

ಕಾಲದ ಕೂಸು ಹುಟ್ಟುವಾಗ ಅಳುವುದಿಲ್ಲ; ನಗುತ್ತದೆ! ಕಾಲದ ಸ್ಥಾಯಿಭಾವ ಆನಂದ, ಖುಷಿ, ಸಂತೋಷವೆ ಹೊರತು ದುಃಖ, ನೋವು ಅಥವಾ ಆತಂಕವಲ್ಲ. ಕಾಲ ತನ್ನ ಸಹಜ ಸ್ಥಿತಿಯಲ್ಲಿ ಯಾವಾಗಲೂ ಇರುತ್ತದೆ. ಆದರೆ ನಾವು ಸಹಜ ಸ್ಥಿತಿಯಲ್ಲಿರುವುದು ತೀರಾ ಅಪರೂಪ! ಹೀಗಾಗಿಯೇ ನಾವು ಕಾಲದೊಂದಿಗೆ ಸದಾ ಇರುವುದೇ ಇಲ್ಲ. ಇದು ನಮ್ಮ ದುರಂತ! ಇದಕ್ಕೂ ಕಾಲಕ್ಕೂ ಯಾವ ಸಂಬಂಧವೂ ಇಲ್ಲ. ನಾವು ನಗುವಾಗ ಕಾಲ ನಗುತ್ತದೆ! ನಾವು ಅಳುವಾಗ ಕಾಲವೂ ಅಳುತ್ತದೆ. ಇದು ನಮ್ಮ ಮನಃಸ್ಥಿತಿಗೆ ನಿಜಹೇಳಬೇಕೆಂದರೆ ಕಾಲಕ್ಕೆ ಇವುಗಳ ಅಗತ್ಯವೇ ಇಲ್ಲ!
ಕಾಲದ ವಿಸ್ಮಯ ಹೇಗೆ ಎಂದರೆ ಅಲ್ಲಿ ಎಲ್ಲವೂ ಒಂದಾಗುತ್ತದೆ. ಭಿನ್ನತೆ ಕಾಲದ ಲಕ್ಷಣವಲ್ಲ! ಏಕತೆ, ಸಮಗ್ರತೆ ಕಾಲದ ಗುಣಧರ್ಮ! ಕಾಲದ ಕೂಸಿನ ಹೆರಿಗೆ ಮಾಡುವ ಸೂಲಗಿತ್ತಿಯರೂ ನಾವೇ ಹೆರಿಗೆಯೂ ನಮ್ಮದೆ ಮತ್ತು ಹುಟ್ಟುವ ಕೂಸೂ ನಾವೇ! ಕಾಲ ನಮ್ಮ ಮಗು! ತಾಯಿ-ಮಗು ಒಂದೇ ಆಗುವುದು ಕಾಲದಲ್ಲಿ ಮಾತ್ರ! ನಮ್ಮ ಕಾಲ ಹುಟ್ಟುವುದು ಮಗುವಿನ ಸ್ಥಿತಿಯಲ್ಲೇ! ಇಲ್ಲಿಗೆ ಬಂದ ಮೇಲೆ ಕಾಲದ ಕ್ಷಣಗಣನೆ ಆರಂಭ! ನಾವು ಆರಂಭ ಎಂದುಕೊಂಡದ್ದು ಇನ್ನೊಬ್ಬನಿಗೆ ಕೊನೆಯಾಗುವುದು ಈ ಕಾಲದ ಭಿತ್ತಿಯಲ್ಲೇ! ಯಾವುದು ಮೊದಲು, ಯಾವುದು ಕೊನೆಯದು ಎಂಬುದು ಲೌಕಿಕ! ಕಾಲ ನಮಗೆ ಲೌಕಿಕವಾದರೆ ಅದರ ಸಹಜ ಸ್ಥಿತಿಯಲ್ಲಿ ಅ ಲೌಕಿಕವೇ! ಅಲೌಕಿಕಕ್ಕೆ ಅಲುಗಾಟವಿಲ್ಲ, ಕುಲುಕಾಟವಿಲ್ಲ! ಅದು ತಟಸ್ಥ! ಅದು ನಿರ್ಲಿಪ್ತ; ಅದು ನಿರ್ಮಲ!
