ವಿಜಯದ ಅಂಚಿನಲ್ಲಿ ಟೀಂ ಇಂಡಿಯಾ

ಪ್ರಥಮ ಟೆಸ್ಟ್: ಗೆಲುವಿಗೆ ಇನ್ನೊಂದೇ ವಿಕೆಟ್ ಬಾಕಿ; ಕ್ರೀಸ್ಗೆ ಅಂಟಿಕೊಂಡಿರುವ ಹೆನ್ರೀಕೆಸ್
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತ ಭರ್ಜರಿ ಜಯದ ಸನಿಹಕ್ಕೆ ಸಾಗಿದ್ದು, ತಂಡದ ಗೆಲುವು ಪಂದ್ಯದ ಕೊನೆಯ ದಿನವಾದ ಸೋಮವಾರ ನಿರ್ಧಾರಗೊಳ್ಳಲಿದೆ.
ಭಾನುವಾರ ದಿನಾಂತ್ಯಕ್ಕೆ ತನ್ನ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ನಷ್ಟಕ್ಕೆ 515 ರನ್ ಗಳಿಸಿದ್ದ ಭಾರತ, ಸೋಮವಾರ ತನ್ನ ಇನಿಂಗ್ಸ್ ಮುಂದುವರಿಸಿ 572 ರನ್ಗಳಿಗೆ ಆಲೌಟ್ ಆಯಿತು.
ತದನಂತರ, ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ದಿನಾಂತ್ಯಕ್ಕೆ 9 ವಿಕೆಟ್ಗಳನ್ನು ಕಳೆದುಕೊಂಡು 232 ರನ್ ಗಳಿಸಿದೆ. ಮಧ್ಯಮ ಕ್ರಮಾಂಕದ ಮೊಯ್ಸೆಸ್ ಹೆನ್ರೀಕೆಸ್ ಅವರು ಗಟ್ಟಿಯಾಗಿ ಕ್ರೀಸ್ಗೆ ಅಂಟಿಕೊಂಡಿದ್ದು ಶತಕಾರ್ಧ ಗಳಿಸಿ ಆಡುತ್ತಿದ್ದಾರೆ. ಅವರೊಂದಿಗೆ, ಅಂತಿಮ ಬ್ಯಾಟ್ಸ್ಮನ್ ಲಯಾನ್ ಅವರು ಅಜೇಯರಾಗಿ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತದ ಜಯ ಮಂಗಳವಾರದ ಮಟ್ಟಿಗೆ ಮುಂದೂಡಲ್ಪಟ್ಟಿದೆ.
192 ರನ್ ಮುನ್ನಡೆ: ಆಸೀಸ್ ಇನಿಂಗ್ಸ್ಗೂ ಮುನ್ನ ಭಾರತ ತಂಡ, ತನ್ನ ದ್ವಿತೀಯ ಇನಿಂಗ್ಸ್ ಮುಂದುವರಿಸಿ, 572 ರನ್ಗಳಿಗೆ ಆಲೌಟ್ ಆಯಿತು. ಭಾನುವಾರ ದಿನಾಂತ್ಯಕ್ಕೆ ಅಜೇಯರಾಗಿ ಉಳಿದಿದ್ದ ಧೋನಿ ಹಾಗೂ ಭುವನೇಶ್ವರ ಕುಮಾರ್, ಸೋಮವಾರ ಇನಿಂಗ್ಸ್ ಆರಂಭಿಸಿದರು.
ವೈಯಕ್ತಿಕವಾಗಿ ದ್ವಿಶತಕ ರನ್ ಗಳಿಸಿ ಮುನ್ನಡೆದಿದ್ದ ನಾಯಕ ಧೋನಿ, 224 ರನ್ ಗಳಿಸಿ ಔಟಾದರು. ಇನಿಂಗ್ಸ್ನ 144ನೇ ಓವರ್ನಲ್ಲಿ ಪ್ಯಾಟಿನ್ಸನ್ ಇವರ ವಿಕೆಟ್ ಉರುಳಿಸಿದರು.
ಆನಂತರ, 155ನೇ ವಿಕೆಟ್ನಲ್ಲಿ ಭುವೇಶ್ವರ್ ಕುಮಾರ್ ವಿಕೆಟ್ ಉರುಳುವುದರೊಂದಿಗೆ ಭಾರತದ ಇನಿಂಗ್ಸ್ 572 ರನ್ಗಳಿಗೆ ಅಂತ್ಯಗೊಂಡಿತು.
