ಮಕರಂದ/ದೋಣಿ

ಕಳೆದು ಹೋಗದಿರಲಿ ಮಧುರ ಸ್ನೇಹ

ಕಳೆದು ಹೋಗದಿರಲಿ ಮಧುರ ಸ್ನೇಹ
Published On :

ಅಂದು ಸಂಜೆ ಜೋರಾದ ಮಳೆ ಬರುತ್ತಿತ್ತು. ನಾನು ಕಿಟಕಿಯಿಂದ ಆ ಮಳೆರಾಯನ ಸೊಗಸನ್ನು ನೋಡುತ್ತ, ನೆನಪುಗಳನ್ನು ಬರೆದಿಟ್ಟಿದ್ದ ಮನದ ಪುಟಗಳನ್ನು ತೆರೆದು ನಮ್ಮ ಹೈಸ್ಕೂಲು, ಕಾಲೇಜು ಜೀವನದ ಗೆಳತಿಯರ ಬಗ್ಗೆ ಆ ಮಧುರ ಕ್ಷಣಗಳ ಬಗ್ಗೆ ಯೋಚಿಸುತ್ತಾ ಕುಳಿತಿದ್ದೆ. ಹೇಗೆಲ್ಲಾ ಆಟವಾಡಿಕೊಂಡು ಬೆಳೆದ ನಾನು, ನನ್ನ ಗೆಳತಿಯರು, ಈಗಲು ಏಕೆ ಆ ಆತ್ಮೀಯತೆಯನ್ನು ಕಳೆದುಕೊಂಡಿದ್ದೇವೆ ಎಂದು ಅನ್ನಿಸಲು ಪ್ರಾರಂಭವಾಯಿತು. ಎಲ್ಲಾ ವಿಷಯವನ್ನು ಹಂಚಿಕೊಳ್ಳುತ್ತಿದ್ದೆವು. ಒಟ್ಟಿಗೆ ಊಟ ಮಾಡುತ್ತ ಹರಟೆ ಹೊಡೆಯುತ್ತಿದ್ದೆವು. ಆ ದಿನಗಳೆಲ್ಲ ಎಲ್ಲಿ ಮಾಯವಾದವೊ?
 ಯೋಚನೆ ಮುಂದುವರಿದಿತ್ತು... ಪ್ರತಿ ದಿನವೂ ಅಷ್ಟೊಂದು ಖುಷಿ. ಸಂಭ್ರಮದಿಂದ ಕಳೆಯುತ್ತೇವೆ. ಆದರೆ ಶಿಕ್ಷಣದ ಅವಧಿ ಮುಗಿದು ಮುಂದಿನ ಉನ್ನತ ಶಿಕ್ಷಣಕ್ಕೆಂದು ಬೇರೆ ಬೇರೆ ಕಡೆಗೆ ಹೋದಾಗ ಹಲವು ಹೊಸ ಮುಖಗಳ ಪರಿಚಯವಾಗುವುದೇನೊ ನಿಜ, ಹೊಸ ಗೆಳೆಯರು ಸಿಗುವುದೂ ನಿಜ. ಆದರೆ ಹಳೆ ಗೆಳೆಯ- ಗೆಳತಿಯರು ಎಲ್ಲಿ ಮರೆಯಾಗುವರು? ತಿಂಗಳಿಗೊಂದು ಫೋನ್ ಕಾಲ್ ಮಾಡಲೂ ಆಗದಷ್ಟು ಬ್ಯುಸಿ ನಾವಾಗಿರುತ್ತೇವೆಯೆ ಎಂಬ ಪ್ರಶ್ನೆ ಮೂಡುತ್ತದೆ. ಇದು ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಆಗುವ ಬೇಸರದ ಅನುಭವ.
ನಾವು ಫೋನ್ ಮಾಡಲೆಂದು ಅವರು, ಅವರು ಫೋನ್ ಮಾಡಲೆಂದು ನಾವು... ಏಕೆ ಈ ರೀತಿಯ ಮನೋಭಾವ? ತರಗತಿಯಲ್ಲಿದ್ದ ಎಲ್ಲಾ ಸ್ನೇಹಿತರಲ್ಲದೆ, ನಮ್ಮ ಆತ್ಮೀಯರೆಂದು ಗುರುತಿಸಿಕೊಂಡವರ ಬಳಿಯಾದರೂ, ಒಂದೈದು ನಿಮಿಷ ಪರಸ್ಪರ ಮಾತನಾಡಬಲ್ಲದಲ್ಲವೆ? ಇದು ಚಿಕ್ಕ ವಿಷಯವೇ ಎನಿಸಿದರೂ ಸಹ ಹೀಗೆ ಮಾಡಿದಾಗ ಆಗುವ ಖುಷಿ, ಕಳೆದು ಹೋದ ದಿನಗಳ ಮೆಲುಕು ಮನಸ್ಸಿಗೆ ಮುದ ನೀಡಬಲ್ಲದು.
 ಸ್ನೇಹ- ಆತ್ಮೀಯತೆಯ ಭಾವ ಕಳೆದು ಹೋಗದಂತೆ ನೋಡಿಕೊಳ್ಳುವುದು ನಮ್ಮ ಮನೋಭಾವದಲ್ಲಿಯೆ ಅಡಗಿದೆ. ಇದರಿಂದ ಕಳೆದುಕೊಳ್ಳುವುದು ಒಂದೆರೆಡು ರೂಪಾಯಿಯ ಕರೆನ್ಸಿಯೇ ಆದರೂ ಅದರಿಂದ ಸಿಗುವ ನೆನಪುಗಳು ಮತ್ತು ಸಂತೋಷ ಬೆಲೆಗೆ ನಿಲುಕದ್ದು. ಉತ್ತಮ ಸ್ನೇಹ ಸಂಬಂಧಗಳು ಮಳೆಯ ನೀರು ಹರಿದು ಹೋದಂತೆ ಹರಿದು ಹೋಗಲು ಬಿಡದೆ ಅವುಗಳನ್ನು ಕೊನೆಯವರೆಗೂ ಕಾಪಾಡಿಕೊಂಡು ಹೋಗಬಹುದಲ್ಲವೆ?

- ಹರ್ಷಿತ ಹಿರೇಮಠ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.