

ಅವನು ಹಾಗೆನೇ.. ಹೌದು, ಅವನು ಯಾವಾಗಲೂ ಹಾಗೇನೇ, ನನಗಾಗಿಯಾದರೂ ಚೂರು ಬದಲಾವಣೆ ಆಗಲು ಮನಸ್ಸೇ ಮಾಡುತ್ತಿಲ್ಲ. ಯಾಕಾಗಿ ಇಷ್ಟು ಕಾಡಿಸ್ತಾನೋ ನನಗಂತೂ ಅರ್ಥವಾಗುತ್ತಿಲ್ಲ. ಆದ್ರೂ ನಾನಂದ್ರೆ ಅವನಿಗೆ ಇಷ್ಟ, ಆತ್ಮೀಯತೆ, ಪ್ರೀತಿ, ಎಲ್ಲವೂ....
ಒಂದರೆಘಳಿಗೆ ನಾನೀಚೆ ಆಚೆ ಕದಲಿದರೂ ತಬ್ಬಿಬ್ಬಾಗಿ ಬಿಡುತ್ತಾನೆ. ಮೊಬೈಲ್ ರಿಂಗಣಿಸುತ್ತದೆ. ಅವಸರದಿಂದ ಕೇಳುತ್ತಾನೆ: ಎಲ್ಲಿದ್ದಿ ಸ್ವೀಟ್ ಹಾರ್ಟ್..!
ಮನಸ್ಸಿನಲ್ಲಿ ಅವಿತು ಕುಳಿತಿದ್ದ ಮಧುರ ಕಾವ್ಯಗಳನ್ನು ಹುಚ್ಚೆಬ್ಬಿಸಿ, ಭಾವನಾ ತೀರಕ್ಕೆ ತಂದು ನಿಲ್ಲಿಸಿದವನು ಅವನೇ. ಆದರೂ, ಅದೇಕೋ ತಿಳಿಸದ ನಿರ್ಲಕ್ಷ್ಯ. ಅದು, ನಾ ಬೇಡವೆನ್ನುವ ತಿರಸ್ಕಾರವಂತೂ ಅಲ್ಲವೇ ಅಲ್ಲ.
ಅವನ ಈ ವರ್ತನೆ ಒಮ್ಮೊಮ್ಮೆ ನನ್ನೊಳಗಿನ ಅಳುಮುಂಜಿಯನ್ನು ಮುಖದ ಮೇಲೆ ತಂದು, ಒಂದಷ್ಟು ಹೊತ್ತು ಅಳಿಸಿಬಿಡುತ್ತದೆ. ಮತ್ತೆ ಮುಂದುವರೆಯುತ್ತದೆ ಅವನ ನಿರಂತರ ಪ್ರೀತಿ, ಆಲಿಂಗನ, ನಾನು ನಿನ್ನವನೇ ಎಂಬ ಮೌನ. ಒಂದಷ್ಟು ಹೊತ್ತು ಮಾತು, ಮತ್ತದೇ ಮೌನ.. ಪದೇ ಪದೇ ಕಾಡೋ ಅವನ ಮೌನ ತೀರದಲ್ಲಿ ನಾನು ಯಾವಾಗಲೂ ಒಂಟಿ.
ಈ ನಡುವೆ ಸಂಪೂರ್ಣ ಮಾತೆಲ್ಲವನ್ನೂ ಮುರಿದು ಕೂತಿದ್ದಾನೆ. ಮೊಬೈಲ್ ಪರದೆಯ ಮೇಲೆ ಅವನ ನಾಮಾಂಕಿತವಿಲ್ಲ, ಎಸ್‌ಎಂಎಸ್ ಅಂತೂ ಇಲ್ಲವೇ ಇಲ್ಲ. ಯಾವಾಗಲೋ ಒಮ್ಮೊಮ್ಮೆ ಯಾವುದೋ ಸಂಬಂಧವಿ ರದ ವಿಷಯಕ್ಕೆ ಗತ್ತಿನಲ್ಲಿ ಮಾತಾಡಿ ಮತ್ತೆ ಕಾಲ್ ಕಟ್ ಮಾಡುವ ಅಭ್ಯಾಸಕ್ಕೆ ಶುರುಮಾಡಿದ್ದಾನೆ.
ಆದರೂ ನೀ ನನ್ನವಳು ಎನ್ನುವ ಭಾವನೆಯನ್ನಂತೂ ಆಗಿದ್ದಾಗೇ ನೀಡುತ್ತಲೇ ಇರುವ ಅವನ ಸೆಲ್‌ಫಿಷ್ ಪ್ರೀತಿಗೆ ನಾನು ಫಿದಾ..
