ಜುಂಪಾ ಲಾಹಿರಿ, ಭಾರತೀಯ ಇಂಗ್ಲಿಷ್ ಲೇಖಕಿ. ಇವರ ಕಥೆಗಳು ಅತ್ಯಂತ ಸೂಕ್ಷ್ಮ ಸಂವೇದನೆಯ, ಆಧುನಿಕ ಮನಸ್ಸಿನ ನಿರೂಪಣೆಗಳು ಎಂದು ವಿಮರ್ಶಕರ ಹಾಗೂ ಓದುಗರ ಮೆಚ್ಚುಗೆ ಪಡೆದಿವೆ. ತಮ್ಮ ಬರಹಗಾರಿಕೆ ಬಗ್ಗೆ ಆಕೆ ಬರೆದುಕೊಂಡದ್ದು ಹೀಗೆ:
ಒಂದು ವಾಕ್ಯವನ್ನು ಕಟ್ಟುವುದೆಂದರೆ ಪೋಲರಾಯ್ಡ್ ಕ್ಯಾಮೆರಾ ಸ್ನಾಪ್ ತೆಗೆದಂತೆ. ಬಟನ್ ಒತ್ತಿ, ಅದೇನೋ ಹೊರಬರುತ್ತದೆಂದು ಕಾಯುವುದು. ಬರೆಯುವುದೆಂದರೆ ದಾಖಲಿಸುವುದು, ಹಾಗೇ ಅದರ ಬೆಳವಣಿಗೆಯನ್ನು ಗಮನಿಸುವುದು. ಎಲ್ಲ ವಾಕ್ಯಗಳೂ ಕಾದಂಬರಿ ಅಥವಾ ಕಥೆಯಾಗಿ ಪರಿಣಮಿಸುವುದಿಲ್ಲ. ಆದರೆ ಕಾದಂಬರಿ ಅಥವಾ ಕಥೆಯಲ್ಲಿ ವಾಕ್ಯಗಳು ಬಿಟ್ಟರೆ ಬೇರೇನೂ ಇರುವುದಿಲ್ಲ. ವಾಕ್ಯಗಳೇ ಇಟ್ಟಿಗೆ, ಹಾಗೇ ಅವನ್ನು ಬಂಧಿಸುವ ಲೇಪ; ಅದು ಯಂತ್ರವೂ, ಹಾಗೇ ಅದರ ಇಂಧನವೂ. ಚೀಲವೂ ಅದರ ಹೊಲಿಗೆಯೂ. ಏಕಕಾಲಕ್ಕೆ ಸಾಮಾಜಿಕವೂ ಒಂಟಿಯೂ ಆಗಿರುವುದು ಅದರ ಸ್ವಭಾವ. ವಾಕ್ಯಗಳು ಧ್ವನಿಯನ್ನು ನಿರ್ಧರಿಸುತ್ತವೆ, ಹಾಗೇ ಗತಿಯನ್ನೂ. ಒಂದರ ಮುಂದೆ ಇನ್ನೊಂದು ದಾರಿಯನ್ನು ಕೊರೆಯುತ್ತ ಸಾಗುತ್ತದೆ.
ನನ್ನ ರಚನೆ ಒಂದರ ನಂತರ ಒಂದು ವಾಕ್ಯವನ್ನು ಕಟ್ಟುತ್ತ ಸಾಗುವಂಥದು. ತಾಳ್ಮೆಯಿಂದ ಕಾಯುವ ಮೊದಲ ಹಂತದ (ತಾಳ್ಮೆ ಇರಲ್ಲ ಬಿಡಿ) ನಂತರ ಅವುಗಳನ್ನು ಪತ್ತೆ ಹಚ್ಚುವ, ಸೆಳೆದು ತರುವ ಕೆಲಸ. ನಂತರ ಅವು ಮೆದುಳಿನಲ್ಲಿ ಪೂರ್ಣ ರೂಪ ತಳೆದು ಬರಲಾರಂಭಿಸುತ್ತವೆ. ನಾನು ನಿದ್ದೆ ಹೋಗುತ್ತಿರುವಂತೆ, ಅವು ಕೇಳಲಾರಂಭಿಸುತ್ತವೆ. ಅವು ಯಾರಿಂದಲೋ ಹೇಳಲ್ಪಟ್ಟದ್ದು, ಯಾರಿಂದ ಎಂಬುದನ್ನರಿಯೆ. ಅವುಗಳ ಮೂಲವು ಸ್ವತಂತ್ರವೆಂದು, ನಿಗೂಢವೆಂದು ಗೊತ್ತಿದ್ದರೂ, ಅವು ನನ್ನದೇ ಎಂಬುದು ನನಗೆ ಗೊತ್ತು. ಆಗ ಲೈಟ್ ಹಾಕಿಕೊಂಡು ಬರೆಯಲಾರಂಭಿಸುತ್ತೇನೆ. ಹಾಳೆಯ ಮೇಲೆ ಒಂದೆರಡು ಗೀಚುಗಳು. ಬೆಳಗ್ಗೆ ಅವನ್ನು ನೀಟಾದ ಪ್ರತಿ ಮಾಡುವ ಕೆಲಸ. ಕಿಟಕಿಯಿಂದ ಹೊರಗೆ ನೋಡುತ್ತ, ತರಕಾರಿ ಕತ್ತರಿಸುತ್ತ, ಸಬ್ವೇ ಪ್ಲಾಟ್ಫಾರಂನಲ್ಲಿ ಕಾಯುತ್ತ ವಾಕ್ಯಗಳನ್ನು ಕೇಳಿಸಿಕೊಳ್ಳುತ್ತೇನೆ. ಅವು ಅಸ್ತವ್ಯಸ್ತವಾಗಿರುವ, ಯಾವ ತರ್ಕಬದ್ಧತೆಯೂ ಇಲ್ಲದ ಜಿಗ್ಸಾ ಪಝಲ್ಗಳು. ಅವು ವಸ್ತುವೊಂದರ ಬಿಡಿಭಾಗಗಳು ಎಂಬುದು ನನಗೆ ಹೊಳೆಯುತ್ತದೆ. <
- ಹರೀಶ್ ಕೇರ
harishkera@gmail.com