ಐಪಿಎಲ್ ಸ್ಪಾಟ್ ಫಿಕ್ಸಿಂಗ್: ಶಾಶ್ವತ ನಿಷೇಧದಿಂದ ಚೆನ್ನೈ, ಜೈಪುರ ಪಾರು

ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಶಾಶ್ವತ ನಿಷೇಧ ಭೀತಿಯನ್ನು ಎದುರಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ಕೊಟ್ಟಿದೆ...
ಐಪಿಎಲ್ ನಲ್ಲಿ ಸಿಎಸ್ ಕೆ ಮತ್ತು ಆರ್ ಆರ್ ನಡುವಿನ ಪಂದ್ಯ (ಸಂಗ್ರಹ ಚಿತ್ರ)
ಐಪಿಎಲ್ ನಲ್ಲಿ ಸಿಎಸ್ ಕೆ ಮತ್ತು ಆರ್ ಆರ್ ನಡುವಿನ ಪಂದ್ಯ (ಸಂಗ್ರಹ ಚಿತ್ರ)
Updated on: 

ಮುಂಬೈ: ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಶಾಶ್ವತ ನಿಷೇಧ ಭೀತಿಯನ್ನು ಎದುರಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ಕೊಟ್ಟಿದೆ.

ಭ್ರಷ್ಟಾಚಾರ ಆರೋಪದಡಿ ಎರಡು ವರ್ಷಗಳ ನಿಷೇಧಕ್ಕೊಳಗಾಗಿರುವ ಈ ತಂಡಗಳು, ತಮ್ಮ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರ ಪುನಃ ಐಪಿಎಲ್ ಮರಳಲು ಬಿಸಿಸಿಐ ಅವಕಾಶ ನೀಡಿದೆ. ಬಿಸಿಸಿಐ ನೂತನ ಅಧ್ಯಕ್ಷ ಶಶಾಂಕ್ ಮನೋಹರ್ ಅಧ್ಯಕ್ಷತೆಯಲ್ಲಿ, ಮುಂಬೈನಲ್ಲಿ ಭಾನುವಾರ ನಡೆದ ಮಹತ್ವದ ಬಿಸಿಸಿಐ ಕಾರ್ಯಕಾರಿಣಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.  ಇದರೊಂದಿಗೆ, ಮುಂದಿನ ಎರಡು ಆವೃತ್ತಿಯ ಪಂದ್ಯಾವಳಿಗಳಿಗೆ ಎರಡು ಹೊಸ ತಂಡಗಳಿಗೆ ಅವಕಾಶ ಕಲ್ಪಿಸುವುದು, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಪೆಪ್ಸಿಯಿಂದ ಲಿವೊ ಮೊಬೈಲ್ ಕಂಪನಿಗೆ ನೀಡುವುದು ಹಾಗೂ ಬಿಸಿಸಿಐ ವಾರ್ಷಿಕ ಮಹಾಸಭೆಯ ದಿನಾಂಕವನ್ನು ನಿಗದಿಗೊಳಿಸುವ ವಿಚಾರಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಶಾಶ್ವತ ನಿಷೇಧವಿಲ್ಲ: ೨೦೧೩ ರ ಆವೃತ್ತಿಯ ಐಪಿಎಲ್ ನ ಬೆಟ್ಟಿಂಗ್ ದಂಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನೇಮಿಸಿದ್ದ, ನಿವೃತ್ತ ನ್ಯಾ. ಆರ್.ಎಂ.ಲೋಧಾ ನೇತೃತ್ವದ ಸಮಿತಿಯು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ತಂಡಗಳಿಗೆ ಎರಡು ವರ್ಷಗಳ ನಿಷೇಧದ ಶಿಕ್ಷೆಯನ್ನು ವಿಧಿಸಿತ್ತು. ಆದರೆ ಆ ತಂಡಗಳನ್ನು ಐಪಿಎಲ್‌ನಲ್ಲಿ ಮುಂದುವರಿಸುವ  ವಿಚಾರವನ್ನು ಬಿಸಿಸಿಐ ವಿವೇಚನೆಗೆ ಬಿಡಲಾಗಿತ್ತು. ಇದೇ ವಿಚಾರ ಭಾನುವಾರ ನಡೆದ ಐಪಿಎಲ್ ಕಾರ್ಯಕಾರಿಣಿಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂತು. ಈ ಸಂದರ್ಭದಲ್ಲಿ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಸದಸ್ಯರು ಸಿಎಸ್ ಕೆ, ಆರ್ ಆರ್ ತಂಡಗಳ ಶಾಶ್ವತ ನಿಷೇಧಕ್ಕೆ ಒಪ್ಪಲಿಲ್ಲವಾದ್ದರಿಂದ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಾರ್ಯಕಾರಿಣಿ ನಂತರ  ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೀಘ್ರವೇ ಬಿಡ್: ೨೦೧೬ ಹಾಗೂ ೨೦೧೭ರ ಐಪಿಎಲ್‌ಗಳಲ್ಲಿ ಎರಡು ಹೊಸ ತಂಡಗಳಿಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ. ಹೊಸ ತಂಡಗಳು ಸಿಎಸ್‌ಕೆ, ಆರ್‌ಆರ್ ತಂಡಗಳು  ಐಪಿಎಲ್‌ಗೆ ವಾಪಸಾದ ಮೇಲೂ ಮುಂದುವರಿಯಲಿದೆ. ಹಾಗಾಗಿ, ೨೦೧೮ ರಿಂದ ಮುಂದಕ್ಕೆ ಐಪಿಎಲ್‌ನಲ್ಲಿ ಒಟ್ಟು ೧೦ ತಂಡಗಳುಳ್ಳ ಐಪಿಎಲ್ ಪಂದ್ಯಾವಳಿಗಳು ನಡೆಯಲಿವೆ. ಹೊಸ  ತಂಡಗಳಿಗೆ ಶೀಘ್ರದಲ್ಲೇ ಬಿಡ್ ಸಲ್ಲಿಸುವ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು.

ಶೀರ್ಷಿಕೆ ಪ್ರಾಯೋಜಕತ್ವ: ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದಿಂದ ಪೆಪ್ಸಿ ಕಂಪನಿ ಹಿಂದೆ ಸರಿಯಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಆ ಪ್ರಾಯೋಜಕತ್ವವನ್ನು ಬ್ರೆಜಿಲ್ ಮೂಲದ ಲಿವೋ ಮೊಬೈಲ್ ಕಂಪನಿಗೆ ನೀಡಲು ನಿರ್ಧರಿಸಲಾಗಿದೆ.

ಮಹಾಸಭೆಗೆ ದಿನಾಂಕ ನಿಗದಿ: ಸೆಪ್ಟಂಬರ್ ನಲ್ಲಿ ನಡೆಯಬೇಕಿದ್ದ ಬಿಸಿಸಿಐನ ವಾರ್ಷಿಕ ಮಹಾಸಭೆಯನ್ನು ಮುಂದಿನ ತಿಂಗಳು 9ರಂದು ಮುಂಬೈನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಏತನ್ಮಧ್ಯೆ ಯಾವುದೇ ರಾಜ್ಯ ಕ್ರಿಕೆಟ್ ಸಂಸ್ಥೆ ಜತೆ ಸೇಡಿನ ಆಡಳಿತ ಮಾಡದಂತೆ ರಾಷ್ಟ್ರೀಯ ಕ್ರಿಕೆಟ್ ಆಯೋಗ ಪುನಾರಚನೆಗೆ ನಿರ್ಧಾರ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com