ಈ ಮಧ್ಯೆ, ಅವನ ನಿರ್ಲಕ್ಷ್ಯ, ಸಿಡಿಮಿಡಿ, ಆದಷ್ಟೂ ಅವಾಯ್ಡ್ ಮಾಡುವ ಅವನ ಗುಣವನ್ನು ಕಂಡು ಮನಸ್ಸು ತಬ್ಬಿಬ್ಬುಗೊಳ್ಳುತ್ತದೆ. ಸಂಬಂಧ ಸಡಿಲವಾಗಿದೆ ಬಿಟ್ಟುಬಿಡು ಎಂಬ ಸಂದೇಶ ರವಾನಿಸುತ್ತದೆ. ಆದರೂ, ಅದರ ಹಿಂದಿಂದೆಯೇ ತೇಲಿಬರುತ್ತದೆ ಪ್ರೀತಿಯ ಗುಣಗಾನ. ಅವನು ನನ್ನವನೇ, ಹೌದು ಅವನು ಯಾವತ್ತಿಗೂ ನನ್ನವನೇ ಎಂಬ ಸುಮಧುರ ಭಾವನೆ.
ಯಾಕಿಷ್ಟು ಕಾಡುವೆ? ನಿನ್ನ ಅಂತರಂಗದಲ್ಲೇನಿದೆ? ತಿಳಿದುಕೊಳ್ಳುವ ಧಾವಂತವಿಲ್ಲದಿದ್ದರೂ, ಸಾಕೆನಿಸುವಷ್ಟು ಕಪಾಳಕ್ಕೆ ತಟ್ಟಿ, ನನ್ನ ಪ್ರೀತಿಯ ರಭಸವನ್ನು ಹೇಳುವ ಅನಿವಾರ್ಯವಂತೂ ನನಗಿದೆ. ಪ್ರೀತಿಯ ಹುಡುಗಾ, ಅರ್ಥಮಾಡಿಕೋ...
ಜೀವನದ ಪಯಣದಲ್ಲಿ ಒಂಟಿಯಾಗಿ ನಿಂತಿದ್ದ ನನ್ನಲ್ಲಿ ಪ್ರೀತಿಯ ಸೆಲೆಯನ್ನು ಭಿತ್ತಿದ ನಿನ್ನನ್ನು ಕಳೆದುಕೊಂಡು ಜೀವಿಸುವ ಮೊಂಡು ಧೈರ್ಯವಂತೂ ನನಗೀಗ ಉಳಿದಿಲ್ಲ. ಮೊದಲಾಗಿದ್ದರೇ ಕಥೆಯೇ ಬೇರೆಯಿತ್ತು. ಆದರೆ, ಈಗೀಗ ಜೀವನವೇ ಜಿಗುಪ್ಸೆಯಲ್ಲಿ ಮುಳುಗಿರುವಾಗ ನಿನ್ನೀ ವರ್ತನೆ ಸಾಕು ಬೇಕೆನಿಸಿದೆ.
ಆದರೂ ಕೆಲ ಮಾತುಗಳನ್ನು ಹೇಳುವ ಆಸೆಯಿಂದ ನಿನಗೆ ಈ ಪತ್ರ. ನನ್ನೆದೆಯಿಂದ ನಿನ್ನೆದೆಗೆ ಹರಿವ ಭಾವನೆಗಳ ಹೊಳೆಯಲ್ಲಿ ಇದನ್ನು ತೇಲಿಬಿಟ್ಟಿದ್ದೇನೆ, ನಾನು ಹೇಳದೇ ಉಳಿದ ಮಾತುಗಳ, ಪ್ರತಿ ಹೆಜ್ಜೆ ಸಪ್ಪಳದಲ್ಲಿ ನಿನಗೆ ಕೊಡಬೇಕಿರುವ ಸಾವಿರ ಮುತ್ತುಗಳ, ಬೆಚ್ಚನೆಯ ಅಪ್ಪುಗೆಯ, ನಿಟ್ಟುಸಿರು ಚೆಲ್ಲುತ್ತಾ.. ನೀ ಸ್ವೀಕರಿಸುತ್ತೀ ಅನ್ನುವ ಆಶಾಭಾವದಲ್ಲಿಯೇ..
- ಭಾಗ್ಯಗೌಡ