

ಶ್ರಾದ್ಧ ಸತ್ತ ಮೇಲೆ ಮಾಡೋದಾ? ಬದುಕಿದ್ದಾಗಲೇ ಮಾಡೋದಾ? ಬಹುಶಃ ಇವೆರಡು ದ್ವಂದ್ವ ಪ್ರಶ್ನೆಗಳು ಹುಟ್ಟಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಗಳ ತಂದೆ ಚಂದ್ರಶೇಖರ ಶಾಸ್ತ್ರಿಗಳು ಮಡಿಯುವಾಗ. ಇನ್ನೇನು ಚಂದ್ರಶೇಖರ ಶಾಸ್ತ್ರಿಗಳ ಪ್ರಾಣ ಹಾರಿಹೋಗುವುದರಲ್ಲಿತ್ತು. ಆಗ ಅವರು ಮಗನೆದುರು ಈ ಮಾತುಗಳನ್ನು ಪೋಣಿಸಿಟ್ಟರು, 'ಇನ್ನು ಈ ಶರೀರದ ಕಥೆ ಮುಗೀತು. ತೆಗೆದುಕೊಂಡು ಹೋಗಿ ಸುಟ್ಟು ಹಾಕು. ಸಾಲ ಮಾಡಿ ಶ್ರಾದ್ಧ ಮಾಡಬೇಡ. ಎರಡು ವರ್ಷ ನೀನು ನನ್ನ ಸೇವೆ ಮಾಡಿದ್ದೀಯಲ್ಲ... ನನ್ನ ಶ್ರಾದ್ಧ ಮಾಡಿದಂತಾಯ್ತು. ಇನ್ನು ತಾಯ್ನೆಲದ ಋಣ ತೀರಿಸಲು ಒಂದು ಶಾಲೆ ತೆರೆದು ಮಕ್ಕಳಿಗೆ ವಿದ್ಯೆ ಕೊಡು. ಜತೆಗೆ ಅನ್ನವನ್ನೂ ಹಾಕು'. ಈಗ ಹೇಳಿ ಶ್ರಾದ್ಧ ಯಾವಾಗ ಮಾಡೋದು?