ಅಪಾರ ಮೂರ್ತಿ

ಅಪಾರ ಮೂರ್ತಿ
Updated on: 

ಮೊನ್ನೆ ಮೊನ್ನೆ ನಮ್ಮಿಂದ ದೂರವಾದ ನಾಟಕ ರಚನೆಕಾರ, ಕಲಾವಿದ ಮೂರ್ತಿ ನಮ್ಮ ಮನದ ಕಲಾಮಂದಿರಗಳಿಂದ ಮಾಸಿ ಹೋಗುವಂಥವರಲ್ಲ. ಕಲಾಕ್ಷೇತ್ರದಲ್ಲಿ, ಸಾಹಿತ್ಯದಲ್ಲಿ ಧಂ ಕಟ್ಟಿ ದುಡಿದ ಮೂರ್ತಿ ಅವರನ್ನು ಈ ಲೇಖಕರು ತುಂಬಾ ಹತ್ತಿರದಿಂದಲೇ ನೋಡಿದ್ದಾರೆ. ಸಂದರ್ಭೋಚಿತವಾಗಿ ಕೆಲವು ವಿಚಾರಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ...

ಎಂದಿನಿಂದಲೂ ಅಷ್ಟೇ. ಎತ್ತಿಕೊಂಡ ಎಲ್ಲ ಕೆಲಸಗಳಲ್ಲಿ ಎಂಪರಲಾಡುತ್ತ, ಏರುಪೇರು ಕಂಡರೂ ಎಂಡಿಂಗಿನಲ್ಲಿ 'ಎ-ಒನ್‌' ಎಂದೇ ಎನ್ನಿಸಿಕೊಂಡು ಏಗಿದವರು ಎ.ಎಸ್. ಮೂರ್ತಿ. ಕಲಾಕ್ಷೇತ್ರದಲ್ಲಿ, ಸಾಹಿತ್ಯದಲ್ಲಿ ತಮ್ಮನ್ನು ತಾವಾಗಿಯೇ ತೊಡಗಿಸಿಕೊಂಡು ದಿನವಿಡೀ ಧಂ ಕಟ್ಟಿ ದುಡಿದವರು. 'ಮುಪ್ಪು' ಎಂಬ ಪದಕ್ಕೆ ತಮ್ಮ ಶಬ್ದಕೋಶದಲ್ಲಿ ಜಾಗ ಕೊಡದೆ, ಮೊನ್ನೆ ನಮ್ಮಿಂದ ದೂರವಾದರು.
"Some people strongly determine not to grow old' ಮೂರ್ತಿ ಅವರು ಮುಪ್ಪನ್ನು ಒಪ್ಪಿದವರೇ ಅಲ್ಲ. ಇಂಥ ವಿಚಿತ್ರ ಸಂಕಲ್ಪವನ್ನು ಹೊತ್ತು ಕೊನೆವರೆಗೂ ಚಿರಪ್ರಾಯದವರಂತೆ ಶೋಭಿಸಿದ ಅತಿ ಅಪರೂಪದದ ವ್ಯಕ್ತಿಗಳ ಸಾಲಿಗೆ ಸೇರಿದವರು. ಆರಡಿ ಎತ್ತರ, ಆಫ್ರಿಕನ್ನರ ಆಕೃತಿ! ಒಂದು ಕೋನದಿಂದ ನೋಡುವುದಾದರೆ ನೆಲ್ಸನ್ ಮಂಡೇಲಾರ ಮುಖ ಚಹರೆಯನ್ನೇ ಹೆಚ್ಚು ಕಮ್ಮಿ ಎಂಬಂತೆ ಹೋಲುವ ಎ.ಎಸ್. ಮೂರ್ತಿ ಅವರ ಹೆಸರನ್ನು ನಮ್ಮ ವೈಯೆನ್ಕೆ ಒಮ್ಮೆ ಅವರ 'ವಂಡರ್ ಕಣ್ಣು'ನಲ್ಲಿ ಅರ್ಥೈಸಿದ್ದು ಹೀಗೆ; 'ಎ.ಎಸ್. ಮೂರ್ತಿ,that is A.S.M.ಅಂದರೆ 'ಅವ ಸ್ಕಾರಾ ಮೂಶ್‌'. ಹಾಗಂದರೆ ಮುಖದಲ್ಲಿರುವ ಸ್ಕಾರನ್ನು ಮೀಸೆಯಿಂದ ಮುಚ್ಚಿಕೊಂಡಿರುವವನು ಎಂದರ್ಥ!' ಎಂದಿದ್ದರು. ಅವರ ಮಾತು ನಿಜ. ಕಲ್ಪನೆ ಎಂಬುದೇನಿಲ್ಲ. ಹಿಂದೆಂದೋ ಮೂಡಿ ಮಾಸಿರುವ ಗಾಯದ ಗುರುತನ್ನು ಇವರ ಮೀಸೆ ಮುಚ್ಚಿಕೊಂಡಿದೆ ಲಾಗಾಯ್ತಿನಿಂದ. ದಿಟ್ಟಿಸಿ ನೋಡಿದವರಿಗಷ್ಟೇ ಈ ಗುಟ್ಟು ಅರ್ಥವಾಗುತ್ತಿತ್ತು!
