

ಧರ್ಮಶಾಲಾ: ಏಷ್ಯಾಕಪ್ ಟಿ20 ಸರಣಿಯಲ್ಲಿ ಇಂಡೋ-ಪಾಕ್ ಕ್ರಿಕೆಟ್ ಪಂದ್ಯ ರೋಚಕ ಅಂತ್ಯಕಾಣುತ್ತಿದ್ದಂತೆಯೇ ಐಸಿಸಿ ವಿಶ್ವಕಪ್ ನಲ್ಲಿ ಧರ್ಮಶಾಲಾದಲ್ಲಿ ನಡೆಯಲಿರುವ ಇಂಡೋ-ಪಾಕ್ ಪಂದ್ಯಕ್ಕೂ ಈಗಾಗಲೇ ವ್ಯಾಪಕ ಬೇಡಿಕೆ ಬಂದಿದೆ.
ಐಸಿಸಿ ಮೂಲಗಳ ಪ್ರಕಾರ ಮುಂದಿನ ತಿಂಗಳು ಅಂದರೆ ಮಾರ್ಚ್ 19ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಇಂಡೋ-ಪಾಕ್ ಪಂದ್ಯದ ಟಿಕೆಟ್ ಗಾಗಿ ಭಾರಿ ಬೇಡಿಕೆ ಹೆಚ್ಚಿದೆ. ಪಂದ್ಯದ ಟಿಕೆಟ್ ಗಾಗಿ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಐಸಿಸಿ ಹೇಳಿತ್ತು. ಅದರಂತೆ ಕಳೆದ 2 ದಿನಗಳಲ್ಲಿ ಟಿಕೆಟ್ ಗಾಗಿ 1.38 ಲಕ್ಷ ನೋಂದಣಿ ದಾಖಲಾಗಿದೆ ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿದೆ.
ನೋಂದಣಿ ಸಮಯ ಮುಕ್ತಾಯವಾದ ನಂತರ ಲಾಟರಿ ಮೂಲಕ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಅದರಲ್ಲಿ 1.15 ಲಕ್ಷ ಟಿಕೆಟ್ ಗೆ ಮೊದಲ ದಿನವೇ ಬೇಡಿಕೆ ಬಂದಿತ್ತು. ಮಾರ್ಚ್ 2ರವರೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಜನ ಪಂದ್ಯ ವೀಕ್ಷಿಸಬೇಕು ಎನ್ನುವ ಕಾರಣಕ್ಕೆ ಒಬ್ಬ ವ್ಯಕ್ತಿಗೆ ಗರಿಷ್ಠ 2 ಟಿಕೆಟ್ ಮಾತ್ರ ನೀಡಲಾಗುತ್ತದೆ.