ಉಪವಾಸ ಮಾಡಿ
ಮುಂದಿನ ವರುಷಕ್ಕೆಂದು
ಕೂಡಿಟ್ಟ ಭತ್ತ;
ಮರುದಿನವೇ ಸತ್ತ!.
ಅವನು ಕುರುಡ ಎಂದು
ನಕ್ಕರು;
ಇವರು ಕಣ್ಣದ್ದರೂ
ದಾರಿ ತಪ್ಪಿದರು!.
ಆ ಸಭೆಯಲಿ
ಕೋಮು ಸೌಹಾರ್ದತೆಯ
ಭಾಷಣ ನಡೆಯುತ್ತಿತ್ತು;
ತೆರೆಯ ಹಿಂದೆ ಬಾಂಬೊಂದು
ಜೀವ ಪಡೆಯುತ್ತಿತ್ತು!
ಶ್ರೀಮಂತ ಬಂದನೆಂದು
ಪೂಜಾರಿ ಭರ್ಜರಿ ಪೂಜೆ ಮಾಡಿದ;
ದೇವ ಬಡವನ
ಮನೆಗೆ ಓಡಿದ!
ಅವನಿಗೆ ಭವಿಷ್ಯದ ಚಿಂತೆ
ಪದೆ ಪದೆ ಓಡುತ್ತಿದ್ದ
ಜ್ಯೋತಿಷಿಯ ಬಳಿ;
ಉಜ್ವಲವಾದುದು
ಜ್ಯೋತಿಷಿಯ ಭವಿಷ್ಯ,
ಈತನ ಬದುಕು ತಪ್ಪಿದೆ ಹಳಿ!
ಆಕೆಯೆಂದಳು
ಗೆಳೆಯಾ ಆಕಾಶ ನೋಡು
ಮೂಡಿದೆ ಕಾಮನ ಬಿಲ್ಲು,
ನಾ ನೋಡಿದರೆ ಕಂಡಿದ್ದು
ಪೆಟ್ರೋಲ್, ಗ್ಯಾಸ್,
ಕರೆಂಟ್ ಬಿಲ್ಲು!
ಹಕ್ಕುಸರ್ಕಾರ ಹೇಳುತ್ತಿದೆ
ದೇಶ ನಿರ್ಮಾಣದಿ
ನಿಮಗೆ ಹಕ್ಕಿದೆ;
ಎಲ್ಲಾ ಅವರು ತಿಂದಾಯ್ತು
ಇನ್ನೇನು ಮಿಕ್ಕಿದೆ?!
ರಾಜ(ಡಿ)ಕೀಯ
ಕೆಲವರದು
ಜಾತಿ ರಾಜಕೀಯ,
ಕೆಲವರದು
ಕುಟುಂಬ ರಾಜಕೀಯ,
ಒಟ್ಟಿನಲ್ಲಿ
ಪ್ರಜೆಗಳ ಹಣ ಮಾಯ!
-ಪರೇಶ ಸರಾಫ