ಮಕರಂದ/ದೋಣಿ

ಬನ್ನಿ ಗ್ರಾಮಾಫೋನ್ ಹಚ್ಚೋಣ...

ಮೈ ಮನಸ್ಸಿಗೂ, ಹೊರಗಿನ ಹಸಿರಿಗೂ, ಮೈಯಲ್ಲೆಲ್ಲಾ ನವಿಲುಗರಿಯಿಟ್ಟು ಕಚಕುಳಿ...

ಬನ್ನಿ ಗ್ರಾಮಾಫೋನ್  ಹಚ್ಚೋಣ...
Published On :

ಮೈ ಮನಸ್ಸಿಗೂ, ಹೊರಗಿನ ಹಸಿರಿಗೂ, ಮೈಯಲ್ಲೆಲ್ಲಾ ನವಿಲುಗರಿಯಿಟ್ಟು ಕಚಕುಳಿ ಕೊಡುವ ಸಾಹಿತ್ಯಕ್ಕೂ ಅಕ್ಕ- ತಂಗಿಯರ ಸಾಂಗತ್ಯ. ಪ್ರಕೃತಿ ಸುಮ್ಮನಿದ್ದರೆ ಸಾಕು, ಕವಿ ಕವಿತೆ ಕಟ್ಟುತ್ತಾನೆ. ಮಳೆ ಬಿಸೋ ಅನ್ನುತ್ತಿದ್ದರೆ ಸಾಕು, ಅವನ ಕಲ್ಪನೆಯ ಮೂಸೆಯೊಳಗಿಂದ ಮತ್ತೊಂದಿಷ್ಟು ಮಳೆ ಬೀಸಿ ಎದೆಯ ಗದ್ದೆಯಲ್ಲಿ ಅಬ್ಬಬ್ಬಾ ಅನ್ನೋ ಫಸಲು. ಅವನದೇ ಕವಿತೆ ಮುಂದೆ ರೆಕ್ಕೆಬಿಚ್ಚಿ ಹಾಡುಗಾರನ ಗಂಟಲಲ್ಲಿ ನವಿಲಾಗುತ್ತದೆ. ಕೇಳುವವರ ಎದೆಗೂಡಲ್ಲಿ ಬೆಳದಿಂಗಳಾಗುತ್ತದೆ. ಅವನು ಸೃಷ್ಟಿಸಿದ ಭಾವಗೀತೆಗಳೇ ಸಾಕು, ನಮ್ಮ ಚಿಂತಾಮಣಿಯರ ಕೆನ್ನೆಗಳಲ್ಲಿ ಮಲ್ಲಿಗೆ ಸೃಷ್ಟಿಸುವುದಕ್ಕೆ, ಚರಂಡಿ ನೀರಿನಲ್ಲಿ ಬಿದ್ದಂತಾದ ಮನಕ್ಕೆ ಸ್ಫೂರ್ತಿಯ ಲಾಂಗೂಲ ಕೊಡುವುದಕ್ಕೆ. ಒಂದು ಭಾವಗೀತೆ ನಿಮ್ಮನ್ನು ಕಾಫೀ ಡೇಯಲ್ಲಿ ಮಾತಾಡುವ ಹುಡುಗಿಗಿಂತಲೂ ಚೆಂದವಾಗಿ ಮಾತಾಡಿಸುತ್ತೆ, 'ಹಾಯ್‌' ಅಂತ ಹಾಯಿದೋಣಿ ಬೀಸುತ್ತಾ, 'ಬಾಯ್‌' ಅಂತ ಬಾಯ್ ಬಾಯ್ಬಿಡುವ ಹುಡುಗಿ ನಿಮ್ಮನ್ನು ಅರ್ಥಮಾಡಿಕೊಳ್ಳೋದು ಅಷ್ಟರಲ್ಲೇ ಇದೆ. ಆದರೆ ಭಾವಗೀತೆ ನಿಮ್ಮೊಳಗನ್ನು ಅರ್ಥಮಾಡಿಸಿಬಿಡುತ್ತೆ. ಅಲ್ಲಿನ ಸಾಲುಗಳು ನಿಮ್ಮ ಜೀವನಕ್ಕೆ ಹತ್ತಿರಾಗುತ್ತವೆ. ಅಲ್ಲಿನ ಮನಿಸು, ಸಂಭ್ರಮಗಳೂ ನಿಮ್ಮವೇ. ಅಲ್ಲಿನ ಪ್ರೀತಿ, ಹತಾಶೆ, ಮಧುರ ನಿರಾಶೆ, ನಿಮ್ಮದೇ ಮನೆ ಫ್ರಿಡ್ಜಿನ ಐಸ್‌ಕ್ರೀಮಿನ ಹಾಗೆ.
ಮೋಡ ಮತ್ತು ಮಳೆಯೇ ಭಾವಗೀತೆ. ಇದು ಸಾಮಾನ್ಯನ ಹಾಡು, ನಿಮ್ಮೊಳಗಿನ ಅಮ್ಮ, ಹೆಂಡತಿ, ಅಕ್ಕಾ ಎಲ್ಲವೂ. 'ಅಕ್ಕಾ, ನಿನ್ಗೆ ಭಾವ ಅಂದ್ರೆ ಹೇಗೆ ಕಣೇ?' ಅಂತ ತಮ್ಮ ಮದುವೆಯ ನಂತರದ ದಿನಗಳಲ್ಲಿ ಕೇಳಿದಾಗ ಆ ಅಕ್ಕಾ, 'ನನ್ಗೆ ಭಾವ ಅಂದ್ರೆ ಭಾವಗೀತೆ ಕಣೋ ಹುಡುಗ' ಅನ್ನುವಾಗ, ತಮ್ಮನಿಗೆ ಅಕ್ಕನ ಮಾತೇ ಮಂಡೆಗಿಳಿಯಲಿಲ್ಲ. ಹ್ಞಾಂ, ಭಾವಗೀತೆ ಅಂದ್ರೆ ಭಾವ ಹಾಡಿದ ಗೀತೆ ಅಲ್ಲ ಮಾರಾರ್ರೆ. ಅದು ನಮ್ಮ ಅಂತರ್ ಮಿರರ್. ಅಂದರೆ, ನಮ್ಮ ಭಾವಕ್ಕೆ ಕನ್ನಡಿ ಹಿಡಿಯೋ ಹಾಡು. ಹಕ್ಕಿಯ ಹಾಡಿಗೆ ಹೂವು ತಲೆದೂಗುತ್ತದೆ, ಚೆಂದದ ಭಾವಗೀತೆಗೆ ನಮ್ಮ ತನುಮನ ಭರತನಾಟ್ಯವಾಗುವುದು ಸುಳ್ಳಲ್ಲ.

