

ಚೆನ್ನೈ: ನಿರೀಕ್ಷೆಯಂತೆಯೇ ಪ್ರವಾಸಿ ಆಸ್ಟ್ರೇಲಿಯಾ `ಎ' ತಂಡ ಆತಿಥೇಯ ಭಾರತ `ಎ' ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಆ ಮೂಲಕ ಎರಡು ಅನಧಿಕೃತ ಟೆಸ್ಟ್ ಪಂದ್ಯ ಸರಣಿಯನ್ನು 10 ಅಂತರದಿಂದ ತನ್ನದಾಗಿಸಿಕೊಂಡಿತು.
ಇಲ್ಲಿನ ಚೇಪಕ್ ಕ್ರೀಡಾಂಗಣದಲ್ಲಿ ಪಂದ್ಯದ ಕೊನೆಯ ದಿನವಾದ ಶನಿವಾರದಂದು ಗೆಲ್ಲಲು 61 ರನ್ ಗುರಿ ಪಡೆದ ಆಸ್ಟ್ರೇಲಿಯಾ `ಎ' ತಂಡ, ಕೇವಲ 61 ಓವರ್‍ಗಳಲ್ಲೇ ವಿಜಯದ ಕೇಕೆ ಹಾಕಿತು. ಪ್ರವಾಸಿ ತಂಡದ ಎದುರು ಯಾವುದೇ ಪ್ರತಿರೋಧವನ್ನೂ ತೋರದ ಚೇತೇಶ್ವರ ಪೂಜಾರ ಪಡೆ 10 ವಿಕೆಟ್‍ಗಳ ಸೋಲಿನೊಂದಿಗೆ ಮುಖಭಂಗ ಅನುಭವಿಸಿತು. ಅಂದಹಾಗೆ ಇಲ್ಲಿಯೇ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಕಂಡಿತ್ತು.
ಆರಂಭಿಕರಾದ ಕೆಮರೂನ್ ಬ್ಯಾಂಕ್ರಾಫ್ಟ್ 14 ಎಸೆತಗಳಲ್ಲಿ 21 ರನ್ ಹಾಗೂ ನಾಯಕ ಉಸ್ಮಾನ್ ಖವಾಜ 23 ಎಸೆತಗಳಲ್ಲಿ 41 ರನ್ ಗಳಿಸಿ ಅಜೇಯರಾಗುಳಿದರು. ಸ್ಪಿನ್ ಬಲೆಯಲ್ಲಿ ಕೆಡವುವ ಉದ್ದೇಶದಿಂದ ನಾಯಕ ಪೂಜಾರ, ಪ್ರಗ್ಯಾನ್ ಓಜಾ ಹಾಗೂ ಬಾಬಾ ಅಪರಾಜಿತ್ ಅವರುಗಳನ್ನು ಬಳಸಿಕೊಂಡರೂ, ಕ್ರಮವಾಗಿ ಓಜಾ 3.1 ಓವರ್‍ಗಳಲ್ಲಿ 33 ಹಾಗೂ ಬಾಬಾ 3 ಓವರ್‍ಗಳಲ್ಲಿ 29 ರನ್ ನೀಡಿ ದುಬಾರಿಯಾದರು.
ಇನ್ನು ಪಂದ್ಯದ ಮೂರನೇ ದಿನದಂದು 6 ವಿಕೆಟ್‍ಗೆ 267 ರನ್ ಮಾಡಿದ್ದ ಭಾರತ `ಎ' ತಂಡ ಶನಿವಾರ ಆಟ ಮುಂದುವರೆಸಿ 274 ರನ್‍ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿತು. 28 ರನ್ ಗಳಿಸಿ ಔಟಾಗದೆ ಉಳಿದಿದ್ದ ಬಾಬಾ ಅಪರಾಜಿತ್ ಕೇವಲ 2 ರನ್ ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿ ನಡೆದರೆ, 12 ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದ ಶ್ರೇಯಸ್ ಗೋಪಾಲ್ ಕೂಡ ಶೂನ್ಯಕ್ಕೆ ಕೈಚೆಲ್ಲಿದರು. ಅಲ್ಲಿಂದಾಚೆಗೆ ವರುಣ್ ಏರಾನ್ (1), ಶಾರ್ದೂಲ್ ಠಾಕೂರ್ 4 ರನ್ ಗಳಿಸಿ ಔಟಾದರೆ, ಪ್ರಗ್ಯಾನ್ ಓಜಾ ಯಾವುದೇ ರನ್ ಮಾಡದೆ ಔಟಾಗದೆ ಉಳಿದರು. ವೇಗಿ ಗುರೀಂದರ್ ಸಿಂಗ್ 76ಕ್ಕೆ 4 ಹಾಗೂ ಸ್ಟೀವನ್ ಒ'ಕೇಫಿ 88ಕ್ಕೆ 4 ವಿಕೆಟ್ ಪಡೆದು ಗಮನ ಸೆಳೆದರು. ಸ್ಪಿನ್ನರ್ ಆಶ್ಟನ್ ಅಗರ್ 71ಕ್ಕೆ 1 ವಿಕೆಟ್ ಗಳಿಸಿದರು. ಮೊದಲ ಇನ್ನಿಂಗ್ಸ್‍ನಲ್ಲಿ ಅಮೋಘ 150 ರನ್ ಮಾಡಿದ ಆರಂಭಿಕ ಕೆಮರೂನ್ ಬ್ಯಾಂಕ್ರಾಫ್ಟ್ ತಂಡದ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ ಎ: 135, 274, ಆಸ್ಟ್ರೇಲಿಯಾ ಎ: 349, 62/0 ಫಲಿತಾಂಶ: ಭಾರತಕ್ಕೆ 10 ವಿಕೆಟ್ ಹೀನಾಯ ಸೋಲು