ಪ್ರೀತಿಯ ಪ್ರೇಮದೇವತೆ...
ಮೊದಲ ನೋಟದಲ್ಲಿಯೇ ತುಂಬಾ ಇಷ್ಟವಾಗಿಬಿಟ್ಟ ಜೋಡಿ ಆಕಾಶದೀಪಗಳುಳ್ಳ ನಿನ್ನ ಮುದ್ದು ಮುಖ ಮನದ ಗೋಡೆಯ ಮೇಲೆ ಒಲವಿನ ಫ್ರೇಮ್ ತೊಟ್ಟು ನಗುತ್ತಾ ಕುಳಿತಿದೆ. ನಿನ್ನ ನೋಡುವ ಮೊದಲು ನಿನಗಿಂತಲೂ ಹೆಚ್ಚು ಇಷ್ಟವಾದ ಹುಡುಗಿಯರು ಇದ್ದರು. ಆದರೆ ಅವರು ಯಾರೂ ಸಹ ನಿನ್ನಂತೆ ನನ್ನೆದೆಯ ಮೇಲೆ ಹೆಜ್ಜೆಯಿಟ್ಟು ಹೃದಯದ ಕೋಣೆಗೆ ಒಂದು ಭದ್ರವಾಗಿ ಕುಳಿತುಕೊಳ್ಳುವ ಧೈರ್ಯ ಮಾಡಿರಲಿಲ್ಲ.
ದೇವಲೋಕದ ಕಿನ್ನರೆಯರು, ರಂಭೆ, ಮೇನಕೆ, ಊರ್ವಶಿಯರನ್ನೆಲ್ಲ ಬರೀ ಕಥೆಯಲ್ಲಷ್ಟೇ ಓದಿದ್ದೆ. ಅವರೆಲ್ಲರ ಒಟ್ಟಂದವನ್ನು ಹೊದ್ದುಕೊಂಡು ಅಂದು ನೀನು ನನ್ನೆದುರಿಗೆ ನಿಂತಿದ್ದೆ. ಅಂದು ನೀನು ಬಸ್ಸಿಗಾಗಿ ಕಾಯತ್ತ ಬಸ್ಸ್ಟಾಪಿನಲ್ಲಿ ನಿಂತಿದ್ದೆ. ನಾನೂ ಸಹ. ಅಪ್ಪಿತಪ್ಪಿ ಒಂದು ಬಾರಿ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿಬಿಟ್ಟೆ. ಆ ಒಂದು ನೋಟದಲ್ಲೇ ನೀ ನನ್ನನ್ನು ಪರವಶನನ್ನಾಗಿ ಮಾಡಿಬಿಟ್ಟೆ. ನೀನು ನಿಂತಿದ್ದ ಅಷ್ಟು ಹೊತ್ತೂ ನಾನು ಮೈ ಮರೆತು ನಿನ್ನನ್ನೆ ನೋಡುತ್ತಿದ್ದೆ. ಆಗಾಗ ನೀನು ಸಹ ನನ್ನತ್ತ ಕಿರುಗಣ್ಣಿನಲ್ಲಿ ನೋಡುತ್ತ, ನೋಡಿಯೂ ನೋಡದವಳಂತೆ ನಟಿಸುತ್ತಿದ್ದೆ. ನೀನು ಬಸ್ಸು ಹತ್ತಿ ಕುಳಿತಾಗಲೂ ಮುಂಗುರುಳು ಮುಚ್ಚಿದ್ದ ನಿನ್ನ ಅರ್ಧ ಮುಖ ಪದೇ ಪದೇ ನಿನ್ನೆಡೆಗೆ ನೋಡುವಂತೆ ಮಾಡುತ್ತಿತ್ತು. ಆ ಕ್ಷಣ ನನ್ನ ಮನಸು, ನಿನ್ನ ಮುಖವನ್ನು ಅರ್ಧ ಮೋಡ ಮುಚ್ಚಿದ ಚಂದಿರನಿಗೆ ಹೋಲಿಕೆ ಮಾಡಿ ಖುಷಿ ಪಟ್ಟಿತ್ತು.
ನೀ ಕುಳಿತ ಬಸ್ಸು ಮುಂದೆ ಹೋದಾಗಲೂ ಅದೆಷ್ಟೋ ಕ್ಷಣ ನಾನು ನಾನಾಗಿರದೆ ಬಸ್ಸು ನಿಲ್ದಾಣದ ಗದ್ದಲಗಳಿಗೆ ಕಿವುಡನಾಗಿದ್ದೆ. ನಿನ್ನ ಹೊರತು ನನ್ನ ಸುತ್ತಲು ಬೇರಾವುದೇ ಜಗತ್ತು ಇಲ್ಲವೇನೊ ಎಂಬಂತೆ ಮೈ ಮರೆತು ನಿಂತಿದ್ದೆ. ನೀ ನನ್ನ ಅಷ್ಟೊಂದು ಅತಿಯಾಗಿ ಆವರಿಸಿದ್ದೆ. ತಪ್ಪು ಮಾಡಿಬಿಟ್ಟೆ ಕಣೇ. ನೋಡಿದ ಕ್ಷಣದಲ್ಲೆ ಮೆಚ್ಚಿದ ತಪ್ಪಿಗಾಗಿ ನನ್ನ ಮನಸಿಗೆ ಪ್ರೀತಿಯ ಸೆರೆವಾಸವನ್ನ ವಿಧಿಸಿ ಹೋಗಿದ್ದೆ.
ದಯವಿಟ್ಟು ಮತ್ತೊಮ್ಮೆ ಆ ಬಸ್ ಸ್ಟಾಪಿನ ಬಳಿ ಬರಬೇಕೆಂದು ಕೇಳಿಕೊಳ್ಳುತ್ತೇನೆ. ನಿನ್ನ ಆಗಮನಕ್ಕಾಗಿ ನನ್ನ ಪುಟ್ಟ ಹೃದಯ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ.
ಅದೇ ಬಸ್ಸ್ಟಾಪಿನಲ್ಲಿ ನಿನಗಾಗಿ ಕಾಯುತ್ತಿರುವ
= ನಿನ್ನ ಪ್ರೇಮದಾಸ