ಹುಟ್ಟಿದ ಮಗುವೆ ತಾಯಿಯ ಆರೈಕೆ ಮಾಡುವುದೂ ಕಾಲದಲ್ಲಿಯೇ! ಕೂಸು ಹುಟ್ಟಿಯಾಗಿದೆ! ಹೊಸ ಸಮಯ ಒಂದಾಗಿದೆ. ಹೊಸತೇನೋ ಬಂದಿದೆ ಎನ್ನುವುದು ಸುತ್ತಲೂ ಇರುವವರಿಗೆಲ್ಲಾ ಗೊತ್ತು ಆಗಿದೆ. ಅವರಿಗೆಲ್ಲಾ ಹಳತು ಮರೆತು ಹೋಗಿದೆ. ಅಥವಾ ನಟಿಸುತ್ತಿದ್ದಾರೆ. ಮಗುವಿಗೆ ನಟನೆ ಗೊತ್ತಿಲ್ಲ; ನಟಿಸಲು ಅದಕ್ಕೆ ಪುರುಸೊತ್ತು ಇಲ್ಲ! ಹುಟ್ಟಿದ ಗಳಿಗೆಯಿಂದಲೇ ಅದಕ್ಕೆ ಕಾಲವೆನ್ನುವ ಅಬ್ಬೆಯೊಡನೆ ವ್ಯವಹರಿಸಲಿ ಕುತೂಹಲ; ತಾಯಿಗೇ ಹಾಲುಣಿಸುವ ಕಾತರ; ತಾಯಿಗೇ ನುಡಿ ಕಲಿಸುವ ಹಂಬಲ! ಕಾಲದ ಕೂಸು ಹುಟ್ಟುವಾಗಲೇ ಪ್ರಬುದ್ಧ; ಪ್ರಬಲ! ಇದು ಮಗುವನ್ನು ನೋಡುತ್ತಿರುವ ಜಗತ್ತಿಗೆ ಗೊತ್ತಿಲ್ಲ! ಮಗು ತನಗೆ ಎಲ್ಲವೂ ತಿಳಿದಿದೆಯೆಂದು ಹೇಳುವುದೂ ಇಲ್ಲ! ಕೂಸು ತಾಯಿಯ ಕೈ ಹಿಡಿದು, ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ನಡಿಗೆ ಕಲಿಸುವಾಗ ಕಾಲದ ಚಲನೆ ಪ್ರಾರಂಭವಾಗುತ್ತದೆ! ಅಥವಾ ಚಲನೆಯ ಕಾಲ ಗೋಚರಿಸುತ್ತದೆ!
ಕೂಸಿಗೆ ಇದು ಗೊತ್ತಿರುವುದಿಲ್ಲ! ಅದಿನ್ನೂ ಕಾಲದೊಂದಿಗೇ ಇದೆ! ಕಾಲದೊಂದಿಗೆ ಬೆರೆತಾಗ ಸಮಯ ಹೋದದ್ದೇ ತಿಳಿಯುವುದಿಲ್ಲ. ಆಟವಾಡುತ್ತಿರುವಾಗ ಸಮಯ ಮತ್ತು ನಾವು ಒಂದಾಗುತ್ತೇವೆ. ಅದು ಕೂಸಿನ ಸಮಯ! ಕಾಲದ ಮಗು ನಿಧಾನವಾಗಿ ನುಡಿಪಾಠ ಆರಂಭಿಸುತ್ತದೆ. ಇಲ್ಲಿ ಮಗು ಅಮ್ಮಾ ಎನ್ನುವುದೋ ಅಮ್ಮನೇ ಅಮ್ಮಾ ಎನ್ನುವುದೋ ಎನ್ನುವುದು ಭಿನ್ನತೆ ಕಳೆದುಕೊಳ್ಳುತ್ತದೆ. ಅಮ್ಮನೆ ನುಡಿಪಾಠ ಪ್ರಾರಂಭಿಸಿದಂತೆ ಕಂಡರೂ, ಮಗು ಅನುಕರಿಸಿದಂತೆ ಕಂಡರೂ ಅದುವೆ ನಿಜವಲ್ಲ! ಕೂಸು ಅಮ್ಮಾ, ಅಜ್ಜ, ಅಜ್ಜಿಯೆಂದು ತನಗಿಷ್ಟವಾದ ಹಾಗೆ ನುಡಿದು ತಾಯಿಯನ್ನೂ ಹಾಗೆಯೇ ಹೇಳುವಂತೆ ಮಾಡಿ ನಗುತ್ತದೆ. ಇದು ಕೂಸು ಬಾಯ್ತೆರೆದು ತಾಯಿಗೇ ವಿಶ್ವದರ್ಶನ ಮಾಡಿಸಿದ ಹಾಗೆ! ತಾಯಿಗೋ ಅಚ್ಚರಿ! ತಾನೇನು ಕಂಡೆ ಎನ್ನುವ ವಿಸ್ಮಯ! ಬೆಳೆದು ದೊಡ್ಡವರಾದ ನಮಗೆ ಕಾಲವೊಂದು ವಿಸ್ಮಯ! ಯಾವುದು ಅರ್ಥವಾಗುವುದಿಲ್ಲವೋ ಅದು ನಮ್ಮ ಪಾಲಿಗೆ ಅಚ್ಚರಿಯೇ ಅಲ್ಲವೇ? ಆದರೆ ಮಗುವಿಗದು ಸಾಮಾನ್ಯ ಸ್ಪಂದನ! ಅದು ಕಲಿಸುತ್ತಿದೆ ಮತ್ತು ಕಲಿಯುತ್ತಿದೆ; ಆಡುತ್ತಿದೆ ಮತ್ತು ಆಟವಾಡಿಸುತ್ತಿದೆ; ನಡೆಯಲು ಕಲಿಸುತ್ತಿದೆ ಮತ್ತು ಓಟ ಸಿಕ್ಕಿದ ಹಾಗೆ ಓಡಿಸುತ್ತಿದೆ! ಕಾಲದ ಕೂಸು ಓಡುವಾಗ ಅದರ ಹಿಂದೆ ಅಜ್ಜ, ಅಜ್ಜಿ, ಅಮ್ಮ, ಅಪ್ಪ, ಎಲ್ಲರೂ ಓಡುತ್ತಾರೆ! ಅಜ್ಜನಿಗೆ ಕಾಲವನ್ನು ಹಿಡಿಯುವಾಸೆ; ಅಜ್ಜಿಗೆ ಕಾಲಬಿದ್ದು ಪೆಟ್ಟು ಮಾಡಿಕೊಂಡರೆ ಎನ್ನುವ ಭಯ; ಅಮ್ಮನಿಗೆ ಕೂಸಿಗೆ ದೃಷ್ಟಿ ತಾಗಿದರೆ ಎನ್ನುವ ಆತಂಕ; ಅಪ್ಪನಿಗೋ ತನ್ನ ಕಾಲ ಎಷ್ಟು ಚೆನ್ನಾಗಿದೆಯೆನ್ನುವ ಹೆಮ್ಮೆ!
ಮಗುವಿಗೆ ಏನು ತೊಡಿಸಿದರೂ ಚಂದ; ಏನು ಮಾಡಿದರೂ ಅಂದ! ಗಂಡು ಮಗುವಿಗೆ ಹೆಣ್ಣಿನ ಉಡುಗೆ ತೊಡಿಸಿದರೂ ಅದು ಇನ್ನಷ್ಟು ಮುದ್ದಾಗಿಯ ಕಾಣುತ್ತದೆ. ಮೊದಲ ಬಾರಿ ಮಗುವನ್ನು ಆ ವೇಷದಲ್ಲಿ ನೋಡಿದವರು ನಿಮ್ಮ ಮಗಳು ತುಂಬಾ ಮುದ್ದು ಮುದ್ದಾಗಿದ್ದಾಳೆ ಎಂದು ಹೇಳಿ ಹುಬ್ಬೇರಿಸುವಂತೆ ಮಾಡಿಯಾರು! ಕೂಸು ತನಗೇಕೆ ಸ್ತ್ರೀ ವೇಷ ಹಾಕಿದ್ದು ಎಂದು ಕೇಳುವುದೇ ಇಲ್ಲ. ಉಡುಗೆ ತೊಡಿಸಿದವರ ಆನಂದ ಮಗುವಿನ ಅನಂದವಾಗಿ ರೂಪಾಂತರಗೊಂಡಾಗ ಅದು ಇಡೀ ಮನೆಯ ಸಂತೋಷವಾಗುತ್ತದೆ! ಹೊಸ ಕಾಲಕ್ಕೆ ಹಳೆಯ ತೊಡುಗೆ ತೊಡಿಸಿ ನೋಡುವವರೂ ನಾವೇ, ಹೊಸ ಉಡುಪು ಹಾಕುವವರೂ ನಾವೇ, ಸ್ನಾನ ಮಾಡಿಸಲಿಕ್ಕಿದೆ ಎಂದು ವಿವಸ್ತ್ರಗೊಳಿಸುವವರೂ ನಾವೇ! ಹೀಗೇಕೆ ಮಾಡಿದೆಯೆಂದು ಕಾಲ ಕೇಳಿದ್ದುಂಟೆ?
