

ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ಮಾಲೀಕಳಾಗಿರುವ ಬಾಲಿವುಡ್ ನಟಿ ಪ್ರೀತಿ ಜಿಂಟಾ, ಲಲಿತ್ ಮೋದಿ ಜತೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರೀತಿಗೆ ಹೊಸ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಮತ್ತು ಪ್ರೀತಿ ಜಿಂಟಾ ನಡುವೆ ನಡೆದಿರುವ ಈ-ಮೇಲ್ ಮಾತುಕತೆಯಲ್ಲಿ ಡೀಲ್ ಕುರಿತು ಪ್ರಸ್ತಾಪವಾಗಿದೆ ಎನ್ನಲಾಗಿದ್ದು, ಈ ಕುರಿತು ರಹಸ್ಯ ಕಾಯ್ದುಕೊಳ್ಳುವಂತೆ ಕಿಂಗ್ಸ್ ಇಲೆವೆನ್ ತಂಡದ ಇತರ ಮಾಲೀಕರಾದ ನೆಸ್ ವಾಡಿಯಾ, ಮೋಹಿತ್ ಬರ್ಮನ್, ಕರಣ್ ಪೌಲ್‍ಗೆ ಪ್ರೀತಿ ಜಿಂಟಾ ಮನವಿ ಮಾಡಿದ್ದರು ಎನ್ನಲಾಗಿದೆ.
2014ರಲ್ಲಿ ಲಲಿತ್ ಮೋದಿ ಮತ್ತು ಪ್ರೀತಿ ಜಿಂಟಾ ನಡುವೆ ನಡೆದಿರುವ ಮಾತುಕತೆಯಲ್ಲಿ ಮಾರಾಟ ಮಾಡುವ ಕುರಿತು ಒಪ್ಪಂದ ಸಿದ್ದವಾಗಿದ್ದು, ಆದರೆ ಈ ಕುರಿತು ಮೋಹಿತ್ ಬರ್ಮನ್‍ಗೆ ಮಾಹಿತಿ ರವಾನಿಸಿ ಎಂದು ಲಲಿತ್ ಮೋದಿ, ಪ್ರೀತಿ ಜಿಂಟಾಗೆ ಇ-ಮೇಲ್ ಮಾಡಿದ್ದಾರೆ. ಇದಕ್ಕೂ ಮುನ್ನ ಪ್ರೀತಿ ಜಿಂಟಾ ಲಲಿತ್ ಮೋದಿಗೆ ಡೀಲ್‍ಗೆ ಸಂಬಂಧಿಸಿದಂತೆ ಮಾತುಕತೆ ನಡೆಸಬೇಕಿದೆ ಎಂದು ಇ-ಮೇಲ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರೀತಿ ಜಿಂಟಾ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಕಂಟಕ ಎದುರಾಗುವ ಸಾಧ್ಯತೆ ಇದೆ.