

ಬೆಂಗಳೂರು: ಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಟ್ಟಕಡೆಯ ಎಸೆತದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದ ಪ್ರವಾಸಿ ರೇಲ್ವೇಸ್ ತಂಡ, ಹಾಲಿ ಚಾಂಪಿಯನ್ ಕರ್ನಾಟಕ ವಿರುದ್ಧ 1 ವಿಕೆಟ್ ಗೆಲುವು ಸಾಧಿಸಿ ಪ್ರತಿಷ್ಠಿತ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಗುರುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ `ಬಿ' ಗುಂಪಿನ ಪಂದ್ಯದಲ್ಲಿ ರಾಜ್ಯಕ್ಕೆ ಗೆಲುವು ತಂದುಕೊಡಲು ಬ್ಯಾಟಿಂಗ್ ಹಾಗೂ ಬೌಲಿಂಗ್ ಈ ಎರಡೂ ವಿಭಾಗಗಳಲ್ಲಿಯೂ ಕೆಚ್ಚೆದೆಯ ಪ್ರದರ್ಶನ ನೀಡಿದ ನಾಯಕ ವಿನಯ್ ಕುಮಾರ್ ಅವರ ಶ್ರಮಕ್ಕೆ ಫಲ ಸಿಗದೆ, ಪ್ರವಾಸಿ ತಂಡ ರೋಮಾಂಚಕಾರಿ ಜಯ ಸಾಧಿಸಿ ಪೂರ್ಣ 4 ಅಂಕಗಳನ್ನು ತನ್ನದಾಗಿಸಿಕೊಂಡಿತು. ಇದೀಗ ಶುಕ್ರವಾರ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸುತ್ತಿನಲ್ಲಿ ಹರ್ಯಾಣ ತಂಡವನ್ನು ಕರ್ನಾಟಕ ಎದುರಿಸಲಿದೆ.
ಗೆಲ್ಲಲು 229 ರನ್ ಗುರಿ ಪಡೆದಿದ್ದ ರೇಲ್ವೇಸ್, ವಿನಯ್ ಜತೆಗೆ ಕರ್ನಾಟಕ ಬೌಲರ್‍ಗಳು ತೋರಿದ ಚುರುಕಿನ ಬೌಲಿಂಗ್‍ನಿಂದ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿಕೊಂಡಿತ್ತು. ಅದರಲ್ಲೂ ಕೊನೇ ಓವರ್‍ನಲ್ಲಿ 7 ರನ್ ಬೇಕಾದಾಗ ಅಕ್ಷತ್ ಆರ್ ಪಾಂಡೆ (19) ಕೆ. ಉಪಾಧ್ಯಾಯ್ (2) ನಿರ್ಣಾಯಕ ಹೋರಾಟ ನಡೆಸಿದರು. ವೇಗಿ ಅರವಿಂದ್ ನಿರ್ವಹಿಸಿದ ಈ ಓವರ್‍ನ ಐದನೇ ಎಸೆತದಲ್ಲಿ ಕರ್ನಾಟಕದ ಮೊತ್ತವನ್ನು ಸರಿಗಟ್ಟಿದ ಪಾಂಡೆ, ಕೊನೆಯ ಎಸೆತವನ್ನು ಬೌಂಡರಿಗಟ್ಟಿ ತಂಡಕ್ಕೆ ಜಯ ತಂದುಕೊಟ್ಟರು. ಕನಿಷ್ಟ ಪಂದ್ಯಟೈ ಆಗುತ್ತದೆ ಎಂದುಕೊಂಡಿದ್ದವರಿಗೆ ಪಾಂಡೆ ಬಾರಿಸಿದ ಬೌಂಡರಿ ಪಂದ್ಯದ ಚಿತ್ರಣವನ್ನೇ ತಿರುವುಮುರುವು ಮಾಡಿತು.