ಸ್ಪಿನ್ ದಾಳಿಗೆ ಧೂಳೀಪಟ: ಆಸೀಸ್ನ ಮೊದಲ ಇನಿಂಗ್ಸ್ ಸಂದರ್ಭದಲ್ಲಿ ಕಾಂಗರೂಗಳ ಆರು ವಿಕೆಟ್ ಉರುಳಿಸಿ ಮಿಂಚಿದ್ದ ರವಿಚಂದ್ರನ್ ಅಶ್ವಿನ್, ಆಸೀಸ್ನ ದ್ವಿತೀಯ ಇನಿಂಗ್ಸ್ನಲ್ಲೂ ತಮ್ಮ ಜಾದೂ ತೋರಿಸಿದರು. ಈ ಬಾರಿಯೂ ಐದು ವಿಕೆಟ್ಗಳನ್ನು ಕಬಳಿಸಿದ ಅಶ್ವಿನ್, ಆಸೀಸ್ ತಂಡದ ಕುಸಿತಕ್ಕೆ ಪ್ರಮುಖ ಕಾರಣರಾದರು.
ಒಟ್ಟು 28 ಓವರ್ಗಳನ್ನು ಮಾಡಿದ ಅಶ್ವಿನ್, 4 ಮೇಡನ್ ಓವರ್ ಮಾಡಿದರಲ್ಲದೇ, 90 ರನ್ ನೀಡಿದರು. ಆಸೀಸ್ ಬ್ಯಾಟಿಂಗ್ನ ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕದ ಕುಸಿತಕ್ಕೆ ಅಶ್ವಿನ್ ಪ್ರಮುಖ ಕಾರಣವಾದರು.
ಇದಲ್ಲದೇ, ಟೀಂ ಇಂಡಿಯಾದ ಇತರ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ ಹಾಗೂ ಹರ್ಭಜನ್ ಸಿಂಗ್ ಅವರೂ ತಲಾ ಎರಡು ವಿಕೆಟ್ಗಳನ್ನು ಪಡೆದರು.
ಮೊದಲ ಇನಿಂಗ್ಸ್ನಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದ ಭಜ್ಜಿಗೆ, ದ್ವಿತೀಯ ಇನಿಂಗ್ಸ್ನಲ್ಲಿ ಎರಡು ವಿಕೆಟ್ ಪಡೆದದ್ದು ಕೊಂಚ ತೃಪ್ತಿ ತಂದಿರಲಿಕ್ಕೂ ಸಾಕು.
ಅಶ್ವಿನ್, ಭಜ್ಜಿ ಹಾಗೂ ಜಡೇಜಾ - ಈ ಮೂವರ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ನಿಗದಿತ ಅಂತರದಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಪರಿಣಾಮವಾಗಿ, 175 ರನ್ಗಳಿಗೆ ಆಸೀಸ್ 9 ವಿಕೆಟ್ಗಳನ್ನು ಕಳೆದುಕೊಂಡಿತ್ತು.
ಆರಂಭಿಕರಾದ ಎಡ್ವರ್ಡ್ ಕೋವನ್, ವ್ಯಾಟ್ಸನ್, ಮೈಕಲ್ ಕ್ಲಾರ್ಕ್ ಹಾಗೂ ಡೇವಿಡ್ ವಾರ್ನರ್ ಅವರು ತಮ್ಮ ತಂಡಕ್ಕೆ ನೆರವಾಗಲು ಪ್ರಯತ್ನಿಸಿದರಾದರೂ, ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಅವರು ವಿಫಲರಾದರು.
ಮಧ್ಯಾಹ್ನದ ಭೋಜನ ವಿರಾಮಕ್ಕೂ ಮುನ್ನ ಅಶ್ವಿನ್ ಅವರು ಮಾಡಿದ ಕೊನಯ ಓವರ್ನ ಕೊನೆಯ ಎಸೆತಕ್ಕೆ ವ್ಯಾಟ್ಸನ್ ಅವರ ವಿಕೆಟ್ ಉರುಳಿತು. ಇದು ಭಾರತ ತಂಡಕ್ಕೆ ಸಿಕ್ಕ ಮೊದಲ ವಿಕೆಟ್. ಅಶ್ವಿನ್ ಬೌಲಿಂಗ್ಗೆ ಕೊಂಚ ಮುಂದೆ ಬಂದು ಬ್ಯಾಟ್ ಬೀಸಲು ಯತ್ನಿಸಿದ ವ್ಯಾಟ್ಸನ್ ಅವರ ಬ್ಯಾಟ್ನ ತುದಿಯನ್ನು ಸವರಿಕೊಂಡು ಬಂದ ಚೆಂಡು, ಮೊದಲ ಸ್ಲಿಪ್ನಲ್ಲಿದ್ದ ಸೆಹ್ವಾಗ್ ಅವರ ಕೈ ಸೇರಿತು. ಹೀಗೆ, ವ್ಯಾಟ್ಸನ್ ಔಟಾದರು.
