ಜೇನ ದನಿಯವಳೇ...
ಕಣ್ಣಲ್ಲಿ ಮಡುಗಟ್ಟಿದ ವಿಷಾದದ ಛಾಯೆ ಹೊತ್ತು, ತೂತು ಬಿದ್ದ ಜೋಳಿಗೆ ತುಂಬ ಕನಸು ತುಂಬಿಕೊಂಡು, ಹೊತ್ತು ಗೊತ್ತಿಲ್ಲದ ಫಕೀರಂತೆ ಹಗಲಿರುಳು ಅಲೆಯುತ್ತೇನೆ. ನಿನ್ನ ಜೀವ ತುಂಬಿದ ಬೊಗಸೆ ಕಂಗಳ ಕಿರುಮಿಂಚಿಗೆ, ತುಟಿಯಂಚಿನ ಹೊಂಗನಸಿನ ಕಿರುನಗೆಗೆ ಕಾತರಿಸಿ ಕಾಯುತ್ತೇನೆ. ಅದು ಇನ್ನೆಂದೂ ದಕ್ಕಲಾರದೆಂಬ ಕಹಿ ಸತ್ಯದ ಅರಿವಿದ್ದು ಅರಸುತ್ತೇನೆ; ಹುಚ್ಚನಂತೆ! ಈ ಪಾಪಿ ಮನಸಿಗೆ ಅದೆಷ್ಟು ಸಮಜಾಯಿಷಿ ನೀಡಿದರೂ, ಜಗತ್ತಿನ ಸಕಲ ಸುಖಗಳ ತಂದು ಅದರೆದುರು ಹರವುತ್ತೇನೆಂದರೂ ಅದು ಹಠಬಿಡದೆ ಕಡುಗಪ್ಪಗಣ್ಣ ಸುಂದರಿಯ ಮೋಹದ ದಾಹದಿಂದ ಆಚೆ ಬರುವ ಲಕ್ಷಣ ಕಾಣುತ್ತಿಲ್ಲ. ದೇವರು ಮನಸ್ಸು ನೀಡದಿದ್ದರೆ? ಈ ರೀತಿ ಅದು ಮೊಂಡು ಹಠ ಹೂಡುವ ಸಂದರ್ಭ ಬರುತ್ತಿರಲಿಲ್ಲವೇನೋ?
ಅದೊಂದು ದಿನ ಆಕಾಶ ಬಣ್ಣದ ಚೂಡಿ, ಮೊಲದ ಬಿಳುಪಿನ ವೇಲು ಧರಿಸಿ ಸಾಕ್ಷಾತ್ ಧರೆಗಿಳಿದ ಅಪ್ಸರೆಯಂತೆ ಪ್ರತ್ಯಕ್ಷಳಾದೆ ನೋಡು, ಎದೆ ಬಡಿತದ ವೇಗ ಇಮ್ಮಡಿಯಾಗಿತ್ತು. ಅಸಂಖ್ಯ ಗೆಳೆತಿಯರ ಮಧ್ಯೆ ಚೆಲುವಿನ ಎರಕ ಹೊಯ್ದಂತಿದ್ದ ನಿನ್ನ ಕಂಡು ಮನಸ್ಸು ಬೇಲಿ ಜಿಗಿದ ಮಂಗನಂತೆ ನಿನ್ನ ಹಿಂದಿಂದೆಯೇ ಸುತ್ತಿತ್ತು. ನಿನ್ನ ಸ್ನೇಹ ಮಾಡಬೇಕು, ಎದೆಯೊಳಗಿನ ಒಲವ ವೇದನೆಯನ್ನು ನಿನ್ನೆದುರು ಹಂಚಿಕೊಳ್ಳಬೇಕು., ಅಪ್ಪಬೇಕು, ಮುದ್ದಾಡಬೇಕು ಎಂಬ ತುಂಬು ಹಂಬಲದ ನನಗೆ ಅದೊಂದು ದಿನ ನೀನು ಒಂಟಿಯಾಗಿ ಸಿಕ್ಕಿದ್ದು ಹಿಗ್ಗು ತಂದಿತ್ತು. ಅದೆಲ್ಲಿತ್ತೋ ಧೈರ್ಯ. ಎಲ್ಲ ಒಟ್ಟುಗೂಡಿಸಿ "ರ್ರೀ ಪ್ರೇಮಾ ನಿಮ್ಮ ಕಂಡಾಗಿನಿಂದ ಮನಸ್ಸು ಗಾಳಕ್ಕೆ ಸಿಕ್ಕ ಮೀನಾಗಿದೆ ಕಣ್ರೀ... ಅದು ಯಾವುದಕ್ಕೂ ಸರಿಹೋಗ್ತಾ ಇಲ್ಲ. ಅದಕ್ಕೆ ನಿಮ್ಮ ಮೇಲೆ ತುಂಬ ಇಷ್ಟ. ನಿಮ್ಮನ್ನು ಹೂ ಹಾಗೆ ನೋಡ್ಕೋತೀನಿ ಅನ್ನುತ್ತೆ. ಪ್ಲೀಸ್ ಒಪ್ಕೊಳ್ಳಿ... ಒಂದ್ಸಾರಿ ಐ ಲವ್ ಯು ಹೇಳ್ರಿ ಅಂತ ದುಂಬಾಲು ಬಿದ್ದು ನಿನ್ನ ಕೇಳಿಬಿಟ್ಟೆ. ನೀನು ಕೊಟ್ಟ ಉತ್ತರ ನನ್ನನ್ನು ತಬ್ಬಿಬ್ಬುಗೊಳಿಸಿತ್ತು.
