ಕ್ರೀಡೆ

ಶ್ರೀನಿವಾಸನ್ ಬುಡಕ್ಕೇ ಸ್ಪಾಟ್ ಫಿಕ್ಸ್?

Published On :

ಮುಂಬೈ: ಫಿಕ್ಸಿಂಗ್ ಕಳಂಕಿತರಿಗೆ ತಕ್ಕ ಶಾಸ್ತಿಯಾಗಲಿದೆ ಎಂದು ಹೇಳಿಕೆ ನೀಡುತ್ತಾ, ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತಿದ್ದ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಬುಡಕ್ಕೆ ಈಗ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಚಾಚಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧಿಸಲಾಗಿರುವ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಅವರೊಂದಿಗೆ ನಿಕಟವರ್ತಿಯಾಗಿದ್ದ ಎನ್ನಲಾಗಿರುವ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಅವರನ್ನು ಮುಂಬೈ ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ. ಹೀಗಾಗಿ ಒಂದು ವೇಳೆ ಗುರುನಾಥ್ ಪ್ರಕರಣದಲ್ಲಿ ಸಿಲುಕಿಕೊಂಡರೆ ಶ್ರೀನಿವಾಸನ್ ಬಡಕ್ಕೂ ಪ್ರಕರಣ ಚಾಚಿಕೊಳ್ಳುವ ಸಾಧ್ಯತೆಗಳಿವೆ.
'ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರಾದ ಶ್ರೀನಿವಾಸನ್ ಅಳಿಯನಿಗೆ ವಿಂದೂ ಹಲವಾರು ಬಾರಿ ಮೊಬೈಲ್ ಮೂಲಕ ಕರೆ ಮಾಡಿದ್ದಾರೆ. ವಿಂದೂ ಸಿಂಗ್ ಮೇಲಿಂದ ಮೇಲೆ ಕರೆ ಮಾಡಿರುವ ವ್ಯಕ್ತಿಯನ್ನು ನಾವು ಶೀಘ್ರದಲ್ಲೇ ವಿಚಾರಣೆಗೊಳಪಡಿಸಬಹುದು' ಎಂದು ಸ್ಪಾಟ್ ಫಿಕ್ಸಿಂಗ್ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದರೆ, ಚೆನ್ನೈ ಫ್ರಾಂಚೈಸಿ ಮಾಲೀಕರ ಸಂಬಂಧಿ ಫಿಕ್ಸಿಂಗ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಸಹ ಪೊಲೀಸರು ತಿಳಿಸಿದ್ದಾರೆ. 'ವಿಂದೂ ಸ್ವತಃ ಬಾಲಿವುಡ್ ನಟರಾಗಿದ್ದಾರೆ. ಅವರ ಮೊಬೈಲ್‌ನಲ್ಲಿ ಹಲವಾರು ಸಿಲೆಬ್ರಿಟಿಗಳ ಹೆಸರುಗಳಿವೆ. ಆದರೆ, ಮೊಬೈಲ್‌ನಲ್ಲಿರುವ ಹೆಸರಿನ ನಟರು ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ನಾವು ಈಗಲೇ ಯಾವುದೇ ರೀತಿಯ ಸಾಕ್ಷ್ಯಗಳನ್ನು ಹೊಂದಿಲ್ಲ' ಎಂದು ಬಾಲಿವುಡ್ ಸೆಲೆಬ್ರಿಟಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ವಿಂದೂ ಈ ಮುನ್ನವೂ ನಡೆದ ಐಪಿಎಲ್ ಆವೃತ್ತಿಗಳಲ್ಲೂ ಬೆಟ್ಟಿಂಗ್ ಅಥವಾ ಫಿಕ್ಸಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ ಪೊಲೀಸರು.
ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ 49 ವರ್ಷದ ನಟ ವಿಂದೂ ಧಾರಾ ಸಿಂಗ್ ಅವರನ್ನು ಮಂಗಳವಾರ ಬಂಧಿಸಲಾಗಿತ್ತು. ಹಿಂದಿ ಬಿಗ್ ಬಾಸ್ ಮೂರನೇ ಆವೃತ್ತಿ ಗೆದ್ದುಕೊಂಡಿದ್ದ ವಿಂದೂ, ಪ್ರಕರಣದಲ್ಲಿ ಬಂಧಿಸಲಾಗಿರುವ ಹಲವಾರು ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ಹಲವಾರು ಐಪಿಎಲ್ ಪಂದ್ಯಗಳು ಪಾರ್ಟಿಗಳಲ್ಲಿ ಸೆಲೆಬ್ರಿಟಿಗಳೊಂದಿಗೆ ವಿಂದೂ ಕಾಣಿಸಿಕೊಂಡಿದ್ದಾರೆ.

ಯಾರಿವನು ಗುರುನಾಥ್?
ನವದೆಹಲಿ:
ಬಿಸಿಸಿಐ ಅಧ್ಯಕ್ಷ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದ ಮಾಲೀಕರಾಗಿರುವ ಎನ್. ಶ್ರೀನಿವಾಸನ್ ಪುತ್ರಿ ರೂಪಾ ಪತಿಯೇ ಗುರುನಾಥ್.
ಗುರುನಾಥ್ ಶ್ರೀನಿವಾಸನ್ ಒಡೆತನದ ಇಂಡಿಯಾ ಸಿಮೆಂಟ್ಸ್ ಕಂಪನಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಚೆನ್ನೈ ತಂಡದ ಪ್ರಿನ್ಸಿಪಾಲ್ ಮತ್ತು ಸಿಇಒ ಸಹ ಹೌದು. ಗುರುನಾಥ್ ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ಮತ್ತು ಟಿವಿ ಧಾರಾವಾಹಿ ನಿರ್ಮಾಣ ಸಂಸ್ಥೆಯಾದ ಎವಿಎಂ ಒಡೆತನ ಹೊಂದಿರುವ ಕುಟುಂಬದಿಂದ ಬಂದಿದ್ದಾರೆ. ಎವಿಎಂನ ಬಾಲಸುಬ್ರಮಣ್ಯನ್ ಅವರ ಪುತ್ರನೇ ಗುರುನಾಥ್ ಆಗಿದ್ದಾರೆ.
ಬಂಧಿತ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಹೇಳಿಕೆಯ ಹಿನ್ನೆಲೆಯಲ್ಲಿ ಗುರುನಾಥ್ ಪ್ರಕರಣದಲ್ಲಿದ ಸಿಲುಕಿರುವ ಸುದ್ದಿ ಬಹಿರಂಗವಾಗಿದೆ.
ಚೆನ್ನೈ ನಂಬರ್‌ಗಳಿಗೆ ವಿಂದೂ ಹಲವಾರು ಬಾರಿ ಕರೆ ಮಾಡಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜತೆ ಸಂಪರ್ಕ ಹೊಂದಿರುವ ಕುರಿತು ವರದಿಯಾಗಿತ್ತು.
ಆದರೆ, ಗುರುನಾಥ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಕುರಿತು ಇದುವರೆಗೂ ಯಾವುದೇ ರೀತಿಯ ಸಾಕ್ಷ್ಯಗಳು ದೊರಕಿಲ್ಲ. ಆದರೆ, ಭಾರೀ ಪ್ರಮಾಣದ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನವಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.