

ಲಂಡನ್: ಭಾರತ ಏಕದಿನ ತಂಡದ ನಾಯಕ ಎಂ.ಎಸ್. ಧೋನಿ ಹಾಗೂ ಪ್ರಸಕ್ತ ಟೀಂ ಇಂಡಿಯಾದಿಂದ ಉಪೇಕ್ಷಿಸಲ್ಪಟ್ಟಿರುವ ಹಿರಿಯ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತೆ ಜತೆಯಾಗಿ ಮೈದಾನಕ್ಕೆ ಇಳಿಯಲಿದ್ದಾರೆ.
ಇದೇ ತಿಂಗಳು 17ರಂದು ಕಯಾ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸೌಹಾರ್ದ ಪಂದ್ಯದಲ್ಲಿ ಇತರೆ ಹಾಗೂ ಆತಿಥೇಯ ವಿಶ್ವ ಇಲೆವೆನ್ ತಂಡದ ವಿರುದ್ಧದ ಪಂದ್ಯದಲ್ಲಿ ಸೆಹ್ವಾಗ್ ಮತ್ತು ಧೋನಿ ಆಡಲಿದ್ದಾರೆ. ಈ ಈರ್ವರೂ ಪಾಕಿಸ್ತಾನದ ಶಾಹೀದ್ ಅಫ್ರಿದಿ, ದ.ಆಫ್ರಿಕಾದ ಹರ್ಶೆಲ್ ಗಿಬ್ಸ್ ಜತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲಿದ್ದು, ಈ ತಂಡಕ್ಕೆ ಹೀರೋಸ್ ಇಲೆವೆನ್ ಎಂದು ಹೆಸರಿಡಲಾಗಿದೆ.
ತಂಡದ ನಾಯಕತ್ವವನ್ನು ಇಂಗ್ಲೆಂಡ್‍ನ ಆ್ಯಂಡ್ರ್ಯೂ ಸ್ಟ್ರಾಸ್ ಹೊತ್ತುಕೊಂಡಿದ್ದರೆ, ಟೀಂ ಮ್ಯಾನೇಜ್‍ಮೆಂಟ್ ಉಸ್ತುವಾರಿಯನ್ನು ಇಂಗ್ಲೆಂಡ್‍ನ ಮಾಜಿ ಕ್ರಿಕೆಟಿಗ ಇಯಾನ್ ಬಾಥಮ್ ಹೊತ್ತುಕೊಂಡಿದ್ದಾರೆ.ಇತ್ತ ವಿಶ್ವ ಇಲೆವೆನ್ ತಂಡದ ಸಾರಥಿಯಾಗಿ ಬ್ರೆಂಡನ್ ಮೆಕಲಮ್ ಆಯ್ಕೆಯಾಗಿದ್ದಾರೆ. ಮ್ಯಾಥ್ಯೂ ಹೇಡನ್, ಮಹೇಲಾ ಜಯವರ್ಧನೆ, ಗ್ರೇಮ್ ಸ್ಮಿತ್, ಸ್ಕಾಟ್ ಸ್ಟೈರಿಸ್ ಹಾಗೂ ಡೇನಿಯಲ್ ವೆಟ್ಟೋರಿ ತಂಡದಲ್ಲಿದ್ದು, ಗ್ಯಾರಿ ಕಸ್ರ್ಟನ್ ತಂಡದ ಕೋಚ್ ಆಗಿದ್ದಾರೆ.