ಕಾಲದ ಕೂಸು ಪಿಳಿ ಪಿಳಿ ಕಣ್ಣ ಬಿಟ್ಟು ನೋಡುತ್ತಿದೆ. ಅದಕ್ಕೆ ಎಲ್ಲವೂ ಹೊಸತರಲ್ಲಿ ಹೊಸತು; ನವನವೀನ! ತಾನು ನೋಡುತ್ತಿರುವುದು, ಈಗಾಗಲೇ ಇದ್ದ ಬೆಳಕನ್ನು, ತಾನು ಒಳಗೆಳೆದುಕೊಳ್ಳುತ್ತಿರುವುದು ಈಗಲೆ ಇದ್ದ ಗಾಳಿಯನ್ನು ಎನ್ನುವ ಅರಿವು ಇರದಿರುವುದರಿಂದಲೇ ಅದು ಕೂಸು, ಇರುವುದನ್ನು ಇರುವಂತೆ ನೋಡುವುದಕ್ಕೆ ಅದರ ಕೆಲಸ! ನೋಡುತ್ತಿರುವ ಕ್ರಿಯೆಯ ಅರಿವೂ ಅದಕ್ಕಿಲ್ಲ! ಅದಕ್ಕೇ ತೆರೆದ ಕಣ್ಣಿಂದ ನೋಡುತ್ತದೆ. ತಾಯಿಗೆ ತನ್ನ ಮಗುವಿಗಿನ್ನೂ ಕಾಣಿಸುತ್ತಿದೆಯೇ? ಕೇಳಿಸುತ್ತಿದೆಯೇ? ಎನ್ನುವ ಹೆದರಿಕೆ ಇದ್ದೇ ಇರುತ್ತದೆ. ಹೀಗಾಗಿಯೇ ಕಾಣಿಸುತ್ತದೆ ಎನ್ನುವುದನ್ನು ದೃಢಪಡಿಸಲು ಆಕೆ ಏನೇನೋ ಆಟವಾಡುತ್ತಾಳೆ! ಚಿಟಿಕೆ ಹೊಡೆದು ಮಗುವಿನ ನೋಟ ಆ ಕಡೆ ಹೊರಳುವಂತೆ ಮಾಡುತ್ತಾಳೆ! ಆಗ ಪ್ರಾರಂಭವಾದ ಅಭ್ಯಾಸ ಮುಂದೆಯೂ ಮುಂದುವರಿದು, ಕಾಲದ ಗಮನ ಸೆಳೆಯಲು ನಾವು ಅನೇನೋ ಮಾಡುತ್ತಲೇ ಇರುತ್ತೇವೆ! ಕಾಲ ನಮ್ಮ ಚಿಟಿಕೆಗೆ, ಚಪ್ಪಾಳೆಗೆ, ಹಾಡಿಗೆ, ಕೂಗಿಗೆ, ನಗುವಿಗೆ, ಕುಣಿತಕ್ಕೆ ಮಾರುಹೋಗಿದೆಯೆಂದು ಧೃಡವಾಗಿ ನಂಬಿ ಕಾಲಕಳೆಯುವಾಗ ಕಳೆದಷ್ಟು ಬದುಕು ಮಾತ್ರ ಎನ್ನುವ ಸತ್ಯ ಮರೆತೇ ಹೋಗುತ್ತದೆ!