ಆಸೆಯ ಭಾವ...
ಕಾಡುವ ಪ್ರೇಮಭಾವಗೀತೆಗಳು ಅದೆಷ್ಟೋ? ಪ್ರೀತಿಯ ಪೆಪ್ಪರ್‌ಮಿಂಟು ಚಪ್ಪರಿಸೋ ಮಂದಿಗೆ, 'ಪ್ರೀತಿಯಿಂದ ದೂರನಾದೆ ಏಕೆ ಆತ್ಮನೇ?' ಎನ್ನುವ ಪ್ರಿಯತಮರಿಗೆ, ಕೆಎಸ್‌ನ, ಬೇಂದ್ರಿ ಅಜ್ಜನ ಭಾವಗೀತೆಗಳು ಏನೇನೇನೋ ಮಾಡಿಸುತ್ತೆ. ಯುವಕನೊಬ್ಬ, 'ನನ್ನವಳು ನನ್ನೆದೆಯ ಹೊನ್ನಾಡನಾಳುವವಳು' ಎಂದರೆ ಅದು ಕೆಎಸ್‌ನ ದೆಸೆಯಿಂದ. 'ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ನಿನ್ನೊಳಿದೆ ನನ್ನ ಮನಸ್ಸು...' ಅಂತ ಹಾಡಿದರೆ ಅದಕ್ಕೂ ಅವರದೇ ಗಾಳಿ. 'ಮುನಿಸು ತರವೇ ಮುಗುದೇ, ಹಿತವಾಗಿ ನಗಲೂ ಬಾರದೇ?' ಅಂದಾಗಲೆಲ್ಲಾ ನೆನಪಾಗುವ ಸುಬ್ರಾಯ ಚೊಕ್ಕಾಡಿ. 'ಬಾ ಚಕೋರಿ ಚಂದ್ರ ಮಂಚಕೇ...' ಎನ್ನುವಾಗ ಕಾಡುವ ಕುವೆಂಪು. ಅಂಗೈ ಅಗಲದಲ್ಲಿ ಜೋಗ ತೋರಿಸುವ ನಿತ್ಯೋತ್ಸವದ ಕವಿ ನಿಸಾರ್ ಅಹಮದ್. 'ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ' ಅಂತ ಹಾಡುವ ಚನ್ನವೀರ ಕಣವಿ. ಇವರು ಬರೆದ ಹಾಡೆಲ್ಲಾ ಅದೆಷ್ಟು ಕನ್ನಡಿಗರ ಎದೆಗಿಳಿಯಲಿಲ್ಲ ಹೇಳಿ? ಬರೆದದ್ದು ಯಾರು ಅನ್ನೋದು ಗೊತ್ತಿಲ್ಲದೆ ಹೋದರೂ ಕೆಲವು ಗೀತೆಗಳು ನಮ್ಮೊಳಗೆ ಗೂಡು ಕಟ್ಟುತ್ತವೆ.
ಆಮ್ಲೇಟು ಶಂಭುನ ಗೂಡಂಗಡಿಯಲ್ಲಿ ಮಧ್ಯಾಹ್ನದ ಮಂಜರಿಗೆ ರೇಡಿಯೋ ಹೀಗೆ ಕೂಗುತ್ತಿತ್ತು...

'ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ
ಈಗ ಯಾಕೆ ಜ್ವಲಿಸುತಿಹುದೂ ಏನೋ ಶಂಕೆ ಭೀತಿ...
ಜೇನು ಸುರಿಯುತ್ತಿತ್ತು ನಿನ್ನ ದನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ'.

ಶಂಭು ನನ್ನ ನೋಡಿ ಕಣ್ಣರಳಿಸಿ ನಕ್ಕ. ಆಗಲೇ ಮತ್ತೊಂದು ಹಾಡು ನುಗ್ಗುತ್ತಿತ್ತು ರೇಡಿಯೋದೊಳಗಾ...
'ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ
ಏಸೊಂದು ನಗಿಯಿತ್ತ ಏರಿಕಿ ನಗಿಯಿತ್ತ
ಆ ನಗಿ ಹೋಗೇತ ಈಗೆತ್ತಾ?'
ಈ ಇಬ್ಬರೂ ಕವಿಗಳಿಗೂ ಕಾಡೋದು ಹಿಂದಿದ್ದ ಅವಳ ಪ್ರೀತಿ ಇಂದೇಕೆ ಇಲ್ಲ ಅನ್ನೋ ನಿರಾಶೆ. ಹಿಂದೆ 'ಟಿನ್,  ಟಿನ್, ಟಿ.. ಟಿನ್‌' ಅಂತ ಬ್ರಿಟಾನಿಯಾ ಗುಡ್ಡೆಯ ಹಾಗಿರುತ್ತಿದ್ದವಳು ಈಗ ಕ್ರ್ಯಾಕ್‌ಜಾಕ್ ಆಗಿದ್ದು ಯಾಕೆ ಅನ್ನೋ ಚಿಂತೆ. ಇದು ಬರೀ ಅವರ ದುಗುಡವಲ್ಲ. ಹುಡುಗೀರ ಹಿಂದೆ ಕೆಂಜಿರುವೆ ಹಾಗೆ ಸುತ್ತುವ ಹುಡುಗರ ಅವಸ್ಥೆ ಕೂಡ. ಪ್ರೇಮಿಯೊಬ್ಬನ ತಳಮಳವನ್ನೂ ಹೀರಿ ಬರೆಯೋ ಕವಿಗೊಂದು ಸೆಲ್ಯೂಟು ಬೇಡವಾ? ಪ್ರೇಮಕವಿ ಬಿ.ಆರ್. ಲಕ್ಷ್ಮಣರಾವ್, 'ಬಾ ಮಳೆಯೇ ಬಾ... ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ' ಅಂತ ಮಳೆರಾಯನಿಗೆ ಅಪೀಲು ಮಾಡುವ ಹಾಡು, 'ಹೇಳಿ ಹೋಗು ಕಾರಣ ಹೊರಡುವ ಮೊದಲು...' ಅಂತ ಅವಳನ್ನು ಪೀಡಿಸೋ ಹಾಡು, ಇವೆಲ್ಲಾ ಈ ಮಳೆಗಾಲಕ್ಕೆ ಕಿವಿಗೆ ಹೋಳಿಗೆ ಪಾಯಸ. ಇಂಥ ಪ್ರೇಮ ಭಾವಗೀತೆಗಳು ನಮಗೇನೇ ಹೇಳಿರೋ ಹಾಗೆ, ನಮ್ಮ ಜೊತೆಗೇನೇ ಸರಸಕ್ಕಿಳಿಯುವಂತೆ ಕಾಡುತ್ತವೆ ಅಲ್ಲವಾ? ಆಸೆಯ ಇಡ್ಲಿಯನ್ನೂ, ನಿರಾಶೆಯ ಚಟ್ನಿಯನ್ನು ಒಟ್ಟಿಗೆ ಕಟ್ಟಿ ಕೊಡುವ ಈ ಭಾವಗೀತೆ ಮೆಲ್ಲುವ ಸುಖ ನಿಮ್ಮದಾಗಲಿ ಅಷ್ಟೆ.

