ಕಂದಸಂಪಿಗೆ

ಶಿಶುಗೀತೆಗಳೆಂದರೆ ಕೆನೆಹಾಲು ಮೊಸರು. ಮತ್ತೆ ಮತ್ತೆ ಬಾಯಿಗಂಟಿಕೊಂಡರೂ ಚಪ್ಪರಿಸಿ ತಿನ್ನಬೇಕೆನ್ನಿಸುತ್ತದೆ. ಬಟ್ಟಲಿನ್ನಷ್ಟು ಸಂಭ್ರಮ, ಉತ್ಸಾಹ, ಬೇಸರ...
ಕಂದಸಂಪಿಗೆ
Updated on: 

ಶಿಶುಗೀತೆಗಳೆಂದರೆ ಕೆನೆಹಾಲು ಮೊಸರು. ಮತ್ತೆ ಮತ್ತೆ ಬಾಯಿಗಂಟಿಕೊಂಡರೂ ಚಪ್ಪರಿಸಿ ತಿನ್ನಬೇಕೆನ್ನಿಸುತ್ತದೆ. ಬಟ್ಟಲಿನ್ನಷ್ಟು ಸಂಭ್ರಮ, ಉತ್ಸಾಹ, ಬೇಸರ, ಕೂತೂಹಲ... ಎಲ್ಲವೂ ಅದರೊಳಗೆ ಸಮ್ಮಿಶ್ರಣ. ಅಂದು ಓದಿದ್ದ 'ಒಂದು ಎರಡು ಬಾಳೆಲೆ ಹರಡು...', 'ಬಾನದಾರಿಯಲ್ಲಿ ಸೂರ್ಯಜಾರಿ ಬಂದ...' ಇವೆಲ್ಲವೂ ನಮ್ಮ ಕವಿಗಳ ತಂತ್ರಗಾರಿಕೆಯ ಬಗ್ಗೆ ಬೆರಗು ಹುಟ್ಟಿಸುವ ಉದಾಹರಣೆಗಳು.
ಕಂದನ ಒಳಾಂಗಣವನ್ನು ಅರ್ಥಮಾಡಿಕೊಂಡು ಅಲ್ಲಿ ನಡೆಯುವ ಸೋಜಿಗ, ತವಕ, ತಲ್ಲಣಗಳನ್ನು ಬೆನ್ನಟ್ಟುತ್ತಾ ಅವರಿಗೆ ಇಷ್ಟವಾಗುವ ಹಾಗೆ ಪದ್ಯಬರೆಯುವುದೆಂದರೆ ಅದೇನು ಕಾಫಿ ಕುಡಿದ ಹಾಗಾ? ಲೋಕದ ಸಣ್ಣ ಸಣ್ಣ ಬೆರಗುಗಳನ್ನು ಸೂಜಿಗಣ್ಣಿನಿಂದ ನೋಡುವ ಮಗು, ಸುತ್ತಲಿನ ಇಂಚಿಂಚಿನಲ್ಲೂ ಸಂಭ್ರಮ ಹುಡುಕುವ ಆ ಎಳೆಹೃದಯವನ್ನು ಅರ್ಥಮಾಡಿಕೊಂಡು ಕವಿ ತಾನೂ ಒಂದು ಮಗುವಾಗಿ ಬರೆದಾಗ ಆ ಪದ್ಯ ಕಂದನಲ್ಲಿ ಸೃಷ್ಟಿಸಿಬಿಡುವ ಆತ್ಮೀಯತೆ ಏಸೊಂದು ಮುದ! ಆ ಕವಿಗೆ ಎಷ್ಟು ಹಾರ ಹಾಕಿದರೂ ಸಾಲದು!
ನೀವು ಸುಮ್ಮನೆ ಯಾರಾದ್ರೂ ಹಿರಿಯರ ಬಳಿ ಬಾಲ್ಯದ ಬಗ್ಗೆ ಕೇಳಿ. ಅವರು 'ಓ ಗಡಿಯಾರ, ಬೆಳ್ಳಿಯ ಬಣ್ಣದ ಗೋಲಾಕಾರ', 'ಅಜ್ಜನ ಕೋಲಿದು ನನ್ನಯ ಕುದುರೆ...', ಅಂತ ತಾವು ಯಾವತ್ತೋ ಓದಿದ ಶಿಶುಗೀತೆಗಳನ್ನೆಲ್ಲ ರಾಗವಾಗಿ ಹಾಡಲು ಶುರುಮಾಡುತ್ತಾರೆ. ಯಾವತ್ತೋ ಬರೆದ ಹಾಡಲ್ಲಿ ಇವತ್ತಿಗೂ ಆ ಹಳೆಯ ಹೊಳಪು ಹೇಗೆ ಬಂತು? ಆ ಪದ್ಯ ಈಗಲೂ ಯಾಕೆ ಮತ್ತೆ ಮತ್ತೆ ಕಾಡುತ್ತಾ ಚಕ್ಕಂದವಾಡುತ್ತದೆ? ಎನ್ನುವ ಪ್ರಶ್ನೆಗೆ ಉತ್ತರ, ಆ ಶಿಶು ಸಾಹಿತ್ಯದ ಬಿಸುಪು ಮತ್ತು ಬರೆದ ಕವಿಗಳ ಮೋಡಿಗಾರಿಕೆ.
ಸಾಹಿತ್ಯವೆಂದರೆ ಅದು ನೆನೆಪಿಸಿದಾಗಲೆಲ್ಲಾ ನೆನಪಾಗಬೇಕು. ಕಾಡಬೇಡವೆಂದರೂ ಕಾಡೇ ಗೂಡೇ ಎನ್ನುತ್ತಾ ಕಾಡಬೇಕು. ಸಾಹಿತ್ಯ ಕಂದಪದ್ಯವಾಗಲಿ, ಸಣ್ಣಕತೆಯಾಗಲಿ... ಅಂತರಂಗದ ಚಿತ್ರಮಂದಿರದಲ್ಲಿ ಮತ್ತೆ ಮತ್ತೆ ಹೊಸದಾಗಿ ತೆರೆಕಾಣಬೇಕು.
ಶಿಶು ಸಾಹಿತ್ಯ ಕೂಡ ಅಷ್ಟೇ. ಅದು ತಿನ್ನಲು ಗಟ್ಟಿಯ ರೊಟ್ಟಿಯಲ್ಲ. ಲೀಲಾಜಾಲವಾಗಿ ಕರಗುವ ಸಕ್ಕರೆ. ಇದರ ರಚನೆ ವೇಳೆ ಕವಿ ಮಗುವಾಗುತ್ತಾನೆ. ಹೀಗಾಗಿ, ಅದು ಮಗುವಿನ ಎದೆಕದವ ತಟ್ಟುತ್ತದೆ. ಆ ತಟ್ಟುವಿಕೆ ಜೀವನದ ಕೊನೆಯ ಕ್ಷಣದವರೆಗೂ ಶಬ್ದಮಾಡುತ್ತದೆ. ಆಗಾಗ ಮಾತಾಡುತ್ತದೆ. ಬಹುತೇಕ ಮಂದಿ ಆಗಾಗ ಶಿಶುಪದ್ಯವನ್ನು ಕಾಡುವಾಗಲೆಲ್ಲಾ ಹಾಡುತ್ತಾರೆ. ಆದರೆ ಅದನ್ನು ಬರೆದ್ದದ್ಯಾರಪ್ಪಾ ಅಂತ ಯೋಚಿಸುವ ಉಸಾಬರಿಗೇನೇ ಹೋಗರು.
ಕನ್ನಡದಲ್ಲಿ ಶಿಶುಸಾಹಿತ್ಯದ ಬಗ್ಗೆ ಯೋಚಿಸಿದಾಗಲೆಲ್ಲಾ ಜೆ.ಪಿ. ರಾಜರತ್ನಂ, ಮಂಜೇಶ್ವರ ಗೋವಿಂದ ಪೈ,ಪಂಜೆಮಂಗೇಶರಾಯರು, ಶಂ.ಗು. ಬಿರಾದಾರ ಇವರೆಲ್ಲಾ ನೆನಪಾಗುತ್ತಾರೆ. ಕುವೆಂಪು, ಶಿವರಾಮ ಕಾರಂತ, ಬೇಂದ್ರೆ ಅವರೆಲ್ಲ ಮಕ್ಕಳ ಸಾಹಿತ್ಯಕೃಷಿ ಮಾಡಿದರೂ ಇವತ್ತಿಗೂ ಅವೆಲ್ಲರಿಗಿಂತ ಪಂಜೆಯವರ 'ನಾಗರಹಾವೇ.. ಹಾವೊಳು ಹೂವೇ', 'ಹುತ್ತರಿ ಹಾಡು' ಜಾಸ್ತಿ ಕಾಡುತ್ತದೆ. ನಮ್ಮ ಸುತ್ತಲೆಲ್ಲಾ ಕಾಣದ ಕಡಲಾಗಿಯೇ ಇರುವ ಮಕ್ಕಳ ಕವಿಗಳು ಇದ್ದೇ ಇರುತ್ತಾರೆ. ಅವರ ಹೆಸರು ಅಷ್ಟಾಗಿ ಚಲಾವಣೆಗೆ ಬಾರದೆಹೋದರೂ ಅವರ ಕವನಗಳು ಮಾತ್ರ ಬಾಯಲ್ಲಿ ತುತ್ತೂರಿಯೇ ಆಗಿರುತ್ತವೆ. 'ನಾವು ಎಳೆಯರು ನಾವು ಗೆಳೆಯರು ಎಲೆಯ ಹೂವಿನ ಹಂದರ' ಅಂತ ಬರೆದ ಶಂ. ಗುಬಿರಾದಾರರ ಪರಿಚಯ ನಿಜವಾಗಿಯೂ ಕೆಲ ಕನ್ನಡಿಗರಿಗೆ ಆದದ್ದು ಅವರು ಮೊನ್ನೆ ತೀರಿಕೊಂಡಾಗ.
ಹಾಗೆ ಬರೆಯುತ್ತಾ ಬರೆಯುತ್ತಾ ಮಕ್ಕಳಿಗೆ ಆನಂದ ಹೊಮ್ಮಿಸುತ್ತಾ ಕಾಲದ ಸೆರಗಲ್ಲಿ ಲೀನರಾದವರಲ್ಲಿ ಜಿ.ಎನ್. ಲಕ್ಷ್ಮಣ ಪೈ ಕೂಡ ಒಬ್ಬರು. 'ಎಲೆಗಡಿಯಾರವೇ ನಿನ್ನಾಕಾರವೇ... ನಲವಿಂ ಅಂಕೆಯ ಮನೆಗಳ ಹಾರುವೆ ಟಿಕ್ ಟಿಕ್.. ಟಿಕ್ ಟಿಕ್..' ಅಂತ ಹಾಡುತ್ತಾ ಮರೆಯಾದರು. ಇಂಥ ಅದೆಷ್ಟೋ ಕವಿಗಳು ಯಾರಿಗೂ ಗೊತ್ತಾಗದ ಹಾಗೆ ಇದ್ದುಬಿಡುತ್ತಾರೆ. ಮರೆಯಾಗುತ್ತಾರೆ.
ಬೇರೆಲ್ಲ ಪ್ರಕಾರಗಳಲ್ಲಿ ಬರೆಯುವ ಕವಿಗಳು ಜನಪ್ರಿಯತೆ ಬಯಸಿದರೆ ಮಕ್ಕಳ ಕವಿಗಳು ಇವುಗಳಿಂದ ಮುಕ್ತ. ಇನ್ನೂ ಈ ಶಿಶುಗೀತೆಗಳನ್ನು ಬೆನ್ನಟ್ಟುತ್ತಾ ಸಾಗಿದರೆ 'ನಾಯಿಮರಿ ನಾಯಿಮರಿ ತಿಂಡಿಬೇಕೆ?' ಎಂದ ಜಿ.ಪಿ. ರಾಜರತ್ನಂ ಕಾಡದೇ ಇರಲಾರರು. ರಾಜರತ್ನಂ ತಂದೆ ಶಾಲಾಮಾಸ್ತರರಾಗಿದ್ದಾಗ ಒಮ್ಮೆ ಅವರಿಗೆ ಆರೋಗ್ಯ ಕೆಡುತ್ತದೆ. ಆಗ ಬದಲಿ ಶಿಕ್ಷಕರಾಗಿ ಮಗ ರಾಜರತ್ನಂ ಅವರೇ ಶಾಲೆಗೆ ಶಿಕ್ಷಕರಾಗಿ ಹೋಗುತ್ತಾರೆ. ಆ ವೇಳೆ ಕನ್ನಡ ಪಠ್ಯಪುಸ್ತಕ ನೋಡಿದ ಕವಿ ಮಕ್ಕಳು ಇದನ್ನು ಹೇಗೆತಾನೇ ಸವಿದಾವು? ಅಂತ ಪಠ್ಯಪುಸ್ತಕದ ಬಗ್ಗೆ ಅತೃಪ್ತಿಯಾಗುತ್ತಾರೆ. ಅದೇ ಅತೃಪ್ತಿ ಮುಂದೆ ಅವರಲ್ಲಿ 'ತುತ್ತೂರಿಯ ಕಸ್ತೂರಿ' ಹುಟ್ಟಿಸಿತು.
'ಮಕ್ಕಳು ನಾದ ಪ್ರಿಯರು. ಕೇಳಿದ ವರ್ಣಗಳನ್ನು, ಕೇಳಿದ ಪಂಕ್ತಿಗಳನ್ನು ಪುನಃಪುನಃ ಕೇಳುವುದು ಅವರಿಗೆ ಸಂತೋಷ. ಬರೆಯೋದು ನನ್ನ ಸಂತೋಷ' ಎನ್ನುತ್ತಾ ರಾಜರತ್ನಂ ಶಿಶುಸಾಹಿತ್ಯಕ್ಕೆ ಇನ್ನಷ್ಟು ಪುಸ್ತಕಗಳನ್ನು ಕೊಟ್ಟರು. ದೊಡ್ಡವರಿಗೆ ಅರ್ಥವಾಗುವ ಹಾಗೆ ಗೀಚೋದು ದೊಡ್ಡ ವಿಚಾರ ಅಲ್ಲ. ಆದರೆ ಮಕ್ಕಳಿಗೆ ಅರ್ಥವಾಗುವ ಹಾಗೆ ಬರೆಯುದಿದೆಯಲ್ಲ ಅದು ದೊಡ್ಡ ವಿಚಾರ. ಇಂಥ ಪ್ರತಿಭೆ ಲಭಿಸುವುದು ಕೆಲವೇ ಕೆಲವು ಕವಿಗಳಿಗೆ.  
ಮಗುವಿಗೆ ಎಲ್ಲಿಯದ್ದೋ ಜಾನಿ ಹಾಗೂ ಅವನ ಪಪ್ಪನ ಬಗ್ಗೆ ಹೇಳುದಕ್ಕಿಂತ ನಮ್ಮ ಪೇಟೆಯಲ್ಲೇ ಇರುವ 'ಢಣ ಢಣ ಗಂಟೆಯ ಮಿಠಾಯಿಗಾಡಿ' ಅಂತ ಏಕೆ ಪದ್ಯ ಕಲಿಸಬಾರದು? ಯಾವುದೋ ದೇಶದ ಐಸ್‌ಕ್ರೀಂ ಬಗ್ಗೆ ಹೇಳುವುದಕ್ಕಿಂತ 'ಒಂದು ಎರಡು ಬಾಳೆಲೆ ಹರಡು' ಅಂತ ಯಾಕೆ ಹೇಳಿಕೊಡಬಾರದು? ನಮ್ಮ ಸುತ್ತಲಿಂದಲೇ ಹುಟ್ಟಿಕೊಂಡ ಹಾಡಿನ ಮುಂದೆ ಎಲ್ಲಿಯದ್ದೋ ರೈಮು ಹೇಗೆ ಕಾಡುತ್ತೆ? ಏನಾದರಾಗಲಿ ನೆನಪಾಗುವ ಕಂದಪದ್ಯಗಳನ್ನೆಲ್ಲಾ ಹಾಗೆ ಮುದ್ದಿಸಿ ಮಕ್ಕಳ ಕಿವಿಗೆ ತೂಗಿಸಿ. ಕಾಲದ ಗರ್ಭದಲ್ಲಿ ಅದನ್ನು ಹೂತು ಹೋಗುವಂತೆ ಮಾಡುವುದು ಬೇಡ.
- ಪ್ರಸಾದ್ ಶೆಣೈ ಆರ್.ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com