ಈಗ ಮೂರ್ತಿ ಅವರ ಸಾಹಿತ್ಯ ಶಕ್ತಿ, ಕಲಾರಾಧನೆಗಳ ಬಗ್ಗೆ ಕೆಲವು ಮಾತು; ಇವರನ್ನು ನಾನು ಐವತ್ತರ  ದಶಕದಿಂದಲೇ ಚೆನ್ನಾಗಿ ಬಲ್ಲೆ. ಆ ಕಾಲಕ್ಕೇ ಹವ್ಯಾಸಿ ರಂಗಭೂಮಿಗಾಗಿ ಹತ್ತು ಹಲವು ಸಾಮಾಜಿಕ ನಾಟಕಗಳನ್ನು ರಚಿಸಿದ್ದ ಮೂರ್ತಿ, ನಾಡಿನಾದ್ಯಂತ ಮನೆಮಾತು. ಕೈಲಾಸಂರ ಕಾಲ ಮುಗಿದಿತ್ತು. ಅವರ ಅನಂತರದಲ್ಲಿ ಆಡು ಭಾಷೆಯಲ್ಲಿ ಸಾಮಾಜಿಕ ನಾಟಕಗಳನ್ನೇ ಮೇಲಿಂದ ಮೇಲೆ ರಚಿಸುತ್ತಿದ್ದವರು ಪರ್ವತವಾಣಿ, ಕೈವಾರ ರಾಜಾರಾವ್, ಕ್ಷೀರಸಾಗರ, ಕೆ. ಗುಂಡಣ್ಣ, ಬೇಲೂರು ಕೃಷ್ಣಮೂರ್ತಿ, ಸಿ. ಅಂತಪ್ಪ, ಎ.ಎನ್. ಮೂರ್ತಿರಾವ್, ನಾ. ಕಸ್ತೂರಿ ಹಾಗೂ ಇನ್ನೂ ಒಬ್ಬಿಬ್ಬರು ಇದ್ದರಷ್ಟೆ. ಇವರೆಲ್ಲಾ ಹಳೇ ಮೈಸೂರು ಪ್ರಾಂತ್ಯದ ನಾಟಕಕಾರರು. ಉತ್ತರ ಕರ್ನಾಟಕದಲ್ಲಿ ಅವರ ದೇಸಿ ಭಾಷೆಯನ್ನು ಬಳಸಿಕೊಂಡು ಸಾಮಾಜಿಕ ನಾಟಕಗಳನ್ನು ಬರೆದವರ ಪೈಕಿ ಪ್ರಮುಖರೂ ಶ್ರೀರಂಗ, ದ.ರಾ. ಬೇಂದ್ರೆ, ಲಕ್ಷ್ಮಣರಾವ್ ಬೇಂದ್ರೆ, ಎನ್ಕೆ, ಬೀ.ಈ ಜೋಷಿ ಮತ್ತಿತರರು. ಇವರೆಲ್ಲರ ಮೇಲೆ ಪೈಪೋಟಿಗೆ ಬಿದ್ದವರಂತೆ ನಾಟಕಗಳನ್ನು ರಚಿಸುತ್ತಿದ್ದವರು ಎ.ಎಸ್. ಮೂರ್ತಿ! ಮತ್ತೆ, ಇವರೆಲ್ಲಾ ರಚಿಸಿರುವ ನಾಟಕಗಳ ಒಟ್ಟಾರೆಯ ಸಂಖ್ಯೆಗಿಂತ ಹೆಚ್ಚೆಂಬಂತೆ ನಾಟಕಗಳನ್ನು ಸೃಷ್ಟಿಸಿರುವ ಕೀರ್ತಿ ಸಲ್ಲಬೇಕಾದ್ದು ಮೂರ್ತಿ ಅವರಿಗೆ. ಸಂಖ್ಯಾಬಲದ ದೃಷ್ಟಿಯಿಂದ ನಿಜಕ್ಕೂ ಇದೊಂದು ದಾಖಲೆ. ಕನ್ನಡದಲ್ಲಷ್ಟೇ ಅಲ್ಲ, ಪ್ರಾಯಶಃ ಪ್ರಪಂಚದ ಬೇರಾವ ಭಾಷೆಯಲ್ಲೂ ಮೂರ್ತಿಯವರು ಬರೆದಿರುವಷ್ಟು ನಾಟಕಗಳನ್ನು ಬೇರೊಬ್ಬರು ಬರೆದಿರಲಾರರು.