ಏನೋ ಒಂಥರಾ ಭಾವ
ಭಾವಗೀತೆ ಎಂದರೆ ಬರೀ ಪ್ರೇಮಗೀತೆಗಳಲ್ಲ. ತವರೂರ ಸುಖ, ಹುಡುಗಿಯೊಬ್ಬಳ ಮೊದಲ ರಾತ್ರಿ, ಹನಿಯಾಗಿ ಇಳಿಯುವ ಜೀವನದ ಮಾಧುರ್ಯ. ನಿರಾಶೆ, ಪೇಲವತೆ, ಹತಾಶೆ ಇರುವ ಭಾವಗೀತೆಗೆ ಅಭಾವ ಕನ್ನಡ ಸಾಹಿತ್ಯದಲ್ಲಿಲ್ಲ. ಇಂಥ ಭಾವ ಕೇಳಿದಾಗ ತವರೂರು ನೆನಪು ಮಾಡಿಕೊಳ್ಳುತ್ತಾ ಕಣ್ಣಂಚಿನ ನೀರು ಒರೆಸಿಕೊಳ್ಳುವವರು ಆಗಲೂ ಇದ್ದರು. ಈಗಲೂ ಇದ್ದೇ ಇದ್ದಾರೆ. 'ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ...' ಅಂತ ಜೀವನದ ಕೆಲ ಘಳಿಗೆಗಳಲ್ಲಿ ಅಡಿಗರ ಗೀತೆಗಳನ್ನು ಚೆಂದವಾಗಿಯೇ ಹಾಡುವವರು ಇದ್ದಾರೆ. 'ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು...' ಈ ಗೀತೆ ಬಚ್ಚಲುಕೋಣೆಯಲ್ಲಾದರೂ ಉಲಿಯುವವರು ಎಷ್ಟು ಮನೆಗಳಲ್ಲಿಲ್ಲ.
'ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು, ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು...'
- ಹೀಗೆ ಸಾಗುವ ಗೀತೆ ಅಳಿಯ ಮಾವನ ಮನೆಗ ಬಂದಾಗಿನ ಸಂಭ್ರಮ, ಗೋಳಾಟ, ಪುಳಕ ಎಲ್ಲವನ್ನೂ ಹೇಳುತ್ತಾ... ಎಲ್ಲೆಲ್ಲೋ ನಮ್ಮನ್ನು ಸುತ್ತಿಸುತ್ತಾ, ಮರಳಿ ವಾಸ್ತವಕ್ಕೆ ಕರಕೊಂಡು ಬರುತ್ತದೆ. ಹ್ಞಾಂ, ಹುಡುಗಿಯೊಬ್ಬಳ ಮತ್ತೊಂದು ಹಾಡು...
'ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ...
ಚಿಂತೆ ಬಿಡಿ ಹೂವಾ ಮುಡಿದಂತೆ...' (ಕೆಎಸ್‌ನ)
ಹೊಸತರಲ್ಲಿ ಮದುವೆಯಾದ ಕೇದಿಗೆಯಂಥ ಹುಡುಗಿಗೆ ಈ ಸಾಲು ಇಷ್ಟವಾದಿತಲ್ಲಾ? ಜೀವನದ ಅನುಪಮ ಸಂಬಂಧಗಳನ್ನು ಕಟ್ಟಿಕೊಡೋ ಹಾಡಿನ ಅಂತರಾಳ ಸರಿಯಾಗಿ ಅರಿತರೆ ಕಡಿದ ಸಂಬಂಧಗಳು ಮತ್ತೆ ಚಿಗುರುವುದಕ್ಕೇನೂ ಹೊತ್ತಿಲ್ಲ.

