'ಅಯ್ಯೋ, ಅದೇನೋ ಸುಟ್ಟ ವಾಸನೆ, ಅಡಿಗೆ ಮನೆಯಿಂದ' ಅಪ್ಪನ ಉದ್ಗಾರ. ಅದು ನಮ್ಮ ಮನೆಯಲ್ಲಿ ಮಾಮೂಲು. 'ಬನ್ನಿ, ನಾವಿಬ್ಬರೂ ಹೋಟೆಲ್‌ಗೆ ಹೋಗೋಣ. ಅದೇ.. ಹೊಸದಾಗಿ ಶುರು ಆಗಿದ್ಯಲ್ಲ, ಮೇನ್ ರೋಡ್ನಲ್ಲಿ...' ನಾನು ಹೇಳಿದೆ. ಅಮ್ಮ ಹೊಸ ರುಚಿಯ ಪ್ರಯೋಗ ಮಾಡಿದಾಗ ಮನೆಯವರಿಗೆಲ್ಲಾ ಸುಗ್ಗಿ. ಬೇರೆ ಬೇರೆ ಹೋಟೆಲ್‌ಗಳ ದರ್ಶನ ಭಾಗ್ಯಕ್ಕೆ ಆಗ ಅವಕಾಶ...
ಹೋಟೆಲ್ ತಲುಪಿದಾಗ ವಿಪರೀತ ರಶ್ ಇತ್ತು. ಸುಂದರಿಯೊಬ್ಬಳು ಚಿಕ್ಕದೊಂದು ಗುಲಾಬಿಯನ್ನು ಅಪ್ಪನಿಗೆ ನೀಡಿ ಹೇಳಿದಳು, 'ಇಂದು ತಂದೆಯವರ ದಿನ. ನಿಮಗೆ ಹಾಗೂ ನಿಮ್ಮ ಮಗಳಿಗೆ ಡಿಸ್ಕೌಂಟ್ ಸಿಗುತ್ತದೆ ನಿಮ್ಮ ಬಿಲ್ಲಿನ ಮೇಲೆ'. ನಮ್ಮಿಬ್ಬರಿಗೂ ಖುಶಿಯಾಯ್ತು. ಅರ್ಧ ಘಂಟೆ ಕಾದಮೇಲೆ ಜಾಗ ಸಿಕ್ಕಿತು. ಬಿಸಿಬಿಸಿ ಬೆಣ್ಣೆ ದೋಸೆ, ಕೇಸರಿ ಬದಲು ಇನ್ನ್ಯಾವುದೋ ಬಣ್ಣದ ಸ್ವೀಟ್. ಆದರೆ ಕಾಫಿ ಚೆನ್ನಾಗಿತ್ತು. ಈಗ ಬಿಲ್ಲು ಬರುತ್ತದೆ, ಎಷ್ಟು ಕಡಿತ ಸಿಗುತ್ತದೋ ಎಂದು ಕಾಯುತ್ತಿದ್ದಾಗ ವೈಟರ್ ಬಂದು ಏಳಲು ಹೇಳಿದ. 'ತುಂಬಾ ರಶ್ ಸಾರ್, ಅಲ್ಲಿ ಗಲ್ಲಾ ಪೆಟ್ಟಿಗೆಯ ಬಳಿ ಕುಳಿತುಕೊಳ್ಳಿ. ಅಲ್ಲಿಗೇ ಬಿಲ್ಲು ತರುವೆ' ಎಂದ. ಸುಮಾರು ಹತ್ತು ನಿಮಿಷ ಕಾದ ನಂತರ ಬಂದ ಬಿಲ್ಲನ್ನು ನೋಡಿ ಎದೆ ಧಸಕ್ಕೆಂದಿತು. ಕಾರಣ, ನಮ್ಮ ಅಂದಾಜಿಗಿಂತ ಮೂರು ಪಟ್ಟು ಹೆಚ್ಚಿನ ಹಣವನ್ನು ಬಿಲ್‌ನಲ್ಲಿ ಬರೆಯಲಾಗಿತ್ತು.
'ಈವತ್ತು ತಂದೆಯರ ದಿನ, ಕಡಿತ ಎಂದು ಹೇಳಿದಿರಿ' ಎನ್ನುವುದರಲ್ಲಿ ಅದೇ ಸುಂದರಿ ಬಂದಳು. 'ತಂದಿಯವರನ್ನು ಮಕ್ಕಳು ಕರೆತರಬೇಕು ಹಾಗೂ ಅವರಿಗೆ ಸುಮಾರು ವಯಸ್ಸಾಗಿರಬೇಕು. ಮತ್ತೆ 'ಆ' ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮುಖಾಂತರವೇ ಬಿಲ್ಲನ್ನು ಕಟ್ಟಬೇಕು. ಆಗ ಮಾತ್ರ ಕಡಿತ'. ಛೇ, ನಮ್ಮ ಮಾಮೂಲು ದರ್ಶಿನಿಗೆಹೋಗಿದ್ದರೆ ಎಷ್ಟೋ ಚೆನ್ನಾಗಿತ್ತು, ಎಂದುಕೊಂಡು ಪೇಚಾಡುತ್ತಾ ದುಡ್ಡು ತೆತ್ತು ಜಾಗ ಖಾಲಿ ಮಾಡಿದೆವು.
- ಸಹನಾ ಪ್ರಸಾದ್