ಕಿರಣ್... ಸಾರಿ ಪ್ಲೀಸ್... ನಂಗೀಗಾಗಲೆ ಎಂಗೇಜ್‌ಮೆಂಟ್ ಆಗಿದೆ. ಮುಂದಿನ ತಿಂಗಳು ನನ್ನ ಮದುವೆ. ನನ್ನ ವುಡ್‌ಬಿ ಅಮೆರಿಕಾದಲ್ಲಿದ್ದಾನೆ. ನಾವಿಬ್ಬರೂ ಒಬ್ಬರಿಗೊಬ್ಬರು ಮೆಚ್ಚಿಕೊಂಡು ನಿರ್ಧರಿಸಿರೋ ಮದ್ವೆ ಇದು. ದಯವಿಟ್ಟು ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಿ ಅಂದವಳಿಗೆ ನನ್ನ ಕಣ್ಣಲ್ಲಿ ಸುರಿಯುವ ಧಾರಾಕಾರ ಕಣ್ಣೀರೆ ಉತ್ತರವಾಗಿತ್ತು. ಮನಸ್ಸು ಎಂದೊಂದೂ ಸರಿಪಡಿಸದ ಕಾಯಿಲೆಯ ಬೆನ್ನೇರಿ ಖಿಸಕ್ಕನೆ ನಕ್ಕಿತ್ತು.
ಅಂದಿನಿಂದ ಎಷ್ಟೋ ಸಾರಿ ಈ ನನ್ನ ಹಾಳು ಮನಸ್ಸಿಗೆ ಸಮಾಧಾನ ಹೇಳಲೆತ್ನಿಸಿದ್ದೇನೆ. ಸಂತೈಸಲು ತುಂಬಾ ಕಷ್ಟ ಪಟ್ಟಿದ್ದೇನೆ. ದಬಾಯಿಸಿ ಕೈಚೆಲ್ಲಿದ್ದೇನೆ. ಊಹುಂ... ಅದು ಪುಟ್ಟ ಮಗುವಿನಂತೆ ಮುನಿದು ಮೂಲೆ ಹಿಡಿದು ಕುಳಿತುಬಿಟ್ಟಿದೆ. ಸಂತೈಸುವ ನೀನೇ ಇನ್ನೊಬ್ಬನ ಕೈಗೆ ಕೊರಳೊಡ್ಡಿ ಹಕ್ಕಿಯಂತೆ ಹಾರಿಬಿಟ್ಟಿದ್ದೀಯಾ. ನಾನಿಲ್ಲಿ ಅನಾಥ ಪ್ರೇತದಂತೆ, ಸ್ಮಶಾನವಾಸಿಯಾಗಿ ರಾತ್ರಿಯಿಡೀ ಕನವರಿಸುತ್ತಾ, ನೀನೆಂದೂ ಬಾರದ ದಾರಿಗೆ ಕಣ್ಣರಳಿಸಿ, ದೀಪ ಹಿಡಿದು, ಹೂವು ಚೆಲ್ಲಿ, ಜೋಗುಳ ಹಾಡುತ್ತಾ ಕಾದಿದ್ದೇನೆ... ಕಾಯುತ್ತೇನೆ... ಕಾಯುತ್ತಲೇ ಇರುತ್ತೇನೆ... ಜವರಾಯ ಬಂದು ಉಸಿರ ಕಸಿದೊಯ್ಯುವವರೆಗೂ...
- ನಿನ್ನವನು
-ನಾಗೇಶ ಜಿ. ನಾಯ್ಕ