ಎದೆಗೆ ಗಂಗಾ ಪಾನ
ಈಗ ಸಣ್ಣಗೆ ಮಳೆ ಬರೋವಾಗ ಸುಮ್ಮನೆ ಭಾವಗೀತೆಗಳನ್ನು ಕಿವಿ ತುಂಬಿಸಿಬಿಡಿ. ಯಾಕೆಂದರೆ ಮಳೆಗೂ, ಸಾಹಿತ್ಯಕ್ಕೂ, ರಾಗಕ್ಕೂ ಏನೋ ಫೆವಿಕಲಿನಂಥ ನಂಟು. ಮನಸ್ಸು ಚಿಂತೆಗೆ ಬಿದ್ದಾಗಲೆಲ್ಲಾ, ನಿಮ್ಮ ಕನಸುಗಳು ಹುಳ ತಿಂದು ಹೋಗಿಬಿಟ್ಟಿವೆ ಅಂತೆನ್ನಿಸುವಾಗಲೆಲ್ಲಾ, ದುಃಖ ಬ್ರಹ್ಮರಾಕ್ಷಸನಂತೆ ಕಾಡುವಾಗಲೆಲ್ಲಾ, ಜಿಗುಪ್ಸೆ ಜೀಕಿದಾಗಲೆಲ್ಲಾ, ಸಂತಸದ ಹೊಟ್ಟೆ ತುಂಬಿಬಂದಾಗಲೆಲ್ಲಾ ಸುಮ್ಮನೆ ಒಂದು ಚೆಂದದ ಭಾವಗೀತೆಯನ್ನು ಕೇಳಿಬಿಡಿ. ಮನಸ್ಸು ಪಾರಿವಾಳದಂತಾಗದಿದ್ದರೆ ಹೇಳಿ... ಕವಿ ಎಸ್.ವಿ. ಪರಮೇಶ್ವರ ಭಟ್ಟರ ಚೆಂದದ ಹಾಡು ಹಿಂದೆ ಒಂದಲ್ಲಾ ಒಂದು ಮನೆಯಲ್ಲಿ ಕೇಳುತ್ತಲೇ ಇತ್ತು; 'ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು... ಗರಿಮುದುರಿ ಮಲಗಿದ್ದ ಹಕ್ಕಿಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತ್ತಿತ್ತು...'.
ಕೇಳ್ತೀರಲ್ವಾ?

ಅಭಿಜ್ಞಾ ಗುರ್ತಾ ಇದ್ಯಾ?
ಅಭಿಜ್ಞಾ ಅಂದ್ರೆ ಕಾಳಿದಾಸನ ಅಭಿಜ್ಞಾನ ಶಾಕುಂತಲ ಅಂತ ತಿಳಕೊಳ್ಳಬೇಡಿ. ಇದೊಂದು ಕನ್ನಡ ಭಾವಗೀತೆಗಳ ಪಾಯಸ ಬಡಿಸುವ ತಾಣ. ಕೆಎಸ್‌ನ, ಕುವೆಂಪು, ಬೇಂದ್ರೆ, ಪುತಿನ, ಅಡಿಗ- ಮುಂತಾದ ಎಲ್ಲಾ ಕನ್ನಡ ಕವಿಗಳ ಭಾವಗೀತೆಗಳ ಬಟ್ಟಲು ಅಭಿಜ್ಞಾ. ಬೆಂಗಳೂರಿನ ಹುಡುಗ ಕಿರಣ್ ಈ ಜಾಲತಾಣದ ಸೃಷ್ಟಿಕರ್ತ. ಭಾವಗಳ ಹಂಬಲವುಳ್ಳವರು ಇಲ್ಲಿ ಕಿವಿ ತೆರೆದಿಟ್ಟುಕೊಂಡರೆ ಹಾಡುಗಳು ಮೊಳೆಯುತ್ತವೆ. ಅಷ್ಟೆ ಅಲ್ಲ, ಹಾಡಿನ ಸಾಹಿತ್ಯವೂ ಸಿಕ್ಕುತ್ತದೆ ಇಲ್ಲಿ. ಸುಲಭವಾಗಿ ಮೊಬೈಲ್, ಲ್ಯಾಪ್‌ಟಾಪ್‌ಗೆ ಭಟ್ಟಿಯಿಳಿಸಲೂಬಹುದು! ಹಾಗಾದರೆ ತಡವೇಕೆ http://abhijnaa.wordpress.com ಗೆ ಭೇಟಿ ನೀಡಿ.

- ಪ್ರಸಾದ್ ಶೆಣೈ ಆರ್.ಕೆ.
prasad.shenoy93@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.