ಕ್ರೀಡೆ

ಹಾಕಿ ತಂಡಕ್ಕೆ ಸ್ಫೂರ್ತಿ ತುಂಬಿದ ಸಚಿನ್

Published On :

ಕ್ರಿಕೆಟ್ ದಿಗ್ಗಜನ ಅಚ್ಚರಿಯ ಭೇಟಿ ಕಂಡು ಪುಳಕಗೊಂಡ ಆಟಗಾರರು
ನವದೆಹಲಿ:
ಹಾಲೆಂಡ್‌ನಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ತೆರಳಲಿರುವ ಭಾರತ ತಂಡವನ್ನು ಮಂಗಳವಾರ ಭೇಟಿ ಮಾಡಿದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಚ್ಚರಿ ಮೂಡಿಸಿದರು.
ಪ್ರತಿಷ್ಠಿತ ಹಾಕಿ ವಿಶ್ವಕಪ್ ಇದೇ ಮೇ 31ರಿಂದ ಜೂನ್ 15ರವರೆಗೆ ನಡೆಯಲಿದೆ. ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಅವರು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಸಚಿನ್ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದರಂತೆ. ಸುಮಾರು ಎರಡು ಗಂಟೆಗಳ ಸಮಯ ತಂಡದೊಂದಿಗೆ ಕಾಲ ಕಳೆದ ಸಚಿನ್ ಅವರು, ಆಟಗಾರರೊಂದಿಗೆ, ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ತಮ್ಮ ಜೀವನಾನುಭವವನ್ನು ಹಂಚಿಕೊಂಡರು.
'ಸಚಿನ್ ಪಾಜಿ(ಸೋದರ) ಇಂದು ನಮ್ಮನ್ನು ಭೇಟಿ ಮಾಡಿ, ತಮ್ಮ ಅನುಭವ ಹಂಚಿಕೊಂಡರು. ದೆಹಲಿಗೆ ಬಂದು ನಮ್ಮನ್ನು ಭೇಟಿ ಮಾಡುವಂತೆ ಕೆಲ ದಿನಗಳ ಹಿಂದೆ ನಾನು ಅವರಿಗೆ ಮನವಿ ಮಾಡಿಕೊಂಡಿದ್ದೆ. ನನ್ನ ಮನವಿಯನ್ನು ಸ್ವೀಕರಿಸಿದ್ದ ಸಚಿನ್ ನಮ್ಮನ್ನು ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದರು' ಎಂದು ಸರ್ದಾರ್ ಸಿಂಗ್ ತಿಳಿಸಿದರು.
'ಸಚಿನ್ ನಮ್ಮನ್ನು ಭೇಟಿ ಮಾಡುವ ಬಗ್ಗೆ ನನಗೆ 10 ದಿನಗಳ ಹಿಂದೆ ಗೊತ್ತಿತ್ತು. ಆ ಕುರಿತು ತಂಡದ ಮುಖ್ಯ ಕೋಚ್ ಟೆರ್ರಿ ವಾಲ್ಷ್ ಮತ್ತು ನಿರ್ದೇಶಕ ರೋಲಂಟ್ ಓಲ್ಟ್‌ಮನ್ಸ್ ಅವರಿಗೆ ಮಾತ್ರ ತಿಳಿಸಿದ್ದೆ. ನಂತರ ಇದನ್ನು ರಹಸ್ಯವಾಗಿ ಉಳಿಸಿಕೊಳ್ಳಲು ನಾವು ತೀರ್ಮಾನಿಸಿದ್ದೆವು' ಎಂದು ಅವರು ತಿಳಿಸಿದರು.ವಿಶ್ವಕಪ್ ಪಂದ್ಯಾವಳಿಗೆ ತೆರಳುತ್ತಿರುವ ತಂಡಕ್ಕೆ ಅಲ್ಲಿ ಉತ್ಸಾಹದ ಪ್ರದರ್ಶನ ನೀಡಲು ಬೇಕಾದ ಸ್ಫೂರ್ತಿಯನ್ನು ಅವರು ತುಂಬಿದರು. ಮತ್ತು ಆಟಗಾರರಿಗೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಹಾರೈಸಿದರು.      'ಹಾಕಿ ಸಹ ಕ್ರಿಕೆಟ್‌ನ ಹಾಗೆ ತಂಡದ ಕ್ರೀಡೆ, ಅಲ್ಲಿ ಸಾಂಘಿಕ ಪ್ರದರ್ಶನ ಅಗತ್ಯ ಎಂದರು. ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರ ಸಚಿನ್, ನಮ್ಮ ಆಟಗಾರರಿಗೆ ವಿಶ್ವಾಸ ಮತ್ತು ಸ್ವಯಂ ನಂಬಿಕೆ ತುಂಬಿದ್ದಾರೆ' ಎಂದು ಸರ್ದಾರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.