ಅಪಘಾತ: ಎಫ್-1 ಚಾಲಕ ಜೂಲ್ಸ್ ಬಿಯಾಂಚಿಗೆ ತೀವ್ರ ಗಾಯ

ಟೋಕಿಯೋ: ಫ್ರಾನ್ಸ್ ಮೂಲದ ಫಾರ್ಮುಲಾ-1 ಚಾಲಕ ಜೂಲ್ಸ್ ಬಿಯಾಂಚಿ ಅವರು ಅಪಘಾತಕ್ಕೀಡಾಗಿದ್ದು, ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜಪಾನ್‌ನಲ್ಲಿ ನಡೆಯುತ್ತಿರುವ ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ರೇಸ್‌ನಲ್ಲಿ ಪಾಲ್ಗೊಂಡಿದ್ದ ಜೂಲ್ಸ್ ಬಿಯಾಂಚಿ ಅವರು ಕಾರು ಮಾರ್ಗ ಮಧ್ಯೆ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಯಿತು. ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡದ ಸಿಬ್ಬಂದಿಗಳು ಕಾರಿನಲ್ಲಿದ್ದ ಬಿಯಾಂಚಿ ಅವರನ್ನು ಹೊರಗೆಳೆದಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರೇಸ್ ವೇಳೆ ಜರ್ಮನ್‌ನ ಅಡ್ರಿಯಾನ್ ಸುಟಿಲ್ ಅವರ ಕಾರು ಸ್ಕಿಡ್ ಆಗಿದ್ದು, ಅವರ ಹಿಂದೆಯೇ ಬರುತ್ತಿದ್ದ ಬಿಯಾಂಚಿ ಅವರು ಆ ಕಾರಿಗೆ ಗುದ್ದುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಲು ಬಿಯಾಂಚಿ ತಮ್ಮ ಕಾರನ್ನು ಬಲಭಾಗಕ್ಕೆ ತಿರುಗಿಸಿದಾಗ ಕಾರು ಗೋಡೆಗೆ ಡಿಕ್ಕಿ ಹೊಡೆದು ಕಾರು ಅಪಘಾತಕ್ಕೀಡಾಗಿದೆ. ಮರುಶಿಯಾ ತಂಡದ ಪರವಾಗಿ ರೇಸ್‌ನಲ್ಲಿ ಪಾಲ್ಗೊಂಡಿದ್ದ 25 ವರ್ಷದ ಚಾಲಕ ಬಿಯಾಂಚಿ ಅವರನ್ನು ತಕ್ಷಣವೇ ಕಾರಿನಿಂದ ಹೊರಗೆಳೆಯಲಾಯಿತಾದರೂ, ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಹೀಗಾಗಿ ಅವರನ್ನು ಕೂಡಲೇ ಆಂಬುಲೆನ್ಸ್ ಮೂಲಕವಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಿಯಾಂಚಿ ಅವರು ಅಪಘಾತಕ್ಕೀಡಾದ ಬಳಿಕ ರೇಸ್ ಅನ್ನು ಮೊಟಕುಗೊಳಿಸಲಾಗಿದ್ದು, ಆ ವೇಳೆಗಾಗಲೇ ಎಲ್ಲರಿಗಿಂತಲೂ ಮುಂದಿದ್ದ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ವಿಜೇತರನ್ನಾಗಿ ಘೋಷಣೆ ಮಾಡಲಾಯಿತು. ರೇಸ್‌ನಲ್ಲಿ ವಿಜೇತರಾದರೂ ಬ್ರಿಟನ್ ತಂಡ ಸಂಭ್ರಮಾಚರಣೆಯಲ್ಲಿ ತೊಡಗದಿರಲು ನಿರ್ಧರಿಸಿದ್ದು, ಅಪಘಾತಕ್ಕೀಡಾದ ಬಿಯಾಂಚಿ ಅವರ ಶೀಘ್ರ ಚೇತರಿಕೆಗೆ ಹಾರೈಸಿದೆ.
ಅಪಘಾತದ ವೇಳೆ ಬಿಯಾಂಚಿ ಕಾರಿನ ಸಮೀಪದಲ್ಲೇ ಇದ್ದ ಮತ್ತೋರ್ವ ಚಾಲಕ ಜರ್ಮನ್‌ನ ಅಡ್ರಿಯಾನ್ ಸುಟಿಲ್ ಅವರು ಮಾತನಾಡಿದ್ದು, ನನ್ನ ಕಾರಿನ ಚಕ್ರಗಳು ಸ್ಕಿಡ್ ಆದಾಗ ನಾನು ಕಾರನ್ನು ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದೆ. ಆದರೆ ಅಷ್ಟು ಹೊತ್ತಿಗಾಗಲೇ ಹಿಂದೆಯಿದ್ದ ಬಿಯಾಂಚಿ ಅವರ ಕಾರು ಗೋಡೆಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಎರಡು ಸುತ್ತು ಹಾಕಿ ಕೆಳಗೆ ಬಿದ್ದಿತ್ತು. ಬಳಿಕ ಬಿಯಾಂಚಿ ಅವರನ್ನು ತುರ್ತುಪರಿಸ್ಥಿತಿಯ ತಂಡದ ಸಿಬ್ಬಂದಿಗಳು ಹೊರಗೆಳೆದು ಆಸ್ಪತ್ರೆಗೆ ಕೊಂಡೊಯ್ದರು. ಇಷ್ಟೇ ನನಗೆ ತಿಳಿದಿದ್ದು, ಬಿಯಾಂಚಿ ಅವರು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


