

ನವದೆಹಲಿ: ಟೀಂ ಇಂಡಿಯಾ ನಿರ್ದೇಶಕರಾಗಿರುವ ರವಿ ಶಾಸ್ತ್ರಿಯವರ ಸ್ಥಾನಕ್ಕೆ ಕುತ್ತೊದಗಿದೆ ಎಂಬ ವಿಚಾರ ಈಗ ಭಾರತೀಯ ಕ್ರಿಕೆಟ್ ಲೋಕದಲ್ಲಿ ಹರಿದಾಡುತ್ತಿದೆ.
ನೂತನವಾಗಿ ಅಧ್ಯಕ್ಷರಾಗಿರುವ ಜಗಮೋಹನ್ ದಾಲ್ಮಿಯಾ ಅವರು ಶಾಸ್ತ್ರಿಯವರ ಸ್ಥಾನಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ನೇಮಿಸುವ ಬಗ್ಗೆ ಒಲವು ತೋರಿದ್ದು, ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಬಿಸಿಸಿಐನಿಂದ ಹೊರಬೀಳುವ ಸಾಧ್ಯತೆಗಳಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿ ಇದೇ ತಿಂಗಳು 20ರಂದು ಬಿಡುಗಡೆಗೊಳ್ಳಲಿದೆ. ಆದರೆ, ಅದಕ್ಕೂ ಮುನ್ನವೇ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ. ಟೀಂ ಇಂಡಿಯಾ ನಿರ್ದೇಶಕರನ್ನು ಬದಲಿಸುವುದು ಇವುಗಳಲ್ಲಿ ಪ್ರಮುಖವಾದುದು. ಹಾಗೊಂದು ವೇಳೆ, ಬಾಂಗ್ಲಾ ಪ್ರವಾಸದ ವೇಳೆ ಟೀಂ ಇಂಡಿಯಾದ ನಿರ್ದೇಶಕರು ಬದಲಾಗದಿದ್ದರೆ, ಆ ಪ್ರವಾಸದ ನಂತರ ಖಚಿತವಾಗಿ ನಿರ್ದೇಶಕರ ಬದಲಾವಣೆಯಾಗಲಿದೆ.
ಏಕೆ ಬದಲಾವಣೆ?: ಈ ಹಿಂದೆ ಎನ್. ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದಾಗ,ತಮ್ಮ ಬೆಂಬಲಿಗರಿಗೆ ಮಹತ್ವದ ಹುದ್ದೆಗಳನ್ನು ನೀಡಿದ್ದರು. ಈಗ, ಬಿಸಿಸಿಐನಲ್ಲಿ ಬದಲಾವಣೆ ಗಾಳಿ ಬೀಸಿದೆ. ಶ್ರೀನಿವಾಸನ್ ಅವರ ಜಾಗಕ್ಕೆ ಜಗಮೋಹನ್ ದಾಲ್ಮಿಯಾ ಬಂದಿದ್ದಾರೆ. ಇದೀಗ, ಶ್ರೀನಿವಾಸನ್ ಬೆಂಬಲಿಗರು ಅಲಂಕರಿಸುನ ಹುದ್ದೆಗಳಿಂದ ಅವರನ್ನು ತೆರವುಗೊಳಿಸಿ, ಆ ಜಾಗಗಳಿಗೆ ತಮ್ಮ ಆಪ್ತರನ್ನು ತಂದು ಕೂರಿಸುವ ಪ್ರಯತ್ನಗಳು ನಡೆದಿವೆ. ಇದೇ ಹಿನ್ನೆಲೆಯಲ್ಲಿ, ಶ್ರೀನಿವಾಸನ್ ಅವರ ಆಪ್ತ ಎಂದೇ ಬಿಂಬಿತವಾಗಿರುವ ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾ ಸ್ಥಾನದಿಂದ ಕೆಳಗಿಳಿಸಿ, ಆ ಸ್ಥಾನಕ್ಕೆ ತಮ್ಮ ಆಪ್ತ ಗಂಗೂಲಿ ಅನರನ್ನು ತರಲು ದಾಲ್ಮಿಯಾ ಒಲವು ತೋರಿದ್ದಾರೆ. ಆಟಗಾರರೂ ಇದಕ್ಕೆ ಹೊರತಾಗಿಲ್ಲ.
ತಾರ್ಕಿಕ ಕಾರಣವೂ ಸಿದ್ಧ: ರವಿಶಾಸ್ತ್ರಿಯವರನ್ನು ಟೀಂ ಇಂಡಿಯಾ ನಿರ್ದೇಶಕ ಸ್ಥಾನದಿಂದ ಕೈ ಬಿಡಲು ಒಂದು ತಾರ್ಕಿಕ ಕಾರಣವನ್ನೂ ದಾಲ್ಮಿಯಾ ಬಣ ಕಂಡುಕೊಂಡಿದೆ ಎನ್ನಲಾಗಿದೆ. ಕಳೆದ ವರ್ಷ ಭಾರತ ತಂಡ, ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಶಾಸ್ತ್ರಿ ಅವರು ತಂಡದ ನಿರ್ದೇಶಕರಾಗಿದ್ದರು. ಅಲ್ಲಿ, ಏಕದಿನ ಸರಣಿಯನ್ನು ಗೆದ್ದಿದ್ದ ಟೀಂ ಇಂಡಿಯಾ, ಅನಂತರ ಟೆಸ್ಟ್ ಸರಣಿಯನ್ನು ಸೋತಿತ್ತು. ಕಳೆದ ವರ್ಷಾ ಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗಲೂ ಸತತ ಸೋಲುಗಳನ್ನೇ ಟೀಂ ಇಂಡಿಯಾ ಕಂಡಿತ್ತು. ಒಟ್ಟಾರೆಯಾಗಿ, ವಿದೇಶ ನೆಲದಲ್ಲಿ ಟೀಂ ಇಂಡಿಯಾ ನೀಡಿರುವ ಸತತ ವೈಫಲ್ಯದ ಪ್ರದರ್ಶನವನ್ನೇ ಆಧಾರವಾಗಿಟ್ಟುಕೊಂಡು ಶಾಸ್ತ್ರಿಯವರ ಬದಲಾನಣೆರೆ ತಂತ್ರ ಹೆಣೆಯಲಾಗಿದೆ.
ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ವಿದೇಶಿ ನೆಲದಲ್ಲಿ ಭಾರತ ತಂಡದ ಪ್ರದರ್ಶನವನ್ನು ಮೇಲ್ಮಟ್ಟಕ್ಕೇರಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದಿದ್ದಾರೆ. ಈ ಮೂಲಕ, ಪರೋಕ್ಷವಾಗಿ ರವಿಶಾಸ್ತ್ರಿ ಅವರನ್ನು ಬದಲಿಸುವ ಸೂಚನೆ ನೀಡಿದ್ದಾರೆ.