ಜೊಕೋವಿಚ್ಗೆ ಅಚ್ಚರಿಯ ಸೋಲು
ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಚ್ ಅವರು, ಮಿಯಾಮಿ ಮಾಸ್ಟರ್ಸ್ನ ನಾಲ್ಕನೇ...

ಮಿಯಾಮಿ: ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಚ್ ಅವರು, ಮಿಯಾಮಿ ಮಾಸ್ಟರ್ಸ್ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸೋಲಿನ ಶಾಕ್ ಅನುಭವಿಸಿದ್ದಾರೆ. ವಿಶ್ವದ ನಂಬರ್ಒನ್ ಆಟಗಾರ ಜೊಕೋವಿಚ್, ಬುಧವಾರ ನಡೆದ ಪಂದ್ಯದಲ್ಲಿ ಅವರು ವಿಶ್ವದ 15ನೇ ಶ್ರೇಯಾಂಕದ ಟಾಮಿ ಹಾಸ್ (ಜರ್ಮನಿ) ಅವರ ವಿರುದ್ಧ 6-2, 6-4 ಅಂತರದಲ್ಲಿ ಸೋಲು ಕಂಡು, ಟೂರ್ನಿಯಿಂದ ಆಚೆ ನಡೆದರು.
80 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಸೆಟ್ನಿಂದಲೂ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ ಹಾಸ್, ಜೊಕೋವಿಚ್ ಮೇಲೆ ಅಕ್ಷರಶಃ ಸಮರ ಹೂಡಿದ್ದರು. ಎದುರಾಳಿಯ ಉತ್ತಮ ಆಟದೆದುರು ಮಂಕಾದ ಜೊಕೋವಿಚ್, ಮೊದಲ ಸೆಟ್ನಲ್ಲಿ ಅಷ್ಟಾಗಿ ಪ್ರತಿರೋಧವನ್ನು ತೋರಲೇ ಇಲ್ಲ. ಹಾಗಾಗಿ, ಹಾಸ್ ಅವರು ಮೊದಲ ಸೆಟ್ನಲ್ಲಿ ಅನಾಯಾಸದ ಗೆಲುವು ಪಡೆದರು.
ಆದರೆ, ದ್ವಿತೀಯ ಸೆಟ್ನಲ್ಲಿ ಕೊಂಚ ಎಚ್ಚರಿಕೆಯ ಆಟವಾಡಿದ ಜೊಕೋವಿಚ್, ಹಾಸ್ ಅವರನ್ನು ಹಿಡಿತಕ್ಕೆ ತಂದುಕೊಳ್ಳಲು ಪ್ರಯತ್ನಪಟ್ಟರು. ಆದರೆ, ಹಾಸ್ ಅವರ ಮಿಂಚಿನ ಆಟದ ಮುಂದೆ ಇದು ಯಶಸ್ವಿಯಾಗಲಿಲ್ಲ. ಅಲ್ಲದೇ, ಎರಡನೇ ಸೆಟ್ನ ಒಂದು ಹಂತದಲ್ಲಿ ಜೊಕೋವಿಚ್ ಮಾಡಿದ ಕೆಲ ತಪ್ಪುಗಳು ಹಾಸ್ ಅವರಿಗೆ ವರದಾನವಾಗಿ ಪರಿಣಮಿಸಿದವು. ಹಾಗಾಗಿ, ಹಾಸ್ ಮತ್ತು ಜೊಕೋವಿಚ್ ನಡುವಿನ ಅಂಕಗಳಲ್ಲಿ ಅಂತರ ಹೆಚ್ಚುತ್ತಾ ಹೋಯಿತು. ಜೊಕೋವಿಚ್ ಅವರ ಪ್ರತಿರೋಧದ ನಡುವೆಯೂ ಪರಿಶ್ರಮ ವಹಿಸಿ, ಎರಡನೇ ಸೆಟ್ ಗೆಲ್ಲುವಲ್ಲಿ ಯಶಸ್ವಿಯಾದ ಹಾಸ್, ಈ ಸೆಟ್ನೊಂದಿಗೆ ಪಂದ್ಯದಲ್ಲೂ ಜಯಶಾಲಿಯಾಗಿ ಹೊರಹೊಮ್ಮಿದರು.
2007, 2011, 2012ರಲ್ಲಿ ಮಿಯಾಮಿ ಮಾಸ್ಟರ್ಸ್ ಪಂದ್ಯಾವಳಿ ಗೆದ್ದಿದ್ದ ನೊವಾಕ್ ಜೊಕೋವಿಚ್, ತಮಗಿಂತಲೂ ಕಿರಿಯ ಶ್ರೇಯಾಂಕದ ಆಟಗಾರನಾದ ಹಾಸ್ ವಿರುದ್ಧ ಸೋತಿದ್ದು ಅವರು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.
1999ರಿಂದ ವೃತ್ತಿಪರ ಟೆನಿಸ್ಗೆ ಕಾಲಿಟ್ಟಿರುವ ಹಾಸ್ ಅವರು, ಹೀಗೆ, ವಿಶ್ವದ ಮೊದಲ ಶ್ರೇಯಾಂಕದ ಆಟಗಾರರನ್ನು ಮಣಿಸುತ್ತಿರುವುದು ಇದು ಎರಡನೇ ಬಾರಿ. ಗ್ರಾಂಡ್ ಸ್ಲಾಮ್ ಕಪ್ ಪಂದ್ಯಾವಳಿಯಲ್ಲಿ ಅವರು, ಅಂದಿನ ನಂಬರ್ಒನ್ ಶ್ರೇಯಾಂಕದ ಆಂಡ್ರಿ ಅಗಾಸ್ಸಿ ಅವರನ್ನು 3-0 ಅಂತರದಲ್ಲಿ ಪರಾಭವಗೊಳಿಸಿದ್ದರು.
ಇತರ ಫಲಿತಾಂಶ
ಬುಧವಾರ ನಡೆದ ಪುರುಷರ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯಗಳ ಫಲಿತಾಂಶಗಳ ಫಲಿತಾಂಶ ಹೀಗಿವೆ.
ಸೋಂಗಾಗೆ ಸೋಲು: ಮ್ಯಾರಿನ್ ಸಿಲಿಕ್ ಹಾಗೂ ಜೊ-ವೈಲ್ಡ್ಫ್ರೆಡ್ ಸೋಂಗಾ ಅವರ ನಡುವೆ ನಡೆದ ಪಂದ್ಯದಲ್ಲಿ ಸಿಲಿಕ್ ಅವರು 7-5, 7-6 (7-4) ಅಂತರದಲ್ಲಿ ಜಯ ಸಾಧಿಸಿದರು.
ತಿಪ್ಸಾರ್ವಿಚ್ ಪರಾಭವ: ಗಿಲ್ಸ್ ಸೈಮನ್ ಹಾಗೂ ಜ್ಯಾಂಕೋ ತಿಪ್ಸರ್ವಿಚ್ ಅವರ ವಿರುದ್ಧ ನಡೆದ ಪಂದ್ಯದಲ್ಲಿ ಸೈಮನ್ ಅವರು 5-7, 6-2, 6-2 ಅಂತರದಲ್ಲಿ ಗೆಲುವು ಸಾಧಿಸಿದರು.
ಬೆರ್ಡಿಚ್ಗೆ ಜಯ: ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸ್ಯಾಮ್ ಕ್ಯುರಿ ವಿರುದ್ಧ ಸೆಣೆಸಿದ್ದ ಥಾಮಸ್ ಬೆರ್ಡಿಚ್ ಅವರು, 6-1, 6-1 ಅಂತರದಲ್ಲಿ ಜಯ ಸಾಧಿಸಿದರು.
ಮರ್ರೆಗೆ ಗೆಲವು: ಆ್ಯಂಡಿ ಮರ್ರೆ ಹಾಗೂ ಆ್ಯಂಡ್ರಿಯಾಸ್ ಸೆಪ್ಪಿ ಅವರ ನಡುವಿನ ಪಂದ್ಯದಲ್ಲಿ ಮರ್ರೆ ಅವರು, 6-2, 6-4 ಅಂತರದಲ್ಲಿ ಗೆಲವು ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


