ಕಟಕ್: ಈ ಮಾಸಾಂತ್ಯಕ್ಕೆ ಆರಂಭವಾಗಲಿರುವ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಸೋಮವಾರ ಇಲ್ಲಿನ ಬಾರಾಬಾತಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತು.
ಪಾಕಿಸ್ತಾನ ಆಟಗಾರರು ಭಾರತದಲ್ಲಿ ನಡೆಯುವ ಯಾವುದೇ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳ ಕೂಡದೆಂಬ ಕೂಗು ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನದ ಆಟಗಾರ್ತಿಯರಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಸೋಮವಾರ ಬೆಳಗ್ಗೆಯಿಂದ ಸುಮಾರು ನಾಲ್ಕು ತಾಸುಗಳ ಕಾಲ ಅಭ್ಯಾಸ ನಡೆಸಿದರು.
ಆದರೆ, ಮಧ್ಯಾಹ್ನದ ಸುಮಾರಿಗೆ ಕೆಲ ಸಂಘಟನೆಗಳಿಗೆ ಸೇರಿದ ಜನರ ಗುಂಪೊಂದು ಕ್ರೀಡಾಂಗಣದ ಮುಂದೆ ಕೆಲ ಕಾಲ ಪಾಕಿಸ್ತಾನ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ವಿರೋಧ ವ್ಯಕ್ತಪಡಿಸಿದರು. ಕ್ರೀಡಾಂಗಣಕ್ಕೆ ಬಿಗಿ ಭದ್ರತೆಯಿದ್ದಿದ್ದುರಿಂದ ಅವರು ಮೈದಾನವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ.