ಪಂಚ ಹೆಗ್ಗುರುತು!

ಇಡೀ ತಂಡದ ನಾಡಿಮಿಡಿತ ಈತನ ಕೈಯಲ್ಲಿರುತ್ತದೆ. ತಂಡದ ಸಾಮರ್ಥ್ಯ, ದೌರ್ಬಲ್ಯಗಳು ಮೈದಾನದಲ್ಲೇ ಇರುವ ನಾಯಕನಿಗಿಂತಲೂ ಹೆಚ್ಚು ಈತನಿಗೆ ತಿಳಿದಿರುತ್ತವೆ. ಕ್ರಿಕೆಟ್ ಮಟ್ಟಿಗೆ ನಾವಾತನಿಗೆ ಗುರುವಿನ ಸ್ಥಾನವನ್ನು ಕೊಟ್ಟು ಗೌರವಿಸಿದ್ದೇವೆ. ಹೀಗಾಗಿಯೇ ಕೋಚ್ ಅನ್ನುವುದಕ್ಕಿಂತಲೂ 'ಗುರು' ರೈಟ್, 'ಗುರು' ಗ್ಯಾರಿ ಎಂದರೇನೆ ನಮಗೆ ಹೆಚ್ಚು ಆಪ್ತವೆನ್ನಿಸುತ್ತದೆ. ಉತ್ತಮ ಕ್ರಿಕೆಟ್ ಆಟಗಾರನೊಬ್ಬ ಹೇಗೆ ಉತ್ತಮ ನಾಯಕನಾಗಬೇಕೆಂದಿಲ್ಲವೋ ಅದೇ ರೀತಿ ಉತ್ತಮ ಆಟಗಾರ ಉತ್ತಮ ಕೋಚ್ ಎಂದೆನ್ನಿಸಿಕೊಳ್ಳಬೇಕೆಂದಿಲ್ಲ. ಆದರೆ, ನಾಯಕತ್ವದ ಎಲ್ಲ ಗುಣಗಳು ಕೋಚ್ಗೆ ಇರಬೇಕಾದ್ದು ಮುಖ್ಯ. ಹಾಗಾಗಿಯೇ ಆತ ಆಟವಾಡದ ನಾಯಕ. ಗೆಲುವೋ ಸೋಲೋ ಅಂತೂ ಎರಡರಲ್ಲೂ ಆತನ ಪಾಲು ಇದ್ದೇ ಇರುತ್ತದೆ.
ಪ್ರಸ್ತುತ ಟೀಂ ಇಂಡಿಯಾ ಕೋಚ್ ಡಂಕನ್ ಫ್ಲೆಚರ್ ಸ್ಥಾನ ಅಲುಗಾಡುತ್ತಿರುವ ಸಂದರ್ಭದಲ್ಲಿ ಅದ್ಭುತ ಯಶಸ್ಸು ಸಾಧಿಸಿದ ಪಂಚ ಮಹಾ ಗುರುಗಳ ಪುಟ್ಟ ನೆನಪು...
ಜಾನ್ ಬುಕಾನನ್
ವಿನ್ ವಿನ್ ವಿನ್... ಕಳೆದ ದಶಕ ಆಸ್ಟ್ರೇಲಿಯಾ ತಂಡದ ಶಬ್ದಕೋಶದಲ್ಲಿ ಇಂಥ ಪದವೊಂದು ಕಾಣಿಸಿಕೊಂಡಿದ್ದರೆ, ಅದರಲ್ಲಿ ಸ್ಟೀವ್ ವಾ, ರಿಕಿ ಪಾಂಟಿಂಗ್ ಜೊತೆಗೆ ಜಾನ್ ಬುಕಾನನ್ಗೆ ಸಿಂಹಪಾಲಿದೆ. 1999ರಿಂದ 2007ರವರೆಗಿನ ಆಸೀಸ್ ತಂಡದ ಲಯವನ್ನು ನೋಡಿದ ಯಾರೇ ಆದರೂ ಅದನ್ನು ಅಲ್ಲಗೆಳೆಯರು. ಅಂಥ ಆತ್ಮವಿಶ್ವಾಸ ತಂದುಕೊಟ್ಟಿದ್ದು ಮಾತ್ರ ಬುಕಾನನ್ ಎಂಬ ಮಾಂತ್ರಿಕ. ನಿರ್ಧಿಷ್ಟ ಅವಧಿಯಲ್ಲಿ ಕ್ರಿಕೆಟ್ ಜಗತ್ತನ್ನು ಈ ಪರಿಯಾಗಿ ಆಳಿದ್ದು, ವಿಂಡೀಸ್ ಬಿಟ್ಟರೆ ಆಸ್ಟ್ರೇಲಿಯಾ ಮಾತ್ರ. ಅವರದ್ದೆಂದೂ ಭಾರತದಂತೆ ಅದೃಷ್ಟದ ಗೆಲುವಾಗಿರಲಿಲ್ಲ. ಅದೇ ರೀತಿ ಕೈಗೆ ಬಂದ ತುತ್ತನ್ನು ಸುಲಭದಲ್ಲಿ ಬಿಟ್ಟುಕೊಡಲು ಅವರೆಂದೂ ದಕ್ಷಿಣ ಆಫ್ರಿಕದಂತೆ ಚೋಕರ್ಗಳಲ್ಲ. ಪಂದ್ಯವನ್ನು ಕೊನೆ ಎಸೆತದವರೆಗೂ ಬಿಟ್ಟುಕೊಡಬಾರದು ಎಂದು ಬುಕಾನನ್ ಹೇಳಿಕೊಟ್ಟ ಪಾಠವೇ ಕಾಂಗರೂಗಳ ಛಲವನ್ನು ಬೆಳೆಸಿದ್ದು.
ಡೇವ್ ವ್ಯಾಟ್ಮೋರ್
ಅಪರೂಪಕ್ಕೆಂಬಂತೆ ಅಚ್ಚರಿಯ ಫಲಿತಾಂಶಗಳನ್ನು ನೀಡುತ್ತಾ 1995ರವರೆಗೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಶ್ರೀಲಂಕಾ ವಿಶ್ವಚಾಂಪಿಯನ್ ಆದದ್ದರ ಹಿಂದೆ ವ್ಯಾಟ್ಮೋರ್ ಕೊಡುಗೆ ಬಹಳಷ್ಟಿದೆ. ರಣತುಂಗನಂಥ ದಢೂತಿ, ಧರ್ಮಸೇನನಂಥ ನರಪೇತಲನನ್ನು ಶ್ರೀಲಂಕಾ ತಂಡದಲ್ಲಿ ಕಂಡ ಇವರು, 1996ರಲ್ಲಿ ವಿಶ್ವಕಪ್ ಗೆಲ್ಲುತ್ತಾರೆಂದು ಅಂದುಕೊಂಡಿರಲಿಲ್ಲ. 1995ರಿಂದ 97ರವರೆಗೆ ಮೂರು ವರ್ಷಗಳ ಕಾಲ ಲಂಕನ್ನರ ಗೆಲುವಿನ ಆರ್ಭಟ ಹೇಗಿತ್ತೆಂದರೆ ಇವರನ್ನು ಸೋಲಿಸುವುದು ಸಾಧ್ಯವೇ ಇಲ್ಲ ಎಂಬಂಥ ಮನಃಸ್ಥಿತಿ ವಿಶ್ವದ ಎಲ್ಲ ತಂಡಗಳಲ್ಲೂ ಮನೆಮಾಡಿತ್ತು. ಅರವಿಂದ ಡಿಸಿಲ್ವಾ, ಸನತ್ ಜಯಸೂರ್ಯ, ರೋಶನ್ ಮಹಾನಾಮ, ಮುತ್ತಯ್ಯ ಮುರಳೀಧರನ್, ಚಾಮಿಂದಾ ವಾಸ್, ಅಸಾಂಕ ಗುರುಸಿಂಘೆ, ಕಲುವಿತರಣ ಇವರೆಲ್ಲ ಏಕಾಏಕಿ ತಂಡವನ್ನು ಸೇರಿದವರಲ್ಲ. ದಶಕಗಳ ಕಾಲ ಕ್ರಿಕೆಟ್ ಕಂಡವರನ್ನೇ ಬಳಸಿ ವ್ಯಾಟ್ಮೋರ್ ಅದ್ಭುತ ತಂಡವನ್ನು ರಚಿಸಿದ್ದರು. ಯಾರನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಸರಿಯಾಗಿ ಪ್ಲ್ಯಾನ್ ಮಾಡಿದ ವ್ಯಾಟ್ಮೋರ್ ಕ್ರಿಕೆಟ್ ಶಿಶುಗಳನ್ನು ಗೆಲುವಿಗೆ ಹಪಹಪಿಸುವ ರಿಯಲ್ ಸಿಂಹಗಳನ್ನಾಗಿಸಿದರು. ಹೀಗಾಗಿಯೇ ಜಯಸೂರ್ಯ ಅಬ್ಬರಿಸಿದ, ಆತ ವಿಫಲನಾದಂದೆಲ್ಲ ಅರವಿಂದ ಡಿಸಿಲ್ವ ಆಪತ್ಬಾಂಧವನಾದ. ರೋಶನ್ ಮಹಾನಾಮ ಎಂಬ ಪ್ರತಿಭಾವಂತ ಎಂಥ ಸಮಯದಲ್ಲೂ ಎದುರಾಳಿಯಿಂದ ಪಂದ್ಯ ಕಸಿದುಕೊಳ್ಳುವಷ್ಟರ ಮಟ್ಟಿಗೆ ಬೆಳೆದ. ಚಾಮಿಂದವಾಸ್, ಮುರಳೀಧರನ್ ವಿಶ್ವದರ್ಜೆಯ ಬೌಲರ್ಗಳಾಗಿ ಅರಳಿದರು.
ಜಾನ್ 'ರೈಟ್' ಟೈಂ
ಒಮ್ಮೆ ಅಜರ್, ಒಮ್ಮೆ ಸಚಿನ್, ಮತ್ತೊಮ್ಮೆ ಅಜರ್, ಮತ್ತೊಮ್ಮೆ ಸಚಿನ್... ಹೀಗೆ ಎಷ್ಟು ಬಾರಿ ನಾಯಕತ್ವ ಬದಲಾದರೂ ಟೀಂ ಇಂಡಿಯಾ ಹಣೆಬರಹ ಬದಲಾಗಿರಲಿಲ್ಲ. ಡ್ರೆಸ್ಸಿಂಗ್ ರೂಮ್ನ ರಾಜಕೀಯ, ಮ್ಯಾಚ್ ಫಿಕ್ಸಿಂಗ್ ಆರೋಪಗಳಿಂದ ಬೇಸತ್ತಿದ್ದ ತಂಡಕ್ಕೆ ಗಂಗೂಲಿ ನಾಯಕತ್ವ ಟರ್ನಿಂಗ್ ಪಾಯಿಂಟ್. ಸರಿಯಾದ ಸಮಯದಲ್ಲಿ ಜಾನ್ ರೈಟ್ ಮಾರ್ಗದರ್ಶನ ದೊರಕಿದ್ದು ಭಾರತ ತಂಡಕ್ಕೆ ಗೆಲುವಿನ ಹಾದಿ ತೋರಿತು. ಅಷ್ಟರವರೆಗೂ ಭಾರತದ ಬ್ಯಾಟಿಂಗ್ ಎಂದರೆ ಸಚಿನ್, ಸೌರವ್, ದ್ರಾವಿಡ್ ಎಂಬಂತಿತ್ತು. ಈ ಮೂವರಲ್ಲಿ ಇಬ್ಬರು ಆಡಿದರೆ ಭಾರತ ಗೆಲುವು ಸ್ಪಷ್ಟ. ಇವರನ್ನು ಹೊರತುಪಡಿಸಿದರೆ ಬೇರೆ ದಾರಿಯೇ ಇಲ್ಲ ಎಂಬಂತಿದ್ದ ತಂಡಕ್ಕೆ ಹೊಸ ಚೈತನ್ಯ ತುಂಬಿದ್ದು ಗುರು ರೈಟ್. ಅನುಭವಿ ಹಾಗೂ ಯುವ ಉತ್ಸಾಹಿಗಳಿಂದ ಕೂಡಿದ ತಂಡ ಯಾರನ್ನೂ ಸೋಲಿಸಬಲ್ಲದು ಎಂಬಂಥ ವಿಶ್ವಾಸ ಮೂಡಿಸಿತು. ಶ್ರೀನಾಥ್, ಕುಂಬ್ಳೆ, ಲಕ್ಷ್ಮಣರಂಥ ಅನುಭವಿಗಳ ಜೊತೆಗೆ ಯುವರಾಜ್ ಸಿಂಗ್, ಮೊಹ್ಮದ್ ಕೈಫ್, ಜಹೀರ್, ನೆಹ್ರಾ, ಹರ್ಭಜನ್ ಸಿಂಗ್ ತಾಳಮೇಳ ಕೂಡಿಬಂತು. 2013ರ ವಿಶ್ವಕಪ್ನಲ್ಲಿ ಭಾರತ ಫೈನಲ್ನಲ್ಲಿ ಸೋತದ್ದು ನಿಜವಾದರೂ ಆ ಯಾನದ ಹಿಂದಿದ್ದ ಯುಕ್ತಿ ರೈಟ್ ಎಂದರೆ ಅತಿಶಯೋಕ್ತಿಯಲ್ಲ.
ಸಂದೀಪ ಪಾಟೀಲ್
90 ಅಂಕ ಗಳಿಸುವ ವಿದ್ಯಾರ್ಥಿಯನ್ನು ರ್ಯಾಂಕ್ ಗಳಿಸುವಂತೆ ತಯಾರುಗೊಳಿಸುವುದು ಕಷ್ಟವಲ್ಲ. ಆದರೆ, ಪಾಸಾಗಲು ಹೆಣಗಾಡುವ ವಿದ್ಯಾರ್ಥಿಯನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿಸುವುದು ಕಷ್ಟದ ಕೆಲಸ. ಸಂದೀಪ್ ಪಾಟೀಲ್ ಶ್ರೇಷ್ಠ ಕೋಚ್ ಎಂದು ಅನಿಸಿಕೊಳ್ಳುವುದು ಇದೇ ಕಾರಣಕ್ಕೆ. 1983ರ ವಿಶ್ವಕಪ್ನಲ್ಲಿ ಭಾರತ ತಂಡದ ಸದಸ್ಯನಾಗಿದ್ದ ಸಂದೀಪ್ ಪಾಟೀಲ್ ಅಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಅಂದು ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕ್ರಿಕೆಟ್ ಶಿಶುಗಳಿಗೆ ತರಬೇತಿ ನೀಡಿ ಸಾಧಿಸುವುದಾದರೂ ಏನನ್ನು ಎಂದು ಎಲ್ಲರೂ ಎಣಿಸಿದ್ದರು. ನ್ಯೂಜಿಲೆಂಡ್ ಮಾಡಿದ ಸಣ್ಣ ಪ್ರಮಾದ ಈ ತಂಡಕ್ಕೆ ದೊಡ್ಡ ಮುನ್ನಡೆ ಸಾಧಿಸಲು ನೆರವಾಯಿತು ಎಂಬುದು ನಿಜವಾದರೂ ಆ ತಂಡ ಶ್ರೀಲಂಕಾವನ್ನು ಸೋಲಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಯಾವಾಗ ಭಾರತದ ವಿರುದ್ಧ ಸೆಮಿಫೈನಲ್ನಲ್ಲಿ ಎದುರಾಗಿ ನಿಂತಿತೋ ಆಗಲೇ ಭಾರತಕ್ಕೆ ತನ್ನ ತಪ್ಪಿನ ಅರಿವಾದದ್ದು. ಕೀನ್ಯಾ ಆ ಪಂದ್ಯ ಸೋತರೂ ಸಂದೀಪ್ ಪಾಟೀಲ್ ಗೆದ್ದಿದ್ದರು!
'ಗುರು' ಗ್ಯಾರಿ ಕರ್ಸ್ಟನ್
ದಕ್ಷಿಣ ಆಫ್ರಿಕದ ವಿಶ್ವದರ್ಜೆಯ ಬ್ಯಾಟ್ಸ್ಮನ್ ಗ್ಯಾರಿ ಕರ್ಸ್ಟನ್ಗೆ ಟೀಂ ಇಂಡಿಯಾ ಗುರು ಸ್ಥಾನವನ್ನು ನೀಡಿದಾಗ, ಇವರಿಂದ ಸಾಧ್ಯವೇ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಯಾಕೆಂದರೆ 90ರ ದಶಕದಲ್ಲಿ ನಂ.1 ಬ್ಯಾಟ್ಸ್ಮನ್ ಸ್ಥಾನಕ್ಕೆ ಸಚಿನ್ ಅವರೊಂದಿಗೆ ಪೈಪೋಟಿಗಿಳಿದಿದ್ದ ಕರ್ಸ್ಟನ್, ಸಚಿನ್ ಇದ್ದ ತಂಡಕ್ಕೇ ಮಾರ್ಗದರ್ಶನ ಮಾಡಬೇಕಿತ್ತು. ತಂಡದಲ್ಲಿದ್ದ ದ್ರಾವಿಡ್, ಲಕ್ಷ್ಮಣ್ ಅವರೂ ಗ್ಯಾರಿ ಸಮಕಾಲೀನರೇ!
ಅದಾಗಲೇ ಚಾಪೆಲ್ ಎಂಬ ಕ್ರಿಕೆಟ್ ಅರೆಪಂಡಿತನ ಹುಚ್ಚಾಟಕ್ಕೆ ಸಿಲುಕಿ ಆತ್ಮವಿಶ್ವಾಸ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಹಳೇ ಕಹಿ ನೆನಪುಗಳಿಂದ ಹೊರಬರುವ ಅವಶ್ಯಕತೆಯಿತ್ತು. 2007ರ ವಿಶ್ವಕಪ್ ಎಂಬುದು ಭಾರತದ ಪಾಲಿಗೆ ಎಂದಿದ್ದರೂ ಕಹಿ ನೆನಪು. ಹೇಗೆ ಧೋನಿಗೆ ಅಚಾನಕ್ ಆಗಿ ಸಿಕ್ಕಿದ್ದ ನಾಯಕತ್ವವನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತೋ, ಅದೇ ಸವಾಲು ಗ್ಯಾರಿ ಮೇಲೂ ಇತ್ತು. ರೈಟ್ ಕಟ್ಟಿದ್ದ ತಂಡದಲ್ಲಿದ್ದ ಯುವರಾಜ್, ಹರ್ಭಜನ್, ಜಹೀರ್ ಮೊದಲಾದ ಪ್ರತಿಭಾವಂತರನ್ನೇ ಹುರಿದುಂಬಿಸಿದ ಗ್ಯಾರಿ ಎರಡನೇ ಬಾರಿಗೆ ಭಾರತ ವಿಶ್ವಕಪ್ ಗೆಲ್ಲುವಲ್ಲಿ ನೆರವಾದರು ಎನ್ನಲಡ್ಡಿಯಿಲ್ಲ.
- ಗಣಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


