ಭಾರತಕ್ಕೆ ಸುಲಭ ಜಯ

ಭಾರತಕ್ಕೆ ಸುಲಭ ಜಯ
Updated on: 

ಮುಂಬೈ: ಪೂನಂ ರೌತ್ (69) ಅರ್ಧ ಶತಕ ಮತ್ತು ವೇಗಿ ಜೂಲನ್ ಗೋಸ್ವಾಮಿ (3 ವಿಕೆಟ್) ಮೊನಚಾದ ಬೌಲಿಂಗ್ ನೆರವಿನೊಂದಿಗೆ ಭಾರತ ತಂಡ, ಸೋಮವಾರ ನಡೆದ ಮಹಿಳಾ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವನಿತೆಯರ ವಿರುದ್ಧ 8 ವಿಕೆಟ್ ಅಂತರದ ಜಯ ಸಾಧಿಸಿದರು.
ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ಭಾರತ ವನಿತೆಯರ ತಂಡ, ಎದುರಾಳಿ ನ್ಯೂಜಿಲೆಂಡ್ ತಂಡವನ್ನು 47.5 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟ್ ಮಾಡಿತು. ನಂತರ 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 43.3 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಜಯದ ದಡ ಸೇರಿತು.
89 ಎಸೆತಗಳನ್ನು ಎದುರಿಸಿದ ಭಾರತದ ಆರಂಭಿಕ ಆಟಗಾರ್ತಿ ಪೂನಂ ರೌತ್ ಅರ್ಧ ಶತಕದಲ್ಲಿ 12 ಬೌಂಡರಿಗಳು ಸೇರಿದ್ದವು. ತಿರುಶ್ ಕಾಮಿನಿ 43 ಗಳಿಸಿದರೆ, ಹರ್ಮನ್‌ಪ್ರೀತ್ ಕೌರ್ 46 ಮತ್ತು ನಾಯಕ ಮಿಥಾಲಿ ರಾಜ್ ಅಜೇಯ 36 ರನ್ ಗಳಿಸಿದರು. ಆರಂಭಿಕರಾದ ರೌತ್ ಮತ್ತು ಕಾಮಿನಿ ಅವರು ಮೊದಲ ವಿಕೆಟ್ ಜತೆಯಾಟದಲ್ಲಿ 119 ರನ್ ಗಳಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಆರಂಭಿಕ ಆಟಗಾರ್ತಿಯರು ನಿರ್ಗಮಿಸಿದ ನಂತರ ಕೌರ್ ಮತ್ತು ಮಿತಾಲಿ ರಾಜ್ ತಂಡವನ್ನು ಜಯದ ದಡಕ್ಕೆ ಸೇರಿಸಿದರು. ಇದಕ್ಕೂ ಮುನ್ನ ಗೋಸ್ವಾಮಿ ನಾಯಕತ್ವದ ಇಂಗ್ಲೆಂಡ್ ಬೌಲರ್‌ಗಳು ನೀಡಿದ ಪ್ರದರ್ಶನ ಆಕರ್ಷಕವಾಗಿತ್ತು. ಕಿವೀಸ್ ಆಟಗಾರ್ತಿಯರು 26 ರನ್ ಗಳಿಸುವಷ್ಟರಲ್ಲೇ ಭಾರತೀಯ ಬೌಲರ್‌ಗಳು ಮೂರು ವಿಕೆಟ್ ಕಬಳಿಸಿದ್ದು, ಎದುರಾಳಿ ತಂಡ ಆರಂಭಿಕ ಆಘಾತ ಕಾಣುವಂತಾಯಿತು.
ನ್ಯೂಜಿಲೆಂಡ್‌ನ ಅಪಾಯಕಾರಿ ಆಟಗಾರ್ತಿ ನಾಯಕಿ ಸೂಜೀ ಬೇಟ್ಸ್ (27) ಅವರ ವಿಕೆಟ್ ಕಬಳಿಸುವಲ್ಲಿ ಭಾರತದ ಅಮಿತಾ ಮಿಶ್ರಾ ಯಶಸ್ವಿಯಾದರು. ಗೋಸ್ವಾಮಿ ಮೂರು ವಿಕೆಟ್ ಪಡೆದರೆ, ಎಕ್ತಾ ಬಿಸ್ಟ್ ಮತ್ತು ಗೌಹರ್ ಸುಲ್ತಾನ್ ಅವರು ತಲಾ ಎರಡು ವಿಕೆಟ್ ಕಬಳಿಸಿದರು.
ಫ್ರಾನ್ಸಸ್ ಮೆಕಿ (69) ಅವರು ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಸರಾ ಮೆಕ್‌ಲಾಷನ್ (56) ಅವರು ನ್ಯೂಜಿಲೆಂಡ್ 200 ರನ್‌ಗಳ ಗಡಿ ದಾಟಲು ನೆರವಾದರು. ಇಬ್ಬರ ಮೊತ್ತದಲ್ಲೂ ತಲಾ ಏಳು ಬೌಂಡರಿಗಳು ಸೇರಿದ್ದವು.
ಫ್ರಾನ್ಸಸ್ ಮೆಕಿ ಮತ್ತು ಸರಾ ಮೆಕ್‌ಲಾಷನ್ ಅವರನ್ನು ಹೊರತುಪಡಿಸಿದರೆ, ಉಳಿದ ಆಟಗಾರ್ತಿಯರು ಬ್ಯಾಟಿಂಗ್‌ನಲ್ಲಿ ಮಿಂಚಲಿಲ್ಲ. ಹೀಗಾಗಿ ಅದು ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 201/10 (47.5 ಓವರ್)
ಫ್ರಾನ್ಸಸ್ ಮೆಕಿ 69, ಸರಾ ಮೆಕ್‌ಲಾಷನ್ 56. ಬೌಲಿಂಗ್: ಗೋಸ್ವಾಮಿ 26/3, ಬೀಸ್ಟ್ 23/2.
ಭಾರತ: 204/2 (43.3 ಓವರ್)
ರೌತ್ 69, ಕೌರ್ 46.
ಬೌಲಿಂಗ್: ಲೀ ತಾಹೂಹೂ 26/1, ರಕ್ 48/1

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com