ಈ ಮೂರ್ತಿ ಅನಾದಿ ಕಾಲದಿಂದಲೂ ಪಾನಪ್ರಿಯ ಹಾಗೂ ಧೂಮಪಾನ ಪ್ರಿಯ. ಇವೆರಡರಿಂದಲೇ ಎಂದರೂ ತಪ್ಪಿಲ್ಲ, ಮೂರ್ತಿಯವರಿಗೆ ಎಲ್ಲಿಲ್ಲದ ಸ್ಫೂರ್ತಿ. ಬೆರಳುಗಳ ನಡುವೆ ಉರಿವ ಸಿಗರೇಟಿಲ್ಲದೆ ಸುಮ್ಮನಿರುವ ಮೂರ್ತಿಯವರನ್ನು ನಾನೆಂದೂ ಕಂಡದ್ದಿಲ್ಲ. ಮತ್ತೆ ಸಂಜೆಯಾಗುತ್ತಲೇ ಮರೆಯಲ್ಲಿ ಕುಳಿತು ಸುರೆಗೆ ಶರಣಾಗುವುದು ಮಾಮೂಲು.
ನಮ್ಮ ನೆಲದಲ್ಲಿ ಎಲ್ಲ ಕಾಲಕ್ಕೂ ಸಲ್ಲುವಂತೆ ಉಳಿದುಕೊಂಡಿರುವ, ನಾಟಕಗಳ ರಚನೆಯನ್ನು ಉಳಿಸಿಕೊಂಡ ಏಕೈಕ ನಾಟಕಕಾರರು ಇವರೊಬ್ಬರೇ ಎಂದರೂ ತಪ್ಪಾಗದು. ಈ ಮಾತಿಗೆ ವಿವರಣೆ ಹೀಗೆ; 1966-67ರ ಸುಮಾರಿನಲ್ಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ತರಬೇತಿ ಪಡೆದು ಪದವೀಧರರಾಗಿದ್ದ ಬಿ.ವಿ. ಕಾರಂತರು ಬೆಂಗಳೂರಿಗೆ ಬಂದರು. ಬಂದರೆಂದರೆ ಸುಮ್ಮನೆ ಬರಲಿಲ್ಲ. ಸುಂಟರ ಗಾಳಿಯಂತೇ ಬಂದರು. ವಿಶಿಷ್ಟವೆನಿಸುವ ನಾಟಕಗಳನ್ನು ವಿಭಿನ್ನ ಶೈಲಿಯಲ್ಲಿ, ಯಾವ ಸಜ್ಜು ಸಲಕರಣೆ ಪರದೆಗಳ ಸಹಾಯವೂ ಇಲ್ಲದೆ, ಅತ್ಯಂತ ಸರಳ ರೀತಿಯಲ್ಲಿ ಸೂಚನಾತ್ಮಕ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ಹೇಗೆ ಎಂಥ ನಾಟಕಗಳನ್ನಾದರೂ ಆಡಬಹುದು ಎಂಬುದನ್ನು ಹಲವು ನಾಟಕಗಳ ಯಶಸ್ವೀ ಪ್ರಯೋಗಗಳ ಮೂಲಕ ತೋರಿಸಿಕೊಟ್ಟವರು ಬಿ.ವಿ. ಕಾರಂತರು. 'ಏವಂ ಇಂದ್ರಜಿತ್‌', 'ಹಯವದನ', 'ತೊಗಲಕ್‌', 'ಸತ್ತವರ ನೆರಳು' ಇವೆಲ್ಲಾ ಕಾರಂತರ ಆ ಕಾಲದಲ್ಲಿ ನಡೆಸಿದ ಅದ್ಭುತ ಪ್ರಯೋಗಗಳು.