ಪ್ರತಿ ಕೂಸಿನ ಕಾಲ ಹೊಸ ಕಾಲ; ನಿರ್ಮಲ ಸಮಯ; ಅಲ್ಲಿ ಶಬ್ದಗಳನ್ನು ನೀ ಶಬ್ದವೇ; ಅರ್ಥಸ್ಫೋಟ ಅರ್ಥ ಸ್ಫೋಟವಾಗಬೇಕು ಎನ್ನುವ ಆತುರವೂ ಅಲ್ಲಲ್ಲಿ! ಆತುರ ಪುರಪ್ರವೇಶ ಪಡೆಯುವುದು ತುಂಬಾ ಸಮಯದ ಬಳಿಕ. ಹಾಗಾದಾಗ ನಮಗೆ ಕಾಲದ ಹೊಸತನ ತಿಳಿಯುವುದೇ ಇಲ್ಲ! ನಿಜ ಹೇಳಬೇಕೆಂದರೆ ಕಾಲದ ಹೊಸತನ ತಿಳಿಯಲು ನಾವು ಮತ್ತೆ ಮತ್ತೆ ಮಗುವಾಗಲೇ ಬೇಕು! ಕೂಸು ಕೂಸಾಗುತ್ತಲೆ ಕಳೆಗಟ್ಟುವ ಕ್ಷಣದಲ್ಲಿ ಜೀವನ ಜೀವ ಪಡೆಯುತ್ತದೆ. ಕಾಲ ಸರಿದರೂ ಎದೆಯೊಳಗೆ ಕೂಸು ಕೇಕೆ ಹಾಕಿ ನಗುತ್ತಲೇ ಇರಬೇಕು!
ಪ್ರೀತಿಯಲ್ಲದೆ ಮತ್ತೇನು ಬೇಕು?
ಬರಲಿರುವ ಕೂಸಿಗೆ ಈಗಲೇ ಅದೂ, ಇದೂ ಕೂಡಿಡುವ ಅಗತ್ಯವಿದೆಯೇ? ಕೂಸಿಗೆ ನಮ್ಮಿಂದ ಪ್ರೀತಿಯಲ್ಲದೇ ಇನ್ನೇನು ಬೇಕು? ಕಾಲ ನಮ್ಮಿಂದ ಬಯಸುವುದೂ, ಪ್ರೀತಿಯನ್ನೇ! ಕಾಲ ಪ್ರೀತಿ ಇಲ್ಲವಾದರೆ ಕಾಲಭೀತಿ ಶುರುವಾಗುತ್ತದೆ ಭೀತಿ ಎಲ್ಲವನ್ನೂ ನಮ್ಮಿಂದ ಕಸಿದುಕೊಂಡರೆ ಪ್ರೀತಿ ಎಲ್ಲವನ್ನೂ ನೀಡುತ್ತದೆ. ಇಷ್ಟೇ ಅಲ್ಲ, ಮಗುವಿನ ಮನಸ್ಸನ್ನು ದೊಡ್ಡವರು ಅಥವಾ ಹಾಗಂತ ತಿಳಿದವರು ಕೆಡಿಸಬಾರದು. ಬೆಳೆದು ನಿಂತ ನಾವಂತೂ ಮುಗ್ಧತೆ ಕಳೆದುಕೊಂಡಿದ್ದೇವೆ. ಆದರೆ ಕೂಸಿನ ಮುಗ್ಧತೆಯನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಮಾಡಿದರೆ ಹೇಗೆ? ನಾವು ಕಾಲಭೀತಿಯಲ್ಲಿದ್ದೇವೆ ನಿಜ! ಆದರೆ ಮಗುವಿನ ಸಹಜ ನಿರ್ಭೀತ ಸ್ಥಿತಿಯನ್ನು ಅಪಹರಿಸಿ, ಅದರ ಮನಸ್ಸಿನಲ್ಲೂ ಭಯ ಹುಟ್ಟುವ ಹಾಗೆ ಮಾಡಿದರೆ ಇಡೀ ಕುಟುಂಬವೆ ಕಾಲಭೀತಿಗೆ ತುತ್ತಾದೀತು!
= ಎಚ್. ರಮೇಶ ಕೆದಿಲಾಯ