ನವದೆಹಲಿ: 'ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸವಾಗಿದೆ. ಆದರೆ, ಭಾರತೀಯ ಬಾಕ್ಸಿಂಗ್ ಕ್ಷೇತ್ರದ ಇತ್ತೀಚೆಗಿನ ಬೆಳವಣಿಗೆಗಳು ಬೇಸರ ತರಿಸಿವೆ. ಆದ್ದರಿಂದ, ಒಂದೆಡೆ ಸಂತೋಷ, ಮತ್ತೊಂದೆಡೆ ಬೇಸರ- ಎರಡೂ ಆಗುತ್ತಿವೆ...' ಇವು ಈ ಬಾರಿಯ ಪದ್ಮಭೂಷಣ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿರುವ ಬಾಕ್ಸರ್ ಮೇರಿ ಕೋಂ ಅವರ ನುಡಿಗಳು. ಪ್ರಶಸ್ತಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮೇರಿ ಕೊಂ ಈ ರೀತಿ ಪ್ರತಿಕ್ರಯಿಸಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ವತಿಯಿಂದ ಭಾರತೀಯ ಬಾಕ್ಸಿಂಗ್ ಸಂಸ್ಥೆ ಅಮಾನತುಗೊಂಡಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.
'ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಲಭಿಸಿದ್ದಕ್ಕೆ ನನಗೆ ಆಶ್ಚರ್ಯ ಹಾಗೂ ಸಂತಸವಾಗಿದೆ. ಆದರೆ, ಇದೇ ಸಮಯದಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ಅವಕೃಪೆಗೆ ಭಾರತೀಯ ಬಾಕ್ಸಿಂಗ್ ಸಂಸ್ಥೆ ಒಳಗಾಗಿರುವುದು ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಭಾರತೀಯ ಬಾಕ್ಸರ್ಗಳಿಗೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡಲು ತೊಂದರೆಯಾಗುತ್ತದೆ' ಎಂದು ಅವರು ತಿಳಿಸಿದರು.