

ಆರಂಭದಲ್ಲಿ ಯಾರೂ ನನ್ನನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ ಸ್ವಾಮಿ. ನಾನೂ ಸುಮ್ಮನೆ ಬಿಡಲಿಲ್ಲ ಬಿಡಿ. ನಿರ್ಲಕ್ಷ್ಯ ಮಾಡಿದವರೆಲ್ಲ ಮುಟ್ಟಿ ನೋಡಿಕೊಳ್ಳುವಂಥ ಸಾಧನೆ ಮಾಡಿದ್ದೇನೆ! ಹೌದು ಮತ್ತೆ, ನಾನು ಅಂದ್ರೆ ಕಮ್ಮೀನಾ? ಹೆಲಿಕಾಪ್ಟರ್ ರೆಕ್ಕೆಗಳಿಗಿಂತ ವೇಗವಾಗಿ ನಾನು ಬ್ಯಾಟ್ ತಿರುಗಿಸಬಲ್ಲೆ. ಚಕ್ರವ್ಯೂಹಕ್ಕಿಂತ ಚೆನ್ನಾಗಿ ಎದುರಾಳಿ ತಂಡದ ವಿರುದ್ಧ ರಣತಂತ್ರ ಹೆಣೆಯಬಲ್ಲೆ. ಅಟ್ಟಹಾಸಗೈಯುವ ತಂಡಗಳಿಗೆ ಮೆತ್ತಗೆ ಹೆಡೆಮುರಿ ಕಟ್ಟಬಲ್ಲೆ. ಹೀಗಾಗಿಯೇ ನನ್ನನ್ನು 'ಕೂಲ್ ಕ್ಯಾಪ್ಟನ್' 'ಲಕ್ಕಿ ನಾಯಕ' ಎಂದೆಲ್ಲ ಹಾಡಿ ಹೊಗಳಿದ್ದಾರೆ.
ಆದರೆ, ಚೆಂಡು, ಬ್ಯಾಟು ಬಿಟ್ಟರೆ ನನಗೆ ಯಾರ ಹಂಗೂ ಇಲ್ಲ. ಸೀಮಿತ ಕ್ರಿಕೆಟ್‌ನಲ್ಲಿ ನನಗೆ ಸಾಟಿಯಾಗುವವರೇ ಇಲ್ಲ. ಆದರೆ, ಅದೆಕೋ ಟೆಸ್ಟ್ ಕ್ರಿಕೆಟ್ ನನ್ನು ಮೈಗೆ ಹತ್ತಲೇ ಇಲ್ಲ. ಹಾಗಂತ ನಾಯಕತ್ವದ ಜವಾಬ್ದಾರಿಯಲ್ಲಿ ಹಿಂದೆ ಬೀಳಲಿಲ್ಲ. ಯಾವುದೇ ನಾಯಕನಿಗೂ ಕಡಿಮೆ ಇಲ್ಲದಷ್ಟು ಪಂದ್ಯಗಳನ್ನು ಗೆದ್ದುಕೊಟ್ಟಿದ್ದೇನೆ. ಟೆಸ್ಟ್ ಆಟವೇ ಮೈಗೆ ಹತ್ತಲಿಲ್ಲ ಎಂದ ಮೇಲೆ ಆಡುವುದನ್ನು ಬಿಡುವುದೇ ಸರಿ ಎಂದು ನಾನು ತೀರ್ಮಾನಿಸಿಬಿಟ್ಟೆ. ಈಗಲೂ ಅಷ್ಟೇ, ನಾನು ಟೆಸ್ಟ್‌ಗೆ ಗುಡ್ ಬೈ ಹೇಳುತ್ತೇನೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇನ್ನೂ ಮುಂದಕ್ಕೆ ಕಾದು ನೋಡಿ ಏನೇನ್ ಮಾಡ್ತೀನಿ ಎಂಬಂಥ ವರಸೆಯೊಂದಿಗೆ ನಮ್ಮ ಎದುರಿಗೆ ನಿಂತಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಈಗ ಕ್ರಿಕೆಟ್ ಅಭಿಮಾನಿಗಳ ಬಿಸಿಬಿಸಿ ಚರ್ಚೆಯ ವಿಷಯ ವಸ್ತು. ವಿಶ್ಲೇಷಕರಿಗೆ ಬಿಡಿಸಲಾಗದ ಜಟಿಲ ಸಮಸ್ಯೆಯಾಗಿ ಪರಿಣಮಿಸಿದ್ದಾರೆ.
ಲಕ್ಕಿ ಧೋನಿಯ ಸುತ್ತ...
ಧೋನಿ, ಸಿಡ್ನಿಯಲ್ಲಿ ನಡೆಯಲಿರುವ ಸರಣಿಯ ಕೊನೆಯ ಟೆಸ್ಟ್ ಪಂದ್ಯಕ್ಕಿಂತ ಮುನ್ನವೇ ಮೆಲ್ಬರ್ನ್ ಕ್ರಿಕೆಟ್ ಅಭಿಮಾನಿಗಳನ್ನು ಕಕ್ಕಾಬಿಕ್ಕಿಯಾಗಿಸಿದೆ. ಕಾರಣ, ಅದೆಷ್ಟೋ ಆಟಗಾರರನ್ನು ಚೆಂಡಿಗೆ ಕೈ ಹಾಕಿ ಅಂಗಣದಿಂದ ಹೊರ ದೂಡಿದರೂ, ನಿವೃತ್ತಿ ಹೇಳ ಬಸಯಸುವುದಿಲ್ಲ. ಇಂಥ ವೇಳೆ ತಮ್ಮ ಆಟದ ಬಗ್ಗೆ ಆಡಿಕೊಳ್ಳಲು ಯಾರಿಗೂ ಒಂದೇ ಒಂದು ಅವಕಾಶ ನೀಡದ ಧೋನಿ, ನೀರು ಕುಡಿದಷ್ಟು ಸುಲಭವಾಗಿ ಪಂಚದಿನ ದಿನ ಕ್ರಿಕೆಟ್‌ಗೆ ವಿದಾಯದ ಪಂಚ್ ಒತ್ತಿದ್ದಾರೆ.
ಇದೇ ಈಗ ಕ್ರಿಕೆಟ್ ಪ್ರೇಮಿಗಳಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಲವರು ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿ ಸಾಧನೆ ಅಷ್ಟಕ್ಕೆ ಅಷ್ಟೇ ಬಿಡಿ ಎಂದು ಸುಮ್ಮನಾಗಿದ್ದಾರೆ. ಆದರೆ, ಇನ್ನು ಕೆಲವರು ಡ್ರೆಸ್ಸಿಂಗ್ ರೂಂನಲ್ಲಿ ಕಿತ್ತಾಟವಾಗಿದೆ. ಹೀಗಾಗಿಯೇ ಧೋನಿ ವಿದಾಯದ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುತ್ತಿದ್ದಾರೆ. ಯುವ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಅಣಿಯಾಗಿದ್ದಾರಲ್ಲ. ಅದಕ್ಕೆ ಧೋನಿ ತೆಪ್ಪಗೆ ಹಿಂದೆ ಸರಿದಿದ್ದಾರೆ ಎನ್ನುವವರಿಗೂ ಕಡಿಮೆ ಇಲ್ಲ. ಇದು ಲಕ್ಷಿ ಧೋನಿಯ ತಿಳಿಯದ ಹಕೀಕತ್ತು! ಯಾರೇನೇ ಹೇಳಲಿ. ಒಡ್ಡೊಡ್ಡಾಗಿ ಒಂದೆರಡು ಶತಕ ಹೊಡೆದು ವೃತ್ತಿ ಜೀವನ ಮುಗಿಸುತ್ತಾನೆ ಎಂದರೆ ಅತಿಶಯೋಕ್ತಿಯಾಗಲಾರದು.
ಕಾರಣ, ಧೋನಿ ಅವತಾರವೆತ್ತಿದ್ದು ಭಾರತ ಕ್ರಿಕೆಟ್ ತಂಡ ತೀರಾ ಸಂಕಷ್ಟದ ಸ್ಥಿತಿಯಲ್ಲಿದ್ದಾಗ. 2007ರ ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ಟೀಂ ಇಂಡಿಯಾ ಹೀನಾಯ ಸೋಲನುಭವಿಸಿದಾಗ, ಭಾರತ ಕ್ರಿಕೆಟ್ ಕ್ಷೇತ್ರವೇ ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗಿದಂತಿತ್ತು. ಲೀಗ್ ಹಂತದಲ್ಲೇ ದುರ್ಬಲ ಬಾಂಗ್ಲಾದೇಶದ ವಿರುದ್ಧ ಕಳಪೆ ಪ್ರದರ್ಶನ ನೀಡಿ ಸೋತಿದ್ದ ತಂಡದ ಕುರಿತು, ಕೀಳುಮಟ್ಟದ ಮೊಬೈಲ್ ಸಂದೇಶಗಳು, ಈಮೇಲ್‌ಗಳು, ಜೋಕುಗಳು ಎಗ್ಗಿಲ್ಲದೇ ಹರಿದಾಡಿದ್ದವು. ಇದೆಲ್ಲ ಮಾಯವಾಗಿ ಹೊಸ ಸೂರ್ಯನ ಉದಯಿಸಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ದುರ್ಗತಿ ಕಂಡಿದ್ದ ತಂಡಕ್ಕೆ ಹಿಡಿಶಾಪ ಹಾಕಿದ್ದ ಅಭಿಮಾನಿಗಳು ಕೆಲವೇ ದಿನಗಳಲ್ಲಿ ಮತ್ತೆ ಅದೇ ತಂಡವನ್ನು ಆರಾಧಿಸುವಂತೆ ಮಾಡಿದ್ದೇ ಕೂಲ್ ಹೈ ಸಬ್ ಕಾ ಬಾಪ್ ಎಂಬ ಮಂತ್ರ ಪಠಿಸಿದ ಈ ಮಹೀ ಎಂಬ ಮಹಾನ್ ಮೋಡಿಗಾರ.