ರಂಗೋಲಿ ಕಾಣೆಯಾಗಿಲ್ಲ,
ಮನೆಯೊಳಗೇ ಇದ್ದಾಳೆ;
ಅಂಗಳಕ್ಕೂ ಇಳಿದಿಲ್ಲ..!
ಬೆಳ್ಳಾನೆ ಬೆಳಗಲ್ಲಿ
ಹಂಗಿರದ ರಂಗಿನರಮನೆಯ
ಕನಸು ಕಟ್ಟುತ್ತಿದ್ದಾಳೆ;
ತಾನೇ ರಂಗೋಲಿಯಾಗಿ
ಹರವಿಕೊಂಡು ಕೋಣೆಯೊಳಗೇ
ಕಂಗೊಳಿಸುತ್ತಿದ್ದಾಳೆ..!
ನಿಂತಿದ್ದಾಳೆ
ದೂರದೂರಿನ ಸಮೀಸಮೀಪ
ಆಲಿಸುತ್ತಿದ್ದಾಳೆ
ಆಳದಾಳದ ಆಲಾಪ;
ಒಳಗೊಳಗೇ ಸಲ್ಲಾಪ,
ಸವಿಗೊಂಡಿದ್ದಾಳೆ;
ಇಹ ಪರಗಳಲ್ಲೂ
ರಂಗು ರಂಗಿನ ರಂಗವಲ್ಲಿ!
ಎಟುಕದಿದ್ದರೂ
ಕಿಟಕಿಯಾಚೆ ಕೈ ಚಾಚಿ
ಬಾಚಲೆಣಿಸುತ್ತಿದ್ದಾಳೆ,
ಸಿಗದೇ ಇರುವ
ಸಿಗಲೂ ಬಹುದಾದ
ಅದಕೆ ಇದಕೆ ಯಾವು ಯಾವುದಕೊ...
ಕಿಟಕಿ ಈಚೆ ಮುಖವಿಟ್ಟು
ಆಚೆ ಕಣ್ಣ ತೂರಿಸಿದ್ದಾಳೆ,
ತುಂಬಿಕೊಳ್ಳುತ್ತಿದ್ದಾಳೆ ಕಣ್ಣ ಕೊಳ,
ಬಣ್ಣಬಣ್ಣದ ಮೀನು ಕಪ್ಪೆಗಳ ಈಜು
ಸುಳಿಸುಳಿಯಲ್ಲೂ ಅಲೆ ಅಲೆಯಲ್ಲೂ
ಚುಕ್ಕಿ ಇಟ್ಟು ರಂಗವಲ್ಲಿಯ
ಹೆಣೆಯುತ್ತಿದ್ದಾಳೆ...
'ಇದೇನು ಹುಚ್ಚು!'-
ಅಂದವರ ಮಾತಿಗೆ ಮಣೆ ಹಾಕದೇ
ಜೀಕುತ್ತಿದ್ದಾಳೆ
ಅವಳ ಸುತ್ತಲೂ
ಕಾಮನಬಿಲ್ಲು ಕಮಾನು ಕಟ್ಟಿದೆ..!
ಇದೆಲ್ಲ ನೋಡದೆಯೂ
ನೋಡಿದ ನಾನು,
ಚಿತ್ತವಿಟ್ಟು ಕೂತಿದ್ದೇನೆ ಕಾದಿದ್ದೇನೆ;
ಆ ಚಿತ್ತಾರದ ಕನಸು ಚೀತ್ಕಾರವಾಗದಿರಲಿ
ಎಂದೇ
ರಂಗೋಲಿಗೆ ಅನುಗಾಲವೂ
ಅಂಗಳವಾಗಿದ್ದುಬಿಡಲು
ನಿಶ್ಚಯಿಸಿದ್ದೇನೆ...
-ವಿಜಯಕಾಂತ ಪಾಟೀಲ