

ಕರ್ನಾಟಕದ ಹಳೆಯ ವಾಸ್ತುಕಲೆಯ ಮಾದರಿಗಳನ್ನು ನೋಡಬೇಕೆ? ಹಂಪಿಯ ಕನ್ನಡ ವಿಶ್ವವಿದ್ಯಾಲಯ ಆವರಣಕ್ಕೆ ಬನ್ನಿ. ಈ ವಿವಿಯ ಪರಿಸರ ವಿಶಾಲವಾದ 800 ಎಕರೆ ಪ್ರದೇಶದಲ್ಲಿದೆ. ಎತ್ತ ನೋಡಿದರತ್ತ ಕಲ್ಲುಗಳೇ ಕಲ್ಲುಗಳು. ಮಧ್ಯೆ ಒಂದು ಮನಮೋಹಕ ಕೆರೆ. ಇಕ್ಕೆಲಗಳಲ್ಲಿ ಅದ್ಭುತವಾಗಿರುವ ಸಣ್ಣಪುಟ್ಟ ಬೆಟ್ಟಗುಡ್ಡ, ಕಲ್ಲು, ಕಂಟಿ, ಪೊದೆ ಮತ್ತು ತಗ್ಗು ದಿನ್ನೆಗಳ ಪರಿಸರ ತನ್ನ ಸಹಜ ರೂಪದಲ್ಲಿ ಮೈಚೆಲ್ಲಿದೆ.
ಹಂಪಿಗೆ ಬರುವ ಪ್ರವಾಸಿಗರೆಲ್ಲ ಕನ್ನಡ ವಿವಿಯ ಕ್ಯಾಂಪಸ್ಸಿಗೂ ಬರುತ್ತಾರೆ. ಹಾಗೆ ಬಂದವರಿಗೆಲ್ಲ ವಿವರ ಮಾಹಿತಿಗಳನ್ನು ಒದಗಿಸುವ ಪರಿಸರ ಇಲ್ಲಿದೆ. ಆವರಣದ ತುಂಬೆಲ್ಲ ನೆಟ್ಟಿರುವ, ಅಚ್ಚ ದೇಶಿ ಶೈಲಿಯ ಮಾರ್ಗಸೂಚಿಗಳು ಪ್ರವಾಸಿಗರಿಗೆ, ಹೊಸಬರಿಗೆ ಸಹಾಯಕವಾಗಿವೆ.
ಇಲ್ಲಿರುವ ಕಾಯಕದ ಮನೆ, ನವರಂಗ, ತುಂಗಭದ್ರ, ತ್ರಿಪದಿ, ಚಾವಡಿ ಕ್ರಿಯಾಶಕ್ತಿ, ಭುವನವಿಜಯ, ಜಕ್ಕಣ ಮಂಟಪ, ಶ್ರೀಶೈಲ, ಕಟ್ಟಡಗಳು ಆವರಣದ ಸೊಗಸನ್ನು ಇಮ್ಮಡಿಗೊಳಿಸಿವೆ. ಅಕ್ಷರ ಗ್ರಂಥಾಲಯ, ಭುವನವಿಜಯ ಎಂಬ ಬಹೋಪಯೋಗಿ ಸಂಭಾಂಗಣ ಕಟ್ಟಡ, ವಸತಿಗೃಹಗಳು, ಚೆಲುವ ಕನ್ನಡ ಎಂಬ ಅತಿಥಿಗೃಹ; ನಾಟಕ ಪ್ರದರ್ಶನಕ್ಕೆ ಮೀಸಲಾದ ನವರಂಗ ಬಯಲು ರಂಗಮಂದಿರ ಮೊದಲಾದವು ಇಡೀ ದೇಶದಲ್ಲಿಯೇ ವಿಶಿಷ್ಟ ಗ್ರಾಮೀಣ ಸೊಗಡಿನ ಶೈಲಿಯಲ್ಲಿ ಆಕರ್ಷಣೀಯ ಮತ್ತು ಅನುಕರಣೀಯ ಕಟ್ಟಡಗಳಾಗಿವೆ. ಇಲ್ಲಿರುವ ಬಹುಪಾಲು ಕಟ್ಟಡಗಳು ಕರ್ನಾಟಕದ ವಾಸ್ತುಶಿಲ್ಪಕ್ಕೆ ನೀಡಿದ ಅಪರೂಪದ ಸಾಂಸ್ಕೃತಿಕ ಕೊಡುಗೆಗಳು. ಕ್ಯಾಂಪಸ್ಸಿನ ಎದುರಿನಲ್ಲೇ ಕಾಣುವ ಗ್ರಂಥಾಲಯದ ಕಟ್ಟಡ ಒಂದನ್ನು ಬಿಟ್ಟರೆ ಇತರೆಲ್ಲ ನಿರ್ಮಾಣಗಳೂ ನಮ್ಮನ್ನು ಹಕ್ಕಬುಕ್ಕರ ಕಾಲಕ್ಕೆ ಒಯ್ದು ನಿಲ್ಲಿಸುವಂತಿವೆ.
ಈ ಆವರಣದ ಮೇಲೆ ಬೇರೆ ಬೇರೆ ವಿಭಾಗಗಳಿಗೆ ತೆರಳಲು ಅಲ್ಲಲ್ಲಿ ಕಟ್ಟಡದ ಮುಂದುಗಡೆ, ರಸ್ತೆ ಬದಿಗಳಲ್ಲಿ 'ಮಾರ್ಗಸೂಚಿ'ಗಳನ್ನು ನೆಡಲಾಗಿದೆ. ಇವುಗಳು ಯಾವುದೇ ಆಧುನಿಕ ವೇಷಗಳನ್ನು ಧರಿಸಿಲ್ಲ. ಲೋಹದ ಅಥವಾ ಪ್ಲಾಸ್ಟಿಕ್ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡಿಲ್ಲ. ಕಟ್ಟಡಕ್ಕೆ ಬಳಸಿದಂಥ ಕಲ್ಲುಗಳನ್ನೇ ಉಪಯೋಗಿಸಿ 'ದಾರಿಸೂಚಕ'ಗಳನ್ನಾಗಿಸಿದ್ದಾರೆ.
ಈ ಮಾರ್ಗಸೂಚಿಗಳು ಪಾರಂಪರಿಕ, ಸಮಕಾಲೀನ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಅರಸು ಮನೆತನ ಹಿನ್ನಲೆಯೊಳಗೆ ಪ್ರತಿನಿಧಿಸುವ ಫಲಕಗಳಾಗಿವೆ. ಕನ್ನಡ ವಿವಿಯ ಎಲ್ಲ ವಿಭಾಗಗಳೊಂದಿಗೆ ಮಾರ್ಗಸೂಚಿಗಳು ಕೂಡ ಚರಿತ್ರೆಯ ಸಾಲಿನಲ್ಲಿ ನಿಂತು ಕನ್ನಡದ ಸಂಸ್ಕೃತಿ ಪರಂಪರೆಗಳ ಅಧಿಕೃತ ಪ್ರತಿನಿಧಿಗಳಾಗಿವೆ.
-ಪ್ರವೀಣರಾಜು ಎಸ್. ಸೊನ್ನದ