ಕನಸಿನ ಚೋರನೇ..ನನಸಾಗಿ ಬಾ...

ಇನ್ನೆಷ್ಟು ದಿನ ಬೇಕು ನಮ್ಮಿಬ್ಬರ ಭೇಟಿಗೆ? ನಿನ್ನ ಮಾತು ಕೇಳಿ ಮುದ್ದಿಸುವ ಆಸೆಯಾಗಿದೆ. ದೂರದಿಂದಲೇ ನಿನ್ನನ್ನು ಕಾಣುತ್ತಾ...
ಕನಸಿನ ಚೋರನೇ..ನನಸಾಗಿ ಬಾ...
Updated on: 

ಇನ್ನೆಷ್ಟು ದಿನ ಬೇಕು ನಮ್ಮಿಬ್ಬರ ಭೇಟಿಗೆ? ನಿನ್ನ ಮಾತು ಕೇಳಿ ಮುದ್ದಿಸುವ ಆಸೆಯಾಗಿದೆ. ದೂರದಿಂದಲೇ ನಿನ್ನನ್ನು ಕಾಣುತ್ತಾ... ಮನಸ್ಸಲ್ಲಿ ನಿನ್ನದೇ ಚಿತ್ರ. ಇಷ್ಟೆಲ್ಲಾ ಆದರೂ ನೀನಿಲ್ಲೇ ಇರುವೆ ಎಂಬ ಭಾವನೆ. ಏನೇ ಇರಲಿ ನೀನು ನನ್ನವನೇ. ನಿನ್ನನ್ನೊಮ್ಮೆ ಓಯ್ ಎಂದು ಕರೆಯಬೇಕು. ಮದುವೆ ನಂತರ ಎಲ್ಲರೂ ಪತಿಯನ್ನು ಕರೆಯುವ ಹಾಗೆ ನಾ ನಿನ್ನ ಕರೆಯಲಾರೆ. ಇದು ನಿನಗೆ ಇಷ್ಟವಾಗದಿದ್ದರೂ ಸರಿ. ನಾನು ಮಾತ್ರ ನಿನ್ನ ಓಯ್...ಎಂದೇ ಕರೀತೀನಿ.
ಓಯ್... ನಿನ್ನ ನೆನೆದು ಕವನ ಬರೆಯುವ ಆಸೆ. ಆದರೇನು ಮಾಡಲಿ, ನನಗೆ ಕಾವ್ಯವನ್ನರಳಿಸಲು ಬರುವುದಿಲ್ಲ್ಲ. ಮನಸ್ಸಲ್ಲಿರುವ ಕವನ ಹಾಳೆಯಲ್ಲಿ ಮೂಡಿದರೆ ನನಗದು ಖುಷಿಯೇ... ಆದರೆ, ಅದು ನಿನಗಿಷ್ಟವಾಗದಿದ್ದರೆ... ಬೇಡಪ್ಪಾ. ಮನಸ್ಸಿನ ಭಾವನೆಗಳು ಹಾಗೆಯೇ ನನ್ನಲ್ಲಿರಲಿ. ನೀ ನನ್ನ ಬಂಗಾರ ಮುದ್ದು ಎಂದಾಗ ಎಲ್ಲಿಲ್ಲದ ಆನಂದ...  ಹೃದಯದ ಬಡಿತ ನಿಂತರೂ..  ಮನಸ್ಸಿನ ತುಡಿತ ಮಾತ್ರ ನಿನ್ನ ನೆನೆಯುತ್ತಾ ಇರುತ್ತದೆ.
ಅದೊಂದು ರಾತ್ರಿ ಕನಸಲ್ಲಿ ನೀ ಬಂದೆ. ಅಬ್ಬಾ ಆ ಕ್ಷಣದಲ್ಲಿ ನನಗೆ ಉಂಟಾದ ಸಂತಸಕ್ಕೆ ಸಾಟಿಯೇ ಇಲ್ಲ...ಅಲ್ಲಿ ನೀನು ನನ್ನ ಹೃದಯದ ರಾಜನಾಗಿ ಮೆರೆದೆ. ಇಬ್ಬರೂ ಜತೆಯಾಗಿ ಕೈ ಹಿಡಿದು ನಡೆದಾಗ ನಿನ್ನ ಆ ಸ್ಪರ್ಶ ಆಸರೆಯಂತಿತ್ತು. ನಿನ್ನ ಕಣ್ಗಳಲ್ಲಿ ಕಾಳಜಿ ಕಂಡೆ. ಮುಂಗೋಪಿಯಾದ ನಿನ್ನಲ್ಲಿ ಮಾತು ಕಡಿಮೆ. ಪಟ ಪಟ ಅಂತ ಮಾತಾಡುವ ಹುಡುಗಿಯ ಮನಸ್ಸು ಗೆದ್ದ  ಮೌನಿ ನೀನು. ಇರಲಿ ಬಿಡು, ಮಾತಾಡಿ ನಿನ್ನ ಕಿವಿ ಕೊರೆಯುವೆ. ನಿನ್ನಂತೆ ನಾನು ಮೌನಿಯಾಗುತ್ತೇನೆ ಎಂದು ಹೇಳಿ ಸ್ವಲ್ಪ ಹೊತ್ತು ಸುಮ್ಮನಾದಾಗ.. ಅಬ್ಬಾ ನಿನ್ನ ಮುಖ ಬಾಡಿ ಹೋಯಿತಲ್ಲಾ. ಆಗ ನೀನು ನನ್ನಾ ಕರೆದದ್ದು ಪುಟ್ಟಾ ಎಂದು. ಹ್ಞಾ... ನೀನು ಒಂದು ಬಾರಿಯೂ ನನ್ನ ಹೆಸರು ಹಿಡಿದು ಕರೆದೇ ಇಲ್ವಲ್ಲಾ?
ಹೀಗೆ ಕೈ ಹಿಡಿದು ಮುಂದೆ ಸಾಗಿದೆ ನೀನು. ನಾನು ನಿನಗೆ ಏನೂ ಹೇಳಲಾರೆ ಎಂದು ಹೇಳಿ ಪ್ರೀತಿಯ ಮಾತುಗಳನ್ನು ನಿರೀಕ್ಷಿಸುತ್ತಿದ್ದೆ. ನನಗೋ ಒಳ ಜಂಭ ಹೆಚ್ಚು. ನೀನೆ ಹೇಳಲಿ ಎಂದು ಕಾದು ಕಾದು... ಕೊನೆಗೆ ನಿನ್ನನ್ನಪ್ಪಿ ಹೇಳಿದೆ "ನಿನಗೆ ಮೋಸ ಮಾಡಲು ಇಷ್ಟವಿಲ್ಲ. ಈಗಾಗಲೇ ನನ್ನೀ ಬಾಳಿನ ಪ್ರೀತಿಯಲ್ಲಿ ನೊಂದಿದ್ದೇನೆ. ನೀನು ನನ್ನ ಪ್ರೀತಿಸುತ್ತಿರುವುದು ತಿಳಿದರೂ ನಿನ್ನ ಬಳಿ ಹೇಳಲಾಗದಷ್ಟು ನೋವು. ಇದರ ಮೇಲೆ ನಿನ್ನಿಷ್ಟ".
ಆದರೆ ಇದಕ್ಕೂ ಬಗ್ಗದ ನೀನು ಕಣ್ಣೀರು ಒರೆಸಿ, ಹಣೆಗೆ ಚುಂಬಿಸಿ... ತೋಳನ್ನು ನೀಡಿದೆ. ಛೇ.. ಈವಾಗಲಾದರೂ ಹೇಳಬಹುದೇನೋ ಅಂದುಕೊಂಡಿದ್ದೆ.
ಆದರೆ  ಕಳ್ಳ ನೀನು...ಹಠಮಾರಿ. ಕೊನೆಗೆ ನಾನೇ ಕೇಳಿದೆ "ನನ್ನ ಮದುವೆಯಾಗುವೆಯಾ?"
ಯಾಕೋ ಪುಟ್ಟಾ ಹಿಂಗೆಲ್ಲಾ ಕೇಳ್ತಿದಿಯಲ್ಲಾ. ನಾನು ನಿನ್ನ ಖಂಡಿತವಾಗಿ ಮದುವೆ ಆಗುವೆ. ಐ ಲವ್ ಯು ಎ ಲಾಟ್ ಡಿಯರ್.
ಅಬ್ಬಾ ಕನಸಲ್ಲೇ ಇಷ್ಟು ಸತಾಯಿಸಿದ ನೀನು ನಿಜವಾಗಿ ಎದುರಿಗೆ ಬಂದರೆ... ನಿನ್ನ ಪ್ರೀತಿಗೆ ಸೋತು ಆಮೇಲೆ ನಿನ್ನ ಮನಸ್ಸನ್ನು ಗೆದ್ದ ಆ ಸಂಭ್ರಮ ಇಲ್ಲಿ ಕವನವಾಗಿ ಮೂಡಿದೆ. ಓದಿಕೋ ಗೆಳೆಯಾ... ಇದು ನಿನಗಾಗಿ ಮಾತ್ರ...
ಮಗುವಿನಂತೆ ಮುದ್ದಿಸುವ
ನಲ್ಲ, ನನ್ನವನು
ಒಂದೇ ಮಾತಿನಲ್ಲಿ
ಸಾವಿರ ಉತ್ತರ ನೀಡುವವನು...
ಎರಡು ತೋಳ್ಗಳಲ್ಲಿ
ಅಪ್ಪಿ ಹಿಡಿದು ಹೇಳಿದ
ನೀನು ನನ್ನವಳು
ನನಗಾಗಿ ಮಾತ್ರ.
ಸ್ವಾರ್ಥಿ ಭಾವಿ ಪತಿ
ಕನಸಿಂದ ಹೊರಗೆ ಬಾ...
ಕೈ ಹಿಡಿದು ಹೇಳುತ್ತೇನೆ
ಈ ಪ್ರೀತಿ ನಿನಗಾಗಿ...
ಕೇವಲ ನಿನಗೆ ಮಾತ್ರ.
ನಮ್ಮಿಬ್ಬರ ಕನಸು
ಒಂದೇ ಆಗಿರಲಿ...
ಪ್ರೀತಿಯ ಹಕ್ಕಿಗಳಾದ ನಾವು
ಲೆಕ್ಕಿಸುವುದೇ ಬೇಡ
ಏನನ್ನೂ
ಗಟ್ಟಿಗೊಳಿಸೋಣ ಸಂಬಂಧವನು...
ಮೆಚ್ಚಿದೆ ನಿನ್ನ ಮೌನ ಪ್ರೀತಿಯನು.
ವರಿಸು ಬಾ ನನ್ನನ್ನು...
ನನ್ನವನೇ

- ಮೈನಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com