ಮಾಡರ್ನ್ ಕೃತಿ ಚೌರ್ಯ

Updated on: 

ಕೃತಿ ಚೌರ್ಯವನ್ನು ಈ ರೀತಿಯೂ ಮಾಡಬಹುದು ಎಂದು ನನಗೆ ಗೊತ್ತಾಗಿದ್ದು ಇದೇ ಮೊದಲು. ಮೊದಲಿಗೆ ಆಶ್ಚರ್ಯವಾಯಿತು. ನಂತರ ಸಿಟ್ಟು, ನಂತರ ಹತಾಶೆ, ನಂತರ ಸಮಾಧಾನಗೊಂಡು "ಹೋಗಲಿ ಬಿಡು ಈ ರೀತಿಯಾದರೂ ನನ್ನ ಕವನ ಪ್ರಚಾರವಾಯಿತಲ್ಲ" ಎಂದು ಸುಮ್ಮನಾದೆ. ಇದೆಲ್ಲ ಆಗಿದ್ದು ಹೀಗೆ.....
ಒಂದು ಮುಂಜಾನೆ ಎದ್ದಾಗ ಅದಾಗಲೇ 8 ದಾಟಿತ್ತು. ಎದ್ದು ಮೊದಲು ಸಿಸ್ಟಮ್ ಆನ್ ಮಾಡಿ ನನ್ನ ಫೇಸ್‌ಬುಕ್ ಖಾತೆಯನ್ನ ಲಾಗಿನ್ ಮಾಡಿ ನಂತರ ನಿತ್ಯ ಕರ್ಮಗಳಲ್ಲಿ ಮಗ್ನನಾದೆ. ಎದ್ದಕೂಡಲೇ ಎಲ್ಲರೂ ದೇವರ ಮುಖ, ತಂದೆ ತಾಯಿಯ ಮುಖವನ್ನ ನೋಡಿದರೆ, ನನಗೆ ಮಾತ್ರ ಎದ್ದ ತಕ್ಷಣ ಫೇಸ್‌ಬುಕ್ ನೋಡೋ ಚಾಳಿ. ಇದು ನನಗೆ ಮಾತ್ರ ಇದೆಯೋ ಅಥವಾ ಇನ್ನಾರಿಗಾದರೂ ಇದೆಯೋ.... ಗೊತ್ತಿಲ್ಲ. ನಿತ್ಯ ಕರ್ಮಗಳನ್ನ ಮುಗಿಸಿ ಮತ್ತೆ ಬಂದು ಸಿಸ್ಟಮ್ ಮುಂದೆ ಕುಳಿತು ಫ್ರೆಂಡ್ಸ್ ಜೊತೆ ಚಾಟ್ ಮಾಡುತ್ತಿದ್ದೆ. ಹೊಸ ಹೊಸ ಕವನಗಳನ್ನ ಬರೆದು ಅವನ್ನು ಅಪ್‌ಲೋಡ್ ಮಾಡುವುದು ನನ್ನ ನೆಚ್ಚಿನ ಹವ್ಯಾಸ. ಆ ದಿನವೂ ಸಹ ಕೆಲವೊಂದು ಫೋಟೋಸ್ ಮತ್ತು ಕವನಗಳನ್ನು ಅಪ್‌ಲೋಡ್ ಮಾಡಿದೆ. ಅಲ್ಲಿಗಾಗಲೇ 10 ಗಂಟೆ ದಾಟಿತ್ತು. ಆಗ ಆನ್‌ಲೈನ್‌ಗೆ ಬಂದ ಸ್ನೇಹಿತನೊಬ್ಬ ಕವಿಗೋಷ್ಠಿಯಿರುವುದನ್ನು ನೆನಪಿಸಿದ, ಅವನಿಗೆ ಅಲ್ಲಿಗೂ ಬರಲು ಹೇಳಿ ಕವನವೊಂದನ್ನು ತೆಗೆದುಕೊಂಡು ಹೊರಟೆ.
ನಾನು ತಲುಪುವದರಲ್ಲಾಗಲೇ ಕವಿಗೋಷ್ಠಿ ಶುರುವಾಗಿತ್ತು. ನಾನೂ ಹೆಸರನ್ನು ಬರೆಸಿ ಬಂದು ನನ್ನ ಸರತಿಗಾಗಿ ಕಾದು ಕುಳಿತೆ. ಐದಾರು ಜನರ ನಂತರ ಒಬ್ಬ ಯುವಕ ಕವನ ವಾಚಿಸಲು ವೇದಿಕೆ ಏರಿದ. ನೋಡಲು ಕಾಲೇಜು ಹುಡುಗನಂತೆ ಕಾಣುತ್ತಿದ್ದ. ತನ್ನ ಪರಿಚಯವನ್ನು ಮಾಡಿಕೊಂಡು ತಾನು ಬರೆದಿದ್ದ ಕವನವನ್ನ ಓದತೊಡಗಿದ. ಒಮ್ಮೆಲೇ ನನಗೆ ಶಾಕ್ ಹೊಡೆದಂತಾಯಿತು. ನನ್ನ ಸ್ನೇಹಿತನೂ ನನ್ನ ಮುಖವನ್ನೊಮ್ಮೆ ಆಶ್ಚರ್ಯದಿಂದ ನೋಡಿದ, ಏಕೆಂದರೆ ಕೆಲವು ದಿನಗಳ ಹಿಂದೆ ಆ ಕವನವನ್ನು ನಾನೇ ಬರೆದು ನನ್ನ ಫೇಸ್‌ಬುಕ್ ಖಾತೆಗೆ ಅಪ್‌ಲೋಡ್ ಮಾಡಿದ್ದೆ. ನನ್ನ ಎಲ್ಲಾ ಸ್ನೇಹಿತರೂ ಅದನ್ನು ಮೆಚ್ಚಿಕೊಂಡು ಲೈಕ್, ಶೇರ್ ಮಾಡಿದ್ದರು. ಅದೇ ಕವನವನ್ನ ಅಲ್ಲಿ ಓದಲು ತೆಗೆದುಕೊಂಡು ಬಂದಿದ್ದೆ. ಆದರೆ ಅದೇ ಕವನವನ್ನ ಬೇರೊಬ್ಬ ಯುವಕ ಓದುತ್ತಿದ್ದುದನ್ನು ಕಂಡು ನನಗೆ ಸಿಟ್ಟು, ಆಶ್ಚರ್ಯ, ಹತಾಶೆ ಮೂರೂ ಒಟ್ಟಿಗೆ ಬಂದವು. ಹೇಗೋ ಸುಧಾರಿಸಿಕೊಂಡು ಕುಳಿತೆ. ನಂತರ ನನ್ನ ಹೆಸರನ್ನು ಕೂಗಿದಾಗ ವೇದಿಕೆಗೆ ಹೋಗಿ ಬೇರೆ ಕವನವನ್ನ ಓದಿದೆ. ಮತ್ತೆ ನನ್ನ ಸಿಟ್ಟು ನೆತ್ತಿಗೇರುವಂತೆ ಮಾಡಿದ್ದು ಅದೇ ಕವನಕ್ಕೆ ಮೊದಲ ಬಹುಮಾನ ಬಂದಾಗ. ನನ್ನ ಸ್ನೇಹಿತನೋ ವೇದಿಕೆಗೇ ಹೋಗಿ ನನ್ನ ಕವನವನ್ನು ಕದ್ದುತಂದು ಓದಿದ್ದಲ್ಲದೆ, ಬಹುಮಾನವನ್ನೂ ಬಾಚಿಕೊಂಡ ಯುವಕನಿಗೆ ಹೊಡೆಯಲು ತಯಾರಿದ್ದ. ಆದರೆ ಬೇಡವೆಂದು ನಾನೇ ತಡೆದು ನಿಲ್ಲಿಸಿ ಸಮಾಧಾನ ಮಾಡಿದೆ.
ಬಹುಮಾನ ವಿತರಣೆಯ ನಂತರ ನಾನು ಹೋಗಿ ಯುವಕನನ್ನು ಮಾತನಾಡಿಸಿದೆ. ಕವನವು ಚೆನ್ನಾಗಿದೆ ಯಾರು ಬರೆದಿದ್ದು ಎಂದು ಕೇಳಿದಾಗ, ಅವನು ಅದನ್ನು ಫೇಸ್‌ಬುಕ್‌ನಿಂದ ತಂದಿದ್ದಾಗಿ ನಿಜ ಹೇಳಿ ನನ್ನ ಸ್ನೇಹಿತನ ಕೈಯಿಂದ ಬಚಾವಾದ. ಹೋಗಲಿ ಬಿಡು ಎಂದು ಸುಮ್ಮನಾಗಿ ನಾನು ನನ್ನ ಸ್ನೇಹಿತನು ಅಲ್ಲಿಂದ ಬಂದೆವು. ನಂತರ ಒಂದು ದಿನ ಒಂದು ದಿನಪತ್ರಿಕೆ ತಂದ ನನ್ನ ಸ್ನೇಹಿತ "ಮೊನ್ನೆ ಅವನನ್ನು ಸುಮ್ನೆ ಬಿಟ್ಟೆ, ಇವನನ್ನ ಏನು ಮಾಡ್ತೀ...?" ಎಂದು ಪತ್ರಿಕೆಯನ್ನ ನನ್ನ ಮುಂದೆ ಹಿಡಿದ. ಅದರಲ್ಲಿ ನನ್ನ ಇನ್ನೊಂದು ಕವನ ಬೇರೆ ಹೆಸರಿನಲ್ಲಿ ಪ್ರಿಂಟಾಗಿದ್ದನ್ನು ಕಂಡು ನನಗೆ ಏನು ಮಾಡಬೇಕೆಂದು ತೋಚಲಿಲ್ಲ..... ಆವತ್ತೇ ತೀರ್ಮಾನ ಮಾಡಿದೆ ಇನ್ನೆಂದೂ ಕವನಗಳನ್ನ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವುದಿಲ್ಲ.... ಬೇಕಾದರೆ ಹಾಗೇ ನನ್ನ ಪುಸ್ತಕದಲ್ಲೇ ಇರಲಿ ಎಂದು ತೀರ್ಮಾನಿಸಿದೆ....!

- ರಾಫವೇಂದ್ರ ಉಪ್ಪಾರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com