ಅಂದಹಾಗೆ ಗೆಲುವಿನ ಮೊತ್ತವನ್ನು ಭೇದಿಸುವಲ್ಲಿ ಆರಂಭದಲ್ಲೇ ತಿಣುಕಿದ ರೇಲ್ವೇಸ್‍ಗೆ ಆರಂಭಿಕ ಅಸದುಲ್ಲಾ (50: 45 ಎಸೆತ, 10), ಮಹೇಶ್ ರಾವತ್ (50: 57 ಎಸೆತ, 5 ಬೌಂಡರಿ) ಹಾಗೂ ನಾಯಕ ಕರಣ್ ಶರ್ಮಾ (51: 64 ಎಸೆತ, 3 ಬೌಂಡರಿ, 4 ಸಿಕ್ಸರ್) ಗಳಿಸಿದ ಮೂರು ಅರ್ಧಶತಕಗಳು ಆಸರೆಯಾದವು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಮಹೇಶ್ ಮತ್ತು ಕರಣ್ ಶರ್ಮಾ 6ನೇ ವಿಕೆಟ್‍ಗೆ ಕಲೆಹಾಕಿದ 78 ರನ್‍ಗಳು ಮಹತ್ವವೆನಿಸಿಕೊಂಡಿತು. ರಾಜ್ಯದ ಪರ ವಿನಯ್ 4 ವಿಕೆಟ್ ಪಡೆದರೆ, ಚೊಚ್ಚಲ `ಎ' ದರ್ಜೆ ಪಂದ್ಯವನ್ನಾಡಿದ ಅನಿರುದ್ಧ್ ಜೋಶಿ 2 ಹಾಗೂ ಅಭಿಮನ್ಯು ಮಿಥುನ್, ಎಸ್. ಅರವಿಂದ್ ಮತ್ತು ಜೆ. ಸುಚಿತ್ ತಲಾ ಒಂದು ವಿಕೆಟ್ ಗಳಿಸಿದರು.
ತಿಣುಕಿದ ದಿಗ್ಗಜರು: ಇನ್ನು ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕರ್ನಾಟಕ, ಉತ್ತಮ ಆರಂಭದ ಹೊರತಾಗಿಯೂ ಪ್ರಮುಖರ ಬ್ಯಾಟಿಂಗ್ ವೈಫಲ್ಯದಲ್ಲಿ 50 ಓವರ್‍ಗಳಲ್ಲಿ 9 ವಿಕೆಟ್‍ಗೆ 228 ರನ್‍ಗಳಂಥ ಸಾಮಾನ್ಯ ಮೊತ್ತ ಗಳಿಸಿತು. ಆರಂಭಿಕ ಮಯಾಂಕ್ ಅಗರ್ವಾಲ್ (44: 48 ಎಸೆತ, 8 ಬೌಂಡರಿ) ಅರ್ಧಶತಕದ ಅಂಚಿನಲ್ಲಿ ಎಡವಿದರೂ, ಮೊದಲ ವಿಕೆಟ್‍ಗೆ 60 ರನ್‍ಗಳ ಜತೆಯಾಟವಾಡಿದರು. ಆದರೆ, ಗಾಯಾಳು ರಾಬಿನ್ ಉತ್ತಪ್ಪ ಅಲಭ್ಯತೆಯಲ್ಲಿ ತಂಡದ ಬ್ಯಾಟಿಂಗ್ ಬೆನ್ನೆಲುಬುಗಳೆನಿಸಿದ್ದ ಕೆ.ಎಲ್. ರಾಹುಲ್ (27), ಕರುಣ್ ನಾಯರ್ (20), ಮನೀಶ್ ಪಾಂಡೆ (2), ಸ್ಟುವರ್ಟ್ ಬಿನ್ನಿ ಹಾಗೂ ವಿಕೆಟ್‍ಕೀಪರ್ ಸಿ.ಎಂ. ಗೌತಮ್ (21) ಅಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿದ್ದು ಕರ್ನಾಟಕದ ಸ್ಪರ್ಧಾತ್ಮಕ ಮೊತ್ತಕ್ಕೆ ಕೊರೆಯಾಯಿತು.