ಇನ್ನು, ಭೋಜನ ವಿರಾಮದ ನಂತರದ ಅವಧಿಯಲ್ಲಿ ಆಸ್ಟ್ರೇಲಿಯಾ, ಅಗ್ರ ಕಮಾಂಕದ ಬ್ಯಾಟ್ಸ್ಮನ್ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಭೋಜನದ ನಂತರ ಪಂದ್ಯ ಮುಂದುವರಿದಾಗ, ಆಸೀಸ್ 34 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು.
ಆದರೆ, ಸಂಜೆಯ ಚಹಾ ವಿರಾಮದ ವೇಳೆಗೆ ಆಸೀಸ್ 128 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು.
ಇನ್ನು, ಆಸೀಸ್ನ ಮೊದಲ ಇನಿಂಗ್ಸ್ನಲ್ಲಿ ವೈಫಲ್ಯಕ್ಕೊಳಗಾಗಿದ್ದ ಫಿಲಿಪ್ ಹ್ಯೂಸ್ ಅವರು ಈ ಬಾರಿಯೂ ಹೆಚ್ಚು ಆಡಲಿಲ್ಲ. ಕೇವಲ ಮೂರು ಎಸೆತಗಳನ್ನು ಎದುರಿಸಿದ ಅವರು ಡಕ್ಔಟ್ ಆಗುವ ಮೂಲಕ, ಜಡೇಜಾಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಆಸೀಸ್ ತಂಡದ ಮತ್ತೊಬ್ಬ ಪ್ರಮುಖ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, ಹರ್ಭಜನ್ ಸಿಂಗ್ ಅವರ ಬೌಲಿಂಗ್ನಲ್ಲಿ ಔಟಾದರು. 61 ಎಸೆತಗಳನ್ನು ಎದುರಿಸಿದ ಅವರು ಗಳಿಸಿದ್ದು ಕೇವಲ 23 ರನ್. ಭಜ್ಜಿ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂಗೆ ಅವರು ಒಳಗಾದರು.
ಈ ಯಶಸ್ಸಿನ ಬಳಿಗೆ ಹರ್ಭಜನ್ ಸಿಂಗ್ ಅವರು, ಮ್ಯಾಥ್ಯೂ ವೇಡ್ ಅವರ ವಿಕೆಟ್ ಪಡೆಯುವ ಮೂಲಕ, ದಿನದಾಟದಲ್ಲಿ ತಮ್ಮ ಎರಡನೇ ಯಶಸ್ಸನ್ನು ಪಡೆದರು. ಭಜ್ಜಿ ಎಸೆತದಲ್ಲಿ ವೈಡ್ ಸ್ವೀಪ್ಗೆ ಪ್ರಯತ್ನಿಸಿದ ವೇಡ್, ಕ್ಲೀನ್ಬೌಲ್ಡ್ ಆಗಿ ಹೊರನಡೆದರು.
ಇನ್ನು, ದಿನಾಂತ್ಯದ ವೇಳೆಗೆ ಕ್ರೀಸ್ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಕ್ಲಾರ್ಕ್ ಅವರ ವಿಕೆಟ್ ಉರುಳಿತು. ಈ ವಿಕೆಟ್ ಗಳಿಸಿದ್ದು ಅಶ್ವಿನ್. ಅಶ್ವಿನ್ ಎಸೆತವನ್ನು ಬ್ಯಾಟ್ಫುಟ್ನಲ್ಲಿ ಆಡಲು ಹೋದ ಕ್ಲಾರ್ಕ್, ಎಲ್ಬಿಡಬ್ಲ್ಯೂ ಬಲೆಗೆ ಬಿದ್ದು, ಪೆವಿಲಿಯನ್ಗೆ ಹಿಂದಿರುಗಿದರು.
ಇದಾದ ನಂತರ, ಪ್ಯಾಟಿನ್ಸನ್ ಅವರು ಅಶ್ವಿನ್ ಅವರಿಗೆ ನಾಲ್ಕನೇ ಬಲಿಯಾದರು. ಅಶ್ವಿನ್ ಬೌಲಿಂಗ್ನಲ್ಲಿ ಸ್ಲಿಪ್ನಲ್ಲಿ ನಿಂತಿದ್ದ ಸೆಹ್ವಾಗ್ಗೆ ಕ್ಯಾಚ್ ನೀಡಿದ ಅವರು, ಕ್ರೀಸ್ನಿಂದ ಹೊರನಡೆದರು.
ಏತನ್ಮಧ್ಯೆ, ಮಿಚೆಲ್ ಸ್ಟಾರ್ಕ್ ಒಂದೆರಡು ಬೌಂಡರಿಗಳನ್ನು ಬಾರಿಸಿದರೂ, ಅಶ್ವಿನ್ ಬೌಲಿಂಗ್ನಲ್ಲಿ ತೆಂಡೂಲ್ಕರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ದಿನಾಂತ್ಯಕ್ಕೆ ಭಾರತವನ್ನು ಕಾಡಿದ ಹೆನ್ರೀಕೆಸ್, ಶತಕಾರ್ಧ ಗಳಿಸಿ ಮುನ್ನುಗ್ಗಿದರು. ಕೊನೆಯ ವಿಕೆಟ್ಗಾಗಿ ನಥಾನ್ ಲಯಾನ್ ಅವರೊಂದಿಗೆ ಬ್ಯಾಟಿಂಗ್ ಮಾಡಿದ ಅವರು, ಮುರಿಯದ 57 ರನ್ ಜೊತೆಯಾಟ ನೀಡಿದ್ದಾರೆ.
ದಿನಾಂತ್ಯಕ್ಕೆ ಹೆನ್ರೀಕೆಸ್ (75) ಹಾಗೂ ಲಯಾನ್ (8) ಅಜೇಯರಾಗಿ ಉಳಿದಿದ್ದಾರೆ.
ಸ್ಕೋರ್ಬೋರ್ಡ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 380
ಭಾರತ ಪ್ರಥಮ ಇನಿಂಗ್ಸ್ 572/10 (154.3 ಓವರ್)
(ಭಾನುವಾರ ದಿನಾಂತ್ಯಕ್ಕೆ 515/8)
ಮಹೇಂದ್ರ ಸಿಂಗ್ ಧೋನಿ ಸಿ ವೇಡ್ ಬಿ ಪ್ಯಾಟಿನ್ಸನ್ 224, ಭುವನೇಶ್ವರ ಕುಮಾರ್ ಸಿ ಕ್ಲಾರ್ಕ್ ಬಿ ಸಿಡ್ಲ್ 38, ಇಶಾಂತ್ ಶರ್ಮಾ ಅಜೇಯ 4. ಇತರೆ 32
ವಿಕೆಟ್ ಪತನ: 9-546, 10-572.
ಬೌಲಿಂಗ್: ಸ್ಟಾರ್ಕ್ 25-3-75-0, ಪ್ಯಾಟಿನ್ಸನ್ 30-6-96-5, ಸಿಡ್ಲ್ 24.3-5-66-1, ಲಯಾನ್ 47-1-215-3, ಹೆನ್ರೀಕೆಸ್ 17-4-48-1, ಕ್ಲಾರ್ಕ್ 8-2-25-0, ವಾರ್ನರ್ 3-0-19-0.
ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 232/9 (84 ಓವರ್)
ಕೋವನ್ ಎಲ್ಬಿಡಬ್ಲ್ಯೂ ಬಿ ಅಶ್ವಿನ್ 32, ವ್ಯಾಟ್ಸನ್ ಸಿ ಸೆಹ್ವಾಗ್ ಬಿ ಅಶ್ವಿನ್ 17, ವಾರ್ನರ್ ಎಲ್ಬಿಡಬ್ಲ್ಯೂ ಬಿ ಹರ್ಭಜನ್ ಸಿಂಗ್ 23, ಹ್ಯೂಸ್ ಸಿ ಸೆಹ್ವಾಗ್ ಬಿ ಜಡೇಜಾ 0, ಮೈಕಲ್ ಕ್ಲಾರ್ಕ್ ಎಲ್ಬಿಡಬ್ಲ್ಯೂ ಬಿ ಅಶ್ವಿನ್ 31, ವೇಡ್ ಬೌಲ್ಡ್ ಬಿ ಹರ್ಭಜನ್ 8, ಹೆನ್ರಿಕೇಸ್ ಅಜೇಯ 75, ಸಿಡ್ಲ್ ಬೌಲ್ಡ್ ಬಿ ಜಡೇಜಾ 2, ಪ್ಯಾಟಿನ್ಸನ್ ಸಿ ಸೆಹ್ವಾಗ್ ಬಿ ಅಶ್ವಿನ್ 11, ಸ್ಟಾರ್ಕ್ ಸಿ ತೆಂಡೂಲ್ಕರ್ ಬಿ ಅಶ್ವಿನ್ 8, ಲಯಾನ್ ಅಜೇಯ 8. ಇತರೆ 17
ವಿಕೆಟ್ ಪತನ: 1-34, 2-64, 3-65, 4-101, 5-121, 6-131, 7-137, 8-161, 9-175.
ಬೌಲಿಂಗ್: ಅಶ್ವಿನ್ 28-4-90-5, ಹರ್ಭಜನ್ ಸಿಂಗ್ 27-6-55-2, ಜಡೇಜಾ 26-5-68-2, ಇಶಾಂತ್ ಶರ್ಮಾ 3-1-2-0.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


