

ಪರ್ತ್: ಪ್ರಸಕ್ತ ವರ್ಷದಲ್ಲಿ ಈಗಾಗಲೇ ಬಿಡುವಿಲ್ಲದ ವೇಳಾಪಟ್ಟಿ ಸಿದ್ಧವಾಗಿದ್ದು, ಯುಎಇ ತಂಡದಂಥ ಟೆಸ್ಟ್ ಆಡದ ತಂಡಗಳೊಂದಿಗೆ ಪಂದ್ಯಾವಳಿಗಳನ್ನು ಆಡಲು ಸಮಯವೇ ಇಲ್ಲ' ಹೀಗೆಂದು ಉತ್ತರಿಸಿದ್ದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ. ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೀಗೆ ಹೇಳಿದ್ದಾರೆ.
ಇದಕ್ಕೆ ಕಾರಣ, ಮುಂದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು 10ಕ್ಕೆ ನಿರ್ಬಂಧಿಸಲು ಐಸಿಸಿ ಚಿಂತನೆ ನಡೆಸಿದೆ. ಇದು ಗಹನವಾದ ಚರ್ಚೆಗೆ ನಾಂದಿ ಹಾಡಿದ್ದು, ಐಸಿಸಿಯ ಉದ್ದೇಶವನ್ನು ಪ್ರಶ್ನಿಸಿರುವ ಹಲವಾರು ಮಾಜಿ ಕ್ರಿಕೆಟಿಗರು,
ಕ್ರಿಕೆಟ್ ತಜ್ಞರು, ಐಸಿಸಿಯ ನಿರ್ಧಾರದಿಂದ ದುರ್ಬಲ ತಂಡಗಳಿಗೆ ಅನ್ಯಾಯವಾಗುತ್ತದೆ. ಈ ತಂಡಗಳಿಗೆ ತಮ್ಮ ಪ್ರದರ್ಶನವನ್ನು ಮೇಲ್ಮಟ್ಟಕ್ಕೆ ಹೆಚ್ಚಿಸಿಕೊಳ್ಳುವ ಅವಕಾಶ ಲಭ್ಯವಾಗುವುದಿಲ್ಲ ಎಂದು ಸೊಲ್ಲೆತ್ತಿದ್ದಾರೆ.
ಇದರ ಜೊತೆಗೇ, ಐಸಿಸಿ ತನ್ನ ಚಿಂತನೆಗೆ ಬದ್ಧವಾದರೆ, ದುರ್ಬಲ ತಂಡಗಳ ಸಾಮರ್ಥ್ಯವನ್ನು ಹೆಚ್ಚಿಸಲು ಆ ತಂಡಗಳು ಪ್ರಬಲ ತಂಡಗಳೊಡನೆ ಕೆಲವಾರು ಪಂದ್ಯಾವಳಿಗಳಲ್ಲಿ ಆಡಬೇಕೆನ್ನುವುದು ಹಲವಾರು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ, ಭಾನುವಾರದ ಸುದ್ದಿಗೋಷ್ಠಿಯಲ್ಲಿ ಧೋನಿಯವರನ್ನು ಪ್ರಶ್ನೆ ಮಾಡಿದ ಸುದ್ದಿಗಾರರು, ಐಸಿಸಿ ಚಿಂತನೆ ಪ್ರಕಾರ, ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯಲ್ಲಿ ಇಳಿಮುಖವಾದರೆ, ದುರ್ಬಲ ತಂಡಗಳ ಸಾಮರ್ಥ್ಯವನ್ನು ಹೆಚ್ಚಿಸಲು ಟೀಂ ಇಂಡಿಯಾ ಯುಎಇ, ಸ್ಕಾಟ್ಲೆಂಡ್‍ನಂಥ ದೇಶಗಳೊಂದಿಗೆ ಪ್ರತ್ಯೇಕ ಟೂರ್ನಿಗಳನ್ನು ಆಡಲಿದೆಯೇ? ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ನ ಅಭಿವೃದ್ಧಿಗೆ ಟೀಂ ಇಂಡಿಯಾ ಸೆಣಸಲಿದೆಯೇ?' ಎಂದು ಕೇಳಿದರು.
ಈ ಪ್ರಶ್ನೆಗೆ ಉತ್ತರ ನೀಡಿದ ಧೋನಿ, `ಈಗಾಗಲೇ ಟೀಂ ಇಂಡಿಯಾದ ವಾರ್ಷಿಕ ವೇಳಾಪಟ್ಟಿ ಸಿದ್ಧಗೊಂಡಿದೆ. ಪ್ರತಿ ವರ್ಷ ಒಂಭತ್ತೂವರೆ ತಿಂಗಳು ನಾವು ಕ್ರಿಕೆಟ್ ಆಡುತ್ತೇವೆ. ಇದರ ಹೊರತಾಗಿಯೂ ಐಪಿಎಲ್‍ನಲ್ಲಿ ಪಾಲ್ಗೊಳ್ಳುತ್ತೇವೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯೂ ಇದೆ. ಹೀಗಾಗಿ, ಟೆಸ್ಟ್ ಆಡದಿರುವ ದೇಶಗಳ ಕ್ರಿಕೆಟ್ ತಂಡಗಳೊಂದಿಗೆ ನಾವು ಪ್ರತ್ಯೇಕ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವುದು ಸದ್ಯದ ಮಟ್ಟಿಗೆ ಅವಕಾಶವಿಲ್ಲ' ಎಂದಿದ್ದಾರೆ. ಇದೇ ವೇಳೆ, `ಟೀಂ ಇಂಡಿಯಾದ ಸಾಮರ್ಥ್ಯವನ್ನು ಪ್ರಶ್ನೆ ಮಾಡುವ ಜನರಿಗೆ ನಾವು ಬಿಡುವಿಲ್ಲದೆ ಕ್ರಿಕೆಟ್ ಆಡುವ ಒತ್ತಡದಲ್ಲಿರುವುದು ಗಮನಕ್ಕೆ ಬರುವುದಿಲ್ಲ' ಎಂದು ಮಾರ್ಮಿಕವಾಗಿ ಉತ್ತರಿಸಿದರು.