ಲಾಹೋರ್: ಡಿಸೆಂಬರ್ ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯನ್ನು ಭಾರತದಲ್ಲಿ ಆಯೋಜಿಸಿದರೆ ನಮ್ಮ ತಂಡವನ್ನು ಭಾರತಕ್ಕೆ ಕಳಿಸಲಾಗದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಪಿಸಿಬಿ ಮುಖ್ಯಸ್ಥ ಶಹರ್ಯಾರ್ ಖಾನ್ ಗೆ ದೂರವಾಣಿ ಕರೆ ಮಾಡಿ ಡಿಸೆಂಬರ್ ನಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯನ್ನು ಭಾರತದಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದ್ದರು. ಈ ವೇಳೆ ಶಹರ್ಯಾರ್ ಖಾನ್ ಭಾರತದಲ್ಲಿ ಸರಣಿ ಆಯೋಜಿಸುವುದಾದರೆ ತಮ್ಮ ತಂಡವನ್ನು ಭಾರತಕ್ಕೆ ಕಳಿಸಲಾಗದು ಎಂದು ಹೇಳಿದ್ದಾರೆ.
ಇದೀಗ ಪಾಕ್ ಮುಖ್ಯಸ್ಥರು ಸರಣಿಯನ್ನು ಭಾರತಕ್ಕಿಂತ ಸಂಯುಕ್ತ ಅರಬ್ ಒಕ್ಕೂಟ(ಯುಎಇ)ದಲ್ಲಿ ನಡೆಸಿ ಎಂಬ ಒತ್ತಡ ಹೇರಿದ್ದು, ಹಲವು ವರ್ಷಗಳಿಂದ ರದ್ದುಗೊಂಡಿದ್ದ ಭಾರತ-ಪಾಕಿಸ್ತಾನ ಸರಣಿಗೆ ಹಲವು ವಿಘ್ನಗಳ ನಂತರ ಚಾಲನೆ ಸಿಕ್ಕಿದ್ದು, ಮತ್ತೆ ಗೊಂದಲಕ್ಕೆ ಸಿಲುಕಿದೆ.
ಬಿಸಿಸಿಐ ಸರಣಿಯನ್ನು ಭಾರತದಲ್ಲೇ ಆಯೋಜಿಸುವುದಾಗಿ ಪಟ್ಟು ಹಿಡಿದಿದ್ದು, ಈ ಪ್ರಸ್ತಾಪವನ್ನು ಪಿಸಿಬಿ ತಳ್ಳಿ ಹಾಕಿದೆ.