಳಿಗೆ ಆಲೌಟ್ ಆಯಿತು. ಈ ಹಿನ್ನೆಲೆಯಲ್ಲಿ, ದಕ್ಷಿಣ ಆಫ್ರಿಕಾ ತಂಡ 18 ರನ್‌ಗಳ ಜಯ ಸಂಪಾದಿಸಿದೆ.
ಪಂದ್ಯದ ಎರಡನೇ ದಿನವಾದ ಶನಿವಾರ ಫಾಲೋ ಆನ್‌ಗೆ ಒಳಗಾಗಿದ್ದ ಪಾಕಿಸ್ತಾನ, ದಿನಾಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿತ್ತು. ಅಜರ್ ಅಲಿ 5 ರನ್‌ಗಳೊಂದಿಗೆ ಹಾಗೂ ಯೂನಿಸ್ ಖಾನ್ 8 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದರು. ಭಾನುವಾರ, ಈ ಇಬ್ಬರೂ ಪಾಕಿಸ್ತಾನದ ದ್ವಿತೀಯ ಇನಿಂಗ್ಸ್ ಮುಂದುವರೆಸಿದರು. ತಂಡದ ಮೊತ್ತಕ್ಕೆ 25 ರನ್ ಸೇರಿಸುವಷ್ಟರಲ್ಲಿ ಯೂನಿಸ್ ಖಾನ್ (11) ವಿಕೆಟ್ ಒಪ್ಪಿಸಿದರು. ಆನಂತರ, ಕ್ರೀಸ್‌ನಲ್ಲಿದ್ದ ಅಜರ್ ಅಲಿಗೆ (27) ಜೊತೆಯಾದ ಇಮ್ರಾನ್ ಫರ್ಹಾತ್ (43) 3ನೇ ವಿಕೆಟ್‌ಗೆ 54 ರನ್ ಜೊತೆಯಾಟವಾಡಿದರು. ಇವರಿಬ್ಬರ ವಿಕೆಟ್ ಪತನಗೊಂಡ ನಂತರ, ಮಿಸ್ಬಾ ಉಲ್ ಹಕ್ (5) ಹಾಗೂ ಅಸದ್ ಶರೀಫ್ (6) ಹೆಚ್ಚು ಆಡದೇ ಪೆವಿಲಿಯನ್‌ಗೆ ಹಿಂದಿರುಗಿದರು. ಆದರೆ, ಮಧ್ಯಮ ಕ್ರಮಾಂಕದ ಸರ್ಫ್ರಾಜ್ ಅಹ್ಮದ್ (40) ಹಾಗೂ ಸಯೀದ್ ಅಜ್ಮಲ್ (31) ಇಬ್ಬರೂ ತಂಡವನ್ನು ಮೇಲೆತ್ತಲು ಪ್ರಯತ್ನ ನಡೆಸಿದರು. ಈ ಇಬ್ಬರು ಉತ್ತಮ ಜೊತೆಯಾಟದಿಂದ 7ನೇ ವಿಕೆಟ್‌ಗೆ 69 ರನ್ ಸೇರಿಸಿತು. ಇನಿಂಗ್ಸ್‌ನ 65ನೇ ಓವರ್‌ನಲ್ಲಿ ಅಜ್ಮಲ್ ಹಾಗೂ 69ನೇ ಓವರ್‌ನಲ್ಲಿ ಅಹ್ಮದ್ ಇಬ್ಬರೂ ಔಟಾದರು. ಆನಂತರ, ಬಂದ ಬ್ಯಾಟ್ಸ್‌ಮನ್‌ಗಳಲ್ಲಿ ಯಾರೂ ಗಟ್ಟಿಯಾಗಿ ನಿಂತು ಆಡಲಿಲ್ಲ. ಎಹ್ಸಾನ್ ಆದಿಲ್ (12) ಬೇಗನೇ ವಿಕೆಟ್ ಒಪ್ಪಿಸಿ, ಹೊರನಡೆದರು. ರಹಾತ್ ಅಲಿ (22) ಕೊಂಚ ಪ್ರಯತ್ನಿಸಿದರಾದರೂ ಅದು ಪೂರ್ಣವಾಗಿ ಫಲ ನೀಡಲಿಲ್ಲ. 78ನೇ ಓವರ್‌ನಲ್ಲಿ ಅವರ ವಿಕೆಟ್ ಬೀಳುವ ಮೂಲಕ, ಪಾಕಿಸ್ತಾನ ಸರ್ವಪತನ ಕಂಡಿತು. ಅಂತಿಮ ಬ್ಯಾಟ್ಸ್‌ಮನ್ ಮಹಮ್ಮದ್ ಇರ್ಫಾನ್ (6) ಅಜೇಯರಾಗಿ ಉಳಿದರು.
ಮುಂದಿನ ಸರಣಿ: ಮಾರ್ಚ್ 1 ಹಾಗೂ 3ರಂದು ಪಾಕಿಸ್ತಾನ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಹಾಗೂ ಎರಡನೇ ಟಿ20 ಪಂದ್ಯಗಳನ್ನಾಡಲಿದೆ. ಮಾ. 10ರಿಂದ ಇತ್ತಂಡಗಳ ನಡುವೆ ಐದು ದಿನಗಳ ಏಕದಿನ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ಪ್ರಥಮ ಇನಿಂಗ್ಸ್ 409
ಪಾಕಿಸ್ತಾನ ಪ್ರಥಮ ಇನಿಂಗ್ಸ್ 156
ಪಾಕಿಸ್ತಾನ ದ್ವಿತೀಯ ಇನಿಂಗ್ಸ್ 235/10
(ಫಾಲೋ ಆನ್) (78 ಓವರ್)
(ಶನಿವಾರ ದಿನಾಂತ್ಯಕ್ಕೆ 14/1)
ಇಮ್ರಾನ್ ಫರ್ಹಾತ್ 43,
ಸರ್ಫ್ರಾಜ್ ಅಹ್ಮದ್ 40
ಬೌಲಿಂಗ್: ಸ್ಟೇಯ್ನ್ 80/4,
ಅಬೊಟ್ 39/2

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.