ಅಲ್ಲದೆ ನಮ್ಮ ಸಾಮಾಜಿಕ ನಾಟಕಗಳಲ್ಲಿ ಸಂಗೀತವನ್ನು ಅತಿಶಕ್ತಿಯುತವಾಗಿ ಬಳಸಿಕೊಳ್ಳಬಹುದೆಂಬುದನ್ನು ತೋರಿಸಿಕೊಟ್ಟವರೂ ಬಿ.ವಿ. ಕಾರಂತರೇ. ಮತ್ತದೇ ಕಾಲಕ್ಕೆಂಬಂತೆ ಸಿ.ಜಿ. ಕೃಷ್ಣಮೂರ್ತಿ, ಆರ್. ನಾಗೇಶ್, ಇಂಥವರೂ ಇದೇ ನೂತನ ಶೈಲಿಯಲ್ಲಿ ನಾಟಕಗಳನ್ನು ನಿರ್ದೇಶಿಸಿ ಆಡಿಸಲಾರಂಭಿಸಿದರು. ಹೀಗಾಗಿ ಈ ರೀತಿಯ ಚಮತ್ಕಾರಭರಿತ ನಾಟಕಗಳ ಪ್ರಯೋಗಗಳ ರುಚಿ ಕಂಡ ಹವ್ಯಾಸಿ ಕಲಾವಿದರು 'ಆಡಿದರೆ ಹೀಗಾಡಬೇಕು. ಇಂಥ ನಾಟಕಗಳನ್ನಾಡಬೇಕು' ಎಂಬ ತೀರ್ಮಾನ ತೆಗೆದುಕೊಂಡಿದ್ದರಿಂದ, ಈ ರೀತಿಯ ನವ್ಯ ಧಾಟಿಯ ನಾಟಕಗಳನ್ನು ರಚಿಸಲು ಹಿಂಜರಿದ ನಮ್ಮ ಅಂದಿನ ನಾಟಕಕಾರರೆಲ್ಲಾ ನಾಟಕಗಳನ್ನು ಬರೆಯುವುದನ್ನೇ ನಿಲ್ಲಿಸಿಬಿಟ್ಟರು. ಆದರೆ ನಮ್ಮ ಹವ್ಯಾಸಿ ರಂಗಭೂಮಿ ಕಂಡ ಈ ರೀತಿಯ ಬದಲಾವಣೆಗೂ ಹೊಂದಿಕೊಂಡು ನವ್ಯ ಶೈಲಿಯಲ್ಲಿ ನಾಟಕಗಳನ್ನು ರಚಿಸುತ್ತ ಮುಂದುವರಿದವರು ಪ್ರಾಯಶಃ ಮೂರ್ತಿಯವರೊಬ್ಬರೇ. ಮತ್ತೆ, ಅಂದಿನ ನಾಟಕಕಾರರಿಗೂ, ಇಂದಿನ ನಾಟಕಕಾರರಿಗೂ ಭದ್ರವಾದ ಕೊಂಡಿ ಎಂಬಂತೆ ಬೆಸೆದುಕೊಂಡಿದ್ದವರೂ ಇವರೊಬ್ಬರೇ. ಅಲ್ಲದೆ, ಇವರ ಬಹುತೇಕ ಎಲ್ಲ ನಾಟಕಗಳೂ ಪ್ರಕಟಗೊಂಡಿರುವುದು ಇನ್ನೊಂದು ವಿಶೇಷ. ಇವುಗಳ ಪೈಕಿ ಹಲವು ಪುನರ್ ಮುದ್ರಣಗಳನ್ನೂ ಕಂಡಿದೆ! ರಂಗನಾಟಕಗಳನ್ನಲ್ಲದೇ ರೇಡಿಯೋ ನಾಟಕಗಳನ್ನೂ ಸಾಕಷ್ಟು ಸಂಖ್ಯೆಯಲ್ಲಿ ರಚಿಸಿದ ಮೂರ್ತಿ ಬೀದಿ ನಾಟಕಗಳ ಭೀಷ್ಮ! ಮೂಲತಃ ಬೀದಿ ನಾಟಕಗಳನ್ನು ಅಸ್ತಿತ್ವಕ್ಕೆ ತಂದ ಅಧೈರ್ಯರು ಇವರು.
ಎಲ್ಲ ಸರಿಯೇ, ಶಕ್ತಿ ಸಾಧನೆ ಹೀಗೆಲ್ಲಾ ಇದ್ದರೂ, ಉತ್ತಮ ನಾಟಕಕಾರ- ನಟ- ನಿರ್ದೇಶಕ- ವಿಮರ್ಶಕ ಎಂದೆಲ್ಲಾ ಎನಿಸಿಕೊಂಡ ಮೂರ್ತಿ ತಮಗೆ ನಿರಂತರ ಕೀರ್ತಿ ತರಬಲ್ಲಂತಹ ನಾಟಕಗಳನ್ನು ಅತಿ ಎತ್ತರದಲ್ಲಿ ನಿಂತು ವಿಸ್ತಾರವೆನಿಸುವ ಹರವಿನಲ್ಲಿ ಈ ತಹಲ್ವರೆವಿಗೆ ರಚಿಸಿದ ಸಾಧಾರಣವೆನಿಸುವ ಕೃತಿಗಳ ಸೃಷ್ಟಿಯಿಂದಲೇ ಸಂತೃಪ್ತಿಗೊಂಡು ತಮ್ಮ ಸಾಹಿತ್ಯ ಶಕ್ತಿಯನ್ನೆಲ್ಲಾ ಸೀಮಿತಗೊಳಿಸಿಕೊಂಡಿರುವುದು ಇವರಲ್ಲಿನ ದೊಡ್ಡ ವೈಫಲ್ಯ.ಹೀಗಾಗಬಾರದಿತ್ತು. 'ಕ್ಷೇತ್ರದ ಕಾಗೆ', 'ಅಯ್ಯಾ ನಾನು ಯಾರು', 'ಆ ಗಾಂಧಿ ಈ ಗಾಂಧಿ'- ಇಂಥ ನಾಟಕಗಳಲ್ಲಿ ಮೂರ್ತಿಯವರ ತಿಮಿರನ್ನು ಯಾರಾದರೂ ಗುರುತಿಸಬಹುದು.
ಮೂರ್ತಿಯವರ ಮತ್ತೊಂದು ಮಹೋನ್ನತ ಗುಣವೆಂದರೆ, ಒಬ್ಬ ನಾಟಕಕಾರನಾಗಿ ಅವರೆಂದೂ ಯಾವ ನಾಟಕವನ್ನೂ ಆಧರಿಸಿ ಬರೆದಿಲ್ಲ. ಅನುವಾದಿಸಿ ಬರೆದಿಲ್ಲ. ಯಾರೋ ಹೇಳಿದ, ಚಂದಮಾಮ, ಬಾಲಮಿತ್ರಗಳಲ್ಲಿ ಬರುವಂಥ ಅಡಗೂಲಜ್ಜಿ ಕಥೆಗಳ ನೆರವು ಪಡೆದಿಲ್ಲ. ಇತ್ತೀಚಿನ ಪ್ರತಿಷ್ಠಿತ ಕೆಲವು ನಾಟಕಕಾರರಂತೆ, ಜಾನಪದ ಐತಿಹಾಸಿಕ ಪೌರಾಣಿಕಗಳ ವಸ್ತುವಿಚಾರಗಳನ್ನು ತೆಗೆದುಕೊಂಡಿಲ್ಲ. ಸಮಾಜ, ಸಾರ್ವಜನಿಕಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸರಕ್ಕನೆ ಸ್ಪಂದಿಸುವ ಸೂಕ್ಷ್ಮತೆಯನ್ನು ಲಾಗಾಯ್ತಿನಿಂದಲೂ ಉಳಿಸಿಕೊಂಡ ಮೂರ್ತಿಯವರು ರಚಿಸಿರುವುದೆಲ್ಲಾ ಸಾಮಾಜಿಕ ನಾಟಕಗಳನ್ನೇ ಎಂಬುದು ಗಮನಾರ್ಹ. ಅವರ ಕೃತಿಗಳು ಗಟ್ಟಿಯಾದವೋ, ಜಾಳುಜಾಳೋ ಎಂಬ ವಿಚಾರ ಪ್ರಸ್ತುತ ಅಪ್ರಸ್ತುತ. ಆದರೆ, ಇವರ ರಚನೆಗಳೆಲ್ಲಾ ಸರ್ವ ರೀತಿಯಲ್ಲೂ ಸ್ವತಂತ್ರವಾಗಿರುವ ಕೃತಿಗಳು ಎಂಬುದನ್ನು ಬರಹಗಾರರೆಲ್ಲಾ ನಮ್ರತೆಯಿಂದ ಒಪ್ಪಿಕೊಳ್ಳಲೇಬೇಕು ಎಂಬುದು ನನ್ನ ಅನಿಸಿಕೆ.

-ಬಿ.ಎಸ್. ಕೇಶವರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com