ಜೊತೆಯಾಗುವೆಯಾ ಜೀವವೆ...

ಜೊತೆಯಾಗುವೆಯಾ ಜೀವವೆ...
Updated on: 

ನನ್ನ ಜೀವದ ಜೀವವೇ
ನನ್ನೆದೆಯೊಳಗೆ ನಿನಗೆ ಹೇಳಬೇಕೆಂದುಕೊಂಡ, ಹೇಳಲಾಗದ ಒಂದು ಭಾವವಿದೆ. ಅದರಲ್ಲಿ ಯಾವುದೇ ಕನಸಿಲ್ಲ, ಆಸೆಯಿಲ್ಲ. ಆದರೆ ನೀನು ನನ್ನವಳೆಂದು ಯಾವಾಗಲೂ ಹೇಳುವ ಒಂದು ಹೃದಯ ಬಡಿತವಿದೆ, ಮಿಡಿತವಿದೆ. ನಿನ್ನ ಕಂಡ ದಿನದಿಂದ ನನಗರಿವಿಲ್ಲದಂತೆಯೇ ನನ್ನ ಕಣ್ಣುಗಳು ಕಣ್ಮುಚ್ಚಿ ನಿನ್ನ ಕನಸು ಕಾಣಲಾರಂಭಿಸಿವೆ. ನನಗರಿವಿಲ್ಲದಂತೆಯೇ ನನ್ನ ಮನಸ್ಸು ಬೇರಾವುದೋ ದಾರಿಯನ್ನಿಡಿದು ನಿನ್ನ ಮನಸ್ಸೆಂಬ ಊರು ಸೇರುವ ಹಂಬಲದಲ್ಲಿ ಪಯಣಿಸುತ್ತಿದೆ. ಮನದ ಮಡಿಲಲ್ಲಿ ಈ ರೀತಿಯ ಪುಳಕಗಳೆಲ್ಲವೂ ಮಲಗಿದ್ದು ಎಂದಿನಿಂದ ಎಂದು ನನ್ನನ್ನು ನಾನೇ ಕೇಳಿಕೊಳ್ಳುವ ಪ್ರಶ್ನೆಗಳಿಗೆ ಅಷ್ಟು ಸುಲಭವಾಗಿ ಉತ್ತರ ಸಿಗುವುದಿಲ್ಲ. ಏಕೆ ಹೀಗೆ ?
ನೀ ನನ್ನ ಬದುಕಿನಲ್ಲಿ ಬಂದಾಗ ನನಗರಿವಿರಲಿಲ್ಲ. ಸೂಚನೆ ನೀಡದೆ ಬರುವ ಮಳೆಯ ಹಾಗೆ ನಿರೀಕ್ಷೆಯೇ ಇಲ್ಲದ ಹೊತ್ತಲ್ಲಿ ನೀನು ನನ್ನ ಬದುಕೊಳಗೆ (ನನ್ನೊಳಗೆ) ಬಂದುಬಿಟ್ಟೆ. ನೀ ಬರುವವರೆಗೂ ಹಾಗೆ, ಹೀಗೆ, ಹೇಗೋ ಇದ್ದ ನನ್ನ ಬದುಕು ನೀ ಬಂದ ನೆಪದಲ್ಲಿ ಮತ್ತೊಂದೆಡೆಗೆ ತನ್ನ ಮಗ್ಗುಲನ್ನು ಬದಲಾಯಿಸಿದೆ. ಹಾಗೆಯೇ ನಾನೂ ಕೂಡ.
ನನ್ನೊಳಗಿರುವ ನಿನ್ನನ್ನು ನಿನ್ನೊಳಗಿರುವ ನಾನು ಪ್ರತಿ ದಿನ, ಪ್ರತಿ ಕ್ಷಣ ನೆನೆಯುತ್ತಲೇ ಇರುತ್ತೇನೆ. ಒಮ್ಮೆ ತುಟಿಯಂಚಿನ ನಗುವಾಗಿ ಕಂಡರೆ, ಕೆಲವೊಮ್ಮೆ ಕಣ್ಣಂಚಿನ ಕಂಬನಿಯಾಗಿ ಕಾಣುತ್ತೇನೆ. ನಿನ್ನ ಕಂಡಾಗಲೆಲ್ಲ ನನ್ನೊಳಗೆ ನಾನು ಅನುಭವಿಸುವ ಹಿತಕ್ಕೆ ಮನಸ್ಸಿಗಾಗುವ ಸಂಭ್ರಮಕ್ಕೆ ಸಾಟಿ ಮತ್ತೊಂದಿಲ್ಲ. ನನ್ನ ಸಾಧನೆಗಳಿಗೆ ಹಾರೈಕೆ ನೀನಾಗಬೇಕು ಎಂಬುದು ನನ್ನ ಹಂಬಲ.
ಹಾಗೇ ಸುಮ್ಮನೆ ಒಮ್ಮೆ ಕಣ್ಣುಮುಚ್ಚಿ ಮನದಲ್ಲೊಮ್ಮೆ ನಿನ್ನ ನೆನೆದಾಗ ತುಟಿಯಂಚಿನಲ್ಲಿ ಮೂಡುವ ಮುಗುಳ್ನಗೆಗೆ ಕಾರಣ ಕೇಳಿದರೆ ನಾನು ನಿರುತ್ತರನಾಗುತ್ತೇನೆ. ಏನು? ಏಕೆ? ಹೇಗೆ? ಎಂಬ ನಿನ್ನ ಸಾವಿರ ಸರಣಿ ಪ್ರಶ್ನೆಗಳಿಗೆ ನಿನ್ನನ್ನೇ ತುಂಬಿಕೊಂಡಿರುವ ಮನ ಉತ್ತರ ನೀಡದೇ ಮೌನಕ್ಕೆ ಶರಣಾಗಿಬಿಡುತ್ತದೆ. ಏಕೆ ಹೀಗೆ ?
ನನ್ನ ಮೇಲಿನ ಮುನಿಸಿನಲ್ಲಿ ನೀ ತೋರುವ ಮಮತೆ, ಕೋಪದಲ್ಲಿ ತೋರುವ ಕಾಳಜಿಗೆ ಒಂದು ಹೆಸರಿದೆಯೆಂದು ಗೊತ್ತು. ಇಷ್ಟೆಲ್ಲಾ ರೋಮಾಂಚನ, ಪುಳಕಗಳನ್ನುಂಟುಮಾಡುತ್ತಿರುವ ಅದಕ್ಕೆ ಯಾರೋ ಇಟ್ಟಿರುವ 'ಪ್ರೀತಿ' ಎಂದು ಹೆಸರಿಡೋಣವೆ?
ನೀನು ನನ್ನದೆರು ನಿಂತಾಗ, ಹಾಗೆ ಸುಮ್ಮನೆ ನಿನ್ನನ್ನೊಮ್ಮೆ ನನ್ನ ಬಾಹುಗಳಿಂದ ಬಾಚಿ ತಬ್ಬಿ ನಿನ್ನ ಮುದ್ದು ಮೊಗದ ಮೇಲಿನ ಮುಂಗುರುಳು ಹಿಂದೆ ಸರಿಸಿ, ನಿನ್ನ ಹಣೆಯ ಮೇಲೊಂದು ಸಿಹಿ ಮುತ್ತನಿಟ್ಟು ಕೇಳಬೇಕೆನಿಸುತ್ತಿದೆ. ನಿನ್ನನ್ನು 'ಜೊತೆಯಾಗುವೆಯಾ ಜೀವವೆ...? ಎಂದು, ಎದುರು ಬಂದು ನಿಲ್ಲುವೆಯಾ...?
ಎಂದಿಗೂ ನಿನ್ನವ
ಪ್ರೀತಿಯಿಂದ, ರಾಘವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com