ದಿಕ್ಕಾದ ವಿನಯ್ : ಹೀಗೆ ಒಂದು ಹಂತದಲ್ಲಿ 200ರ ಗಡಿ ದಾಟಲೂ ತಿಣುಕುತ್ತಿದ್ದ ಕರ್ನಾಟಕವನ್ನು ಮೇಲೆತ್ತಿದ್ದು ನಾಯಕ ವಿನಯ್ ಕುಮಾರ್ ಮತ್ತು ಅಭಿಮನ್ಯು ಮಿಥುನ್. 9ನೇ ವಿಕೆಟ್‍ಗೆ ಈ ಜೋಡಿ 49 ರನ್‍ಗಳ ಅಮೋಘ ಜತೆಯಾಟವಾಡಿ ಗಮನ ಸೆಳೆಯಿತು. ವಿನಯ್ ಕುಮಾರ್ (50: 48 ಎಸೆತ, 4 ಬೌಂಡರಿ, 2 ಸಿಕ್ಸರ್) ಮತ್ತು ಅಭಿಮನ್ಯು ಮಿಥುನ್ (28: 18 ಎಸೆತ, 3 ಸಿಕ್ಸರ್) ರೇಲ್ವೇಸ್ ಬೌಲರ್‍ಗಳಿಗೆ ದಿಟ್ಟ ಉತ್ತರ ನೀಡಿದರು. ಕೊನೇ ಹಂತದಲ್ಲಿ ಜತೆಯಾದ ಈ ಜೋಡಿ ರೇಲ್ವೇಸ್ ಬೌಲರ್‍ಗಳನ್ನು ಕಾಡಿದ್ದು 8 ಕೆಟ್‍ಗೆ 163 ರನ್ ಕಲೆಹಾಕಿದ್ದ ಕರ್ನಾಟಕ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣವಾದರು.
ರೇಲ್ವೇಸ್ ತಂಡದ ಪರ ಆಶೀಶ್ ಯಾದವ್, ಎ.ಆರ್. ಪಾಂಡೆ ತಲಾ 3 ವಿಕೆಟ್ ಪಡೆದರೆ, ಕರಣ್ ಶರ್ಮಾ 2 ಮತ್ತು ಅನುರೀತ್ ಸಿಂಗ್ 1 ವಿಕೆಟ್ ಗಳಿಸಿದರು. ಧೋನಿ 9 ರನ್ ಎಂಟು ವರ್ಷಗಳ ಬಳಿಕ ದೇಶೀಯ ಪಂದ್ಯಾವಳಿಗೆ ಕಾಲಿ ಟ್ಟಿರುವ ಟೀಂ ಇಂಡಿಯಾ ನಾಯಕ ಧೋನಿ, ಆಲೂರಿನಲ್ಲಿ ಗುರುವಾರ ನಡೆದ ಜಮ್ಮು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಜಾರ್ಖಂಡ್ ಪರ 24 ಎಸೆತ ಎದುರಿಸಿದ ಅವರು ಕೇವಲ 9 ರನ್ ಗಳಿಸಿ ಔಟಾದರು. ಅವರ ವೈಫಲ್ಯದ ನಡುವೆಯೂ ಜಾರ್ಖಂಡ್ ತಂಡ (50 ಓವರ್‍ಗಳಲ್ಲಿ 210), ಜಮ್ಮು-ಕಾಶ್ಮೀರ (50 ಓವರ್‍ಗಳಲ್ಲಿ 7 ವಿಕೆಟ್‍ಗೆ 205) ವಿರುದ್ಧ 5 ರನ್ ಗೆಲವು ದಾಖಲಿಸಿತು.