ಕ್ರೀಡೆ

ವಿಶ್ವಾಸದಲ್ಲಿ ಜೋಲ್ ಬಳಗ

Published On :

ದುಬೈ: ಲೀಗ್ ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ವಿಶ್ವಾಸದಲ್ಲಿರುವ ಹಾಲಿ ಚಾಂಪಿಯನ್ ಭಾರತ, 19 ವರ್ಷದೊಳಗಿನ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶನಿವಾರ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.     ಫಾರ್ಮ್‌ನಲ್ಲಿರುವ ಭಾರತ ತಂಡ, ಅಂತಿಮ ಲೀಗ್ ಪಂದ್ಯದಲ್ಲಿ 245 ರನ್‌ಗಳ ಭಾರಿ ಅಂತರದಿಂದ ಗೆದ್ದು, ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಅಲ್ಲದೆ, ಬ್ಯಾಟಿಂಗ್‌ಗೆ ಅನುಕೂಲವಿಲ್ಲದ ದುಬೈ ಅಂತಾರಾಷ್ಟ್ರೀಯ ಪಿಚ್‌ನಲ್ಲಿ ವಿಜಯ್ ಜೋಲ್ ನಾಯಕತ್ವದ ಭಾರತ ತಂಡ 300ಕ್ಕೂ ಅಧಿಕ ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಏಳನೇ ಅತಿ ಹೆಚ್ಚು ಅಂತರದಿಂದ ಜಯ ಕಂಡಿತ್ತು.      ಇನ್ನೊಂದೆಡೆ ಬಲಿಷ್ಠ ಆಟಗಾರರನ್ನು ಹೊಂದಿರುವ ಮತ್ತು ಪಂದ್ಯಾವಳಿಯಲ್ಲಿ ಆಕರ್ಷಕ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.ಭಾರತ ತಂಡ, ಪಂದ್ಯಾವಳಿಯ ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 40 ರನ್‌ಗಳ ಅಂತರದಿಂದ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು. ಆದರೆ, ನಂತರ ನಡೆದ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕೊಂಚ ಪೇಚಾಟ ಅನುಭವಿಸಿತ್ತಾದರೂ, 5 ವಿಕೆಟ್‌ಗಳ ಅಂತರದಿಂದ ಜಯ ಕಂಡುಕೊಂಡಿತ್ತು. ತಂಡದ ನಾಯಕತ್ವ ವಹಿಸಿಕೊಂಡಿರುವ ವಿಜಯ್ ಜೋಲ್ ಅವರು ಬ್ಯಾಟಿಂಗ್‌ನಲ್ಲಿ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ತಂಡ ಆಡಿರುವ ಕಳೆದ ಎಂಟು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಪ್ರಮುಖ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
 ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ 19 ವರ್ಷದ ಸಂಜು ಸ್ಯಾಮ್ಸನ್ ದುರ್ಬಲ ಪಪುವಾ ನ್ಯೂ ಗಿನಿ ವಿರುದ್ಧ ಕೇವಲ 48 ಎಸೆತಗಳಲ್ಲಿ 85 ರನ್ ದಾಖಲಿಸಿದ್ದರು. ಇದು ಸಂಜು ಫಾರ್ಮ್‌ನಲ್ಲಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿತ್ತು.ಭಾರತ ತಂಡಕ್ಕೆ ಆರಂಭಿಕರು ತಕ್ಕ ಬುನಾದಿ ಹಾಕಿದರೆ, ಮಧ್ಯಮ ಕ್ರಮಾಂಕದಲ್ಲಿ ಜೋಲ್ ಮತ್ತು ಸ್ಯಾಮ್ಸನ್ ಆಂಗ್ಲ ಬಾಲರ್‌ಗಳನ್ನು ಕಾಡಲಿದ್ದಾರೆ. ಆರಂಭಿಕರಾದ ಅಂಕುಶ್ ಬೈನ್ಸ್ ಮತ್ತು ಅಖಿಲ್ ಹೆರ್ವಾಡ್ಕರ್ ಅವರು ಕಳೆದ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಭಾರತದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಪಂದ್ಯಾವಳಿಯಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕುಲ್ದೀಪ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಗಳಿವೆ.
ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವೈಫಲ್ಯ ಕಂಡಿದ್ದ ಕುಲ್ದೀಪ್, ಪಪುವಾ ನ್ಯೂ ಗಿನಿ ವಿರುದ್ಧ ಕೇವಲ 10 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಈಗ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ನಾಯಕ ಜೋಲ್ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ಕುಲ್ದೀಪ